Karwar: ಸೀಬರ್ಡ್ ನೌಕಾನೆಲೆಗೆ ಭೂಮಿಕೊಟ್ಟ ಹಾಲಕ್ಕಿ ಒಕ್ಕಲಿಗರಿಗಿಲ್ಲ ಉದ್ಯೋಗ..!

Jan 30, 2022, 11:09 AM IST

ಕಾರವಾರ(ಜ.30):  ಅದು ದೇಶದ ಅತೀ ದೊಡ್ಡ ಸೀಬರ್ಡ್ ನೌಕಾನೆಲೆ. ಅದರ ನಿರ್ಮಾಣಕ್ಕೆ ಹಾಲಕ್ಕಿ ಒಕ್ಕಲಿಗರ ಸಮುದಾಯ ಸೇರಿದಂತೆ  ಹಲವರು ಸಾವಿರಾರು ಎಕರೆ ಜಮೀನು ಬಿಟ್ಟಕೊಟ್ಟಿದ್ದರು.‌ ಜಮೀನು ಬಿಟ್ಟು ಕೊಡುವ ವೇಳೆ ಸರಕಾರ ಸಂತ್ರಸ್ತರಿಗೆ ಉದ್ಯೋಗದ ಭರವಸೆ ನೀಡಿತ್ತಾದ್ರೂ, ಪ್ರಸ್ತುತ, ಸಂತ್ರಸ್ತರಿಗೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತ್ಯ ನೀಡದೆ ಇತರ ರಾಜ್ಯದ ಜನರಿಗೆ ಮಣೆ ಹಾಕುತ್ತಿದೆ ಎಂಬ ಆರೋಪ ಎದುರಾಗಿದೆ. ಒಂದೆಡೆ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿಲ್ಲ, ಮತ್ತೊಂದೆಡೆ ಉದ್ಯೋಗ ವ್ಯವಸ್ಥೆಯನ್ನೂ ಮಾಡಿಕೊಡದ ಕಾರಣ ಹಾಲಕ್ಕಿ ಒಕ್ಕಲಿಗರ ಸಮುದಾಯದ ಜನರು ಬಹಿರಂಗವಾಗಿ ತಮ್ಮ ಅಸಮಾಧಾನ ತೋರಿದ್ದಾರೆ. 

ಇಷ್ಟು ದಿನಗಳ ಕಾಲ ತಮಗೆ ಉದ್ಯೋಗ ದೊರೆಯುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಸಂತ್ರಸ್ತರು ತಮಗಾದ ಮೋಸದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಉದ್ಯೋಗಕ್ಕಾಗಿ ಇದೀಗ ಹಾಲಕ್ಕಿ ಸಮುದಾಯದ ಜನರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಒಂದೆಡೆ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಫಲ ದೊರಕಿಲ್ಲ. ಮತ್ತೊಂದೆಡೆ‌ ಈ ಸಂತ್ರಸ್ತರಿಗೆ ಈವರೆಗೂ ಉದ್ಯೋಗ ವ್ಯವಸ್ಥೆಯನ್ನು ಒದಗಿಸದ ಕಾರಣ ಹಾಲಕ್ಕಿ ಸಮುದಾಯದ ಜನರು ನೋವು ವ್ಯಕ್ತಪಡಿಸಿದ್ದಾರೆ. 

Bengaluru: ಪಾರ್ಕಿಂಗ್‌ ವಿಚಾರಕ್ಕೆ ನಡು ರಸ್ತೆಯಲ್ಲೇ ಎಎಸ್‌ಐ, ಅಂಗವಿಕಲೆ ಮಾರಾಮಾರಿ!

ಹಾಲಕ್ಕಿ ಜನಾಂಗವನ್ನು ಈ ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ದೊಡ್ಡ ಹೋರಾಟ ನಡೆದ ಪರಿಣಾಮ ರಾಜ್ಯ ಸರ್ಕಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಬಗ್ಗೆ ಹಲವರು ಮುಖಂಡರು ದೆಹಲಿಗೆ ತೆರಳಿ ಐದಾರು ವರ್ಷದಿಂದ ಒತ್ತಡ ಹೇರಿದ್ದರೂ ಇಂದಿಗೂ ಪರಿಶಿಷ್ಟ ಪಂಗಡಕ್ಕೆ ಮಾತ್ರ ಸೇರ್ಪಡೆಯಾಗಿಲ್ಲ. ಈ ನಿಟ್ಟಿನಲ್ಲಿ ಇದೇ ಸಮುದಾಯಕ್ಕೆ ಸೇರಿದ ಜಾನಪದ ಕೋಗಿಲೆ ಖ್ಯಾತಿಯ ನಾಡೋಜ ಪದ್ಮಶ್ರೀ ಸುಕ್ರಿ ಬೊಮ್ಮುಗೌಡ ಕೂಡಾ ಹೋರಾಟಕ್ಕೆ ಕೈಜೋಡಿಸಿದ್ದರು. ಕಳೆದ 2000ನೇ ಇಸವಿಯಿಂದಲೂ ನಡೆಸಿಕೊಂಡು ಬರುತ್ತಿರುವ ಹೋರಾಟಕ್ಕೆ ಯಾವುದೇ ಉತ್ತರ‌ ದೊರೆಯದ ಕಾರಣ ಕೇಂದ್ರ ಸರ್ಕಾರ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನ ವಾಪಸ್ ಮಾಡೋದಾಗಿ ತಿಳಿಸಿದ್ದರು. ಆದರೂ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ಈ ಸಮುದಾಯಕ್ಕೆ ನ್ಯಾಯ ಮಾತ್ರ ಸಿಕ್ಕಿಲ್ಲ. 

ಉದ್ಯೋಗಕ್ಕಾಗಿ ಸತತ 20 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ ಆದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಇನ್ನು ನಾವು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಸರ್ಕಾರ ಎಚ್ಚೆತ್ತು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ನಮ್ಮ ಹಕ್ಕಿಗಾಗಿ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಸಂತ್ರಸ್ತರು ಎಚ್ಚರಿಸಿದ್ದಾರೆ.