Mar 18, 2022, 12:28 PM IST
ಕಾರವಾರ(ಮಾ.18): ರಾಜ್ಯದ ಪ್ರಸಿದ್ಧ ಹಾಗೂ ಜನಪದ ಸಂಸ್ಕೃತಿಯ ಜೀವ ಚೈತನ್ಯ ಜಾತ್ರೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ ಅದ್ಧೂರಿಯಾಗಿ ನೇರವೇರಿದೆ. ಭಕ್ತರನ್ನು ಪೊರೆವ ಶಿರಸಿಯ ಮಾರಮ್ಮ ಮಾರಿಗುಡಿಯಿಂದ ಅಲಂಕೃತಗೊಂಡ ರಥದಲ್ಲಿ ಆರೂಢಳಾಗಿ ಹಾದಿ ಬೀದಿಯಲ್ಲಿ ನಿಲ್ಲುವ ಭಕ್ತರ ಕಡೆಗೆ ತನ್ನ ದೃಷ್ಠಿಯನ್ನು ಬೀರುತ್ತಾ ದೇವಳದ ರಾಜಮಾರ್ಗದಲ್ಲಿ ಸಾಗುತ್ತಾ ಎಲ್ಲರನ್ನೂ ಆಶೀರ್ವದಿಸಿದ್ದಾಳೆ. ಬಳಿಕ ಬಿಡಕಿಬೈಲಿನ ಜಾತ್ರೆ ಗದ್ದುಗೆಯಲ್ಲಿ ದೇವಿ ವಿರಾಜಮಾನಳಾಗಿದ್ದು, ನಾಳೆಯಿಂದ ಏಳು ದಿನಗಳ ಕಾಲ ಗದ್ದುಗೆಯಲ್ಲಿ ವೀರಾಜಮಾನಳಾಗಿಯೇ ಮಾರಿಕಾಂಬೆ ಕ್ಷೇತ್ರಕ್ಕೆ ಬರೋ ಭಕ್ತರನ್ನು ಪೊರೆಯಲಿದ್ದಾಳೆ.
James 2022: ಅಪ್ಪು ಕೊನೆ ಚಿತ್ರವನ್ನು ನೋಡಿ ಪುನೀತರಾದ ಅಭಿಮಾನಿಗಳು
ನಸುಕಿನ ಜಾವದಲ್ಲೇ ರಥವನ್ನು ಏರಿದ್ದ ತಾಯಿ ಮಾರಿಕಾಂಬೆಯ ರಥೋತ್ಸವ ನೋಡಿ ಕಣ್ತುಂಬಿಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ರಥೋತ್ಸವದ ಮೆರವಣಿಗೆಯುದ್ದಕ್ಕೂ ಸೇರಿದ ಸಹಸ್ರಾರು ಭಕ್ತರು ಶ್ರೀದೇವಿಗೆ ಬಾಳೆ ಹಣ್ಣು, ದುಡ್ಡು, ಎಸೆದು ಕೃತಾರ್ಥರಾದರು. ಇನ್ನು ಜಾತ್ರೆಗೆ ಆಗಮಿಸಿದ ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತಾ ದೇವಿಗೆ ಸೇವೆ ಸಲ್ಲಿಸಿದ್ರೆ, ಹಲವು ಮಹಿಳೆಯರು, ಪುರುಷರು ದೇವಿಯನ್ನು ಆವಾಹನೆ ಮಾಡಿಕೊಂಡು ಆವೇಶಭರಿತರಾಗಿ ಕುಣಿದು ಮಾರಿಕಾಂಬೆ ತಾಯಿಗೆ ಸೇವೆ ಅರ್ಪಿಸಿದರು. ಮತ್ತೊಂದೆಡೆ ಕ್ಷೇತ್ರಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾಧಿಗಳ ಸುರಕ್ಷತೆಗಾಗಿ ಶಿರಸಿ ನಗರದಾದ್ಯಂತ ಪೊಲೀಸರಿಂದ ಭಾರೀ ಭಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಒಟ್ಟಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜಾತ್ರೆಯಲ್ಲಿ ಒಂದಾಗಿರುವ ಮಾರಿಕಾಂಬೆಯ ಜಾತ್ರಾ ರಥೋತ್ಸವ ಅದ್ಧೂರಿಯಾಗಿ ನಡೆದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.