ಗಾಯಗೊಂಡು ಖುದ್ದು ಆಸ್ಪತ್ರೆಗೆ ಬಂದ ಕೋತಿ, ಹಠ ಹಿಡಿದು ಚಿಕಿತ್ಸೆ ಪಡೆದೇ ಹೋಯ್ತು!

Jun 6, 2020, 7:13 PM IST

ದಾಂಡೇಲಿ (ಜೂ. 06): ಕೇರಳದಲ್ಲಿ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಹಣ್ಣು ತಿಂದು ಮೃತಪಟ್ಟ ಘಟನೆ ಇನ್ನೂ ಚರ್ಚೆಯಾಗುತ್ತಿದ್ದರೆ, ಕರ್ನಾಟಕದಲ್ಲಿ ಗಾಯಗೊಂಡ ಕೋತಿಗೆ ಮಾನವೀಯ ಸ್ಪರ್ಶ ಸಿಕ್ಕಿದೆ.  ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಕೋತಿಯೊಂದು ಸನ್ನೆಯಿಂದಲೇ ಗಾಯ ತೋರಿಸಿ ಔಷಧಿ ಹಚ್ಚಿಸಿಕೊಂಡು ತೆರಳಿದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.

ಹೌದು, ನಿನ್ನೆ ದಾಂಡೇಲಿಯ ಪಾಟೀಲ್ ಆಸ್ಪತ್ರೆಗೆ ಕೋತಿಯೊಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಚಾನಕ್ಕಾಗಿ ಕೋತಿಯೊಂದು ಬಂದು, ಆಸ್ಪತ್ರೆಯ ಮುಂಬಾಗಿಲಿನ ಮುಂದೆ ಮೆಟ್ಟಿಲಲ್ಲಿ ಕೂತೇ ಬಿಟ್ಟಿತ್ತು. ಆಸ್ಪತ್ರೆಯ ಸಿಬ್ಬಂದಿಗಳೆಲ್ಲ ಗಾಬರಿಯಾಗಿ ಓಡಿಸೆಲೆತ್ನಿಸಿದರೂ ಅದು ಧೈರ್ಯ ಮಾಡಿ ಚಿಕಿತ್ಸೆಗಾಗಿ ಕೂತಲ್ಲಿಂದ ಎದ್ದೇಳಲೇ ಇಲ್ಲ.

ಇದನ್ನೂ ನೋಡಿ | ಪ್ರವಾಸಕ್ಕೆ ಹೊರಡಲು ರೆಡಿಯಾಗಿ, ಆದ್ರೆ ಸರ್ಕಾರದ ಈ ನಿಯಮ ಪಾಲಿಸಿ...

ಕೊನೆಗೆ ಆಸ್ಪತ್ರೆಗೆಂದು ಬಂದಿದ್ದ ವ್ಯಕ್ತಿಯೋರ್ವರು ತನ್ನ ಗೆಳೆಯನ ಮೂಲಕ ಔಷಧಿ ತರಿಸಿ, ಕೋತಿ ಗಾಯ ಮಾಡಿಕೊಂಡಿದ್ದ ಜಾಗಕ್ಕೆ ಔಷಧಿ ಹಚ್ಚಿದರು. ಸ್ವಲ್ಪ ಹೊತ್ತಿನ ಬಳಿಕ ಚಿಕಿತ್ಸೆ ಪಡೆದು ನಿಟ್ಟುಸಿರು ಬಿಟ್ಟ ಕೋತಿ ತನ್ನ ಪಾಡಿಗೆ ತಾನು ಹೊರಟು ಹೋಯಿತು. 

ಕೋತಿಗೆ  ಔಷಧಿ ಪಡೆದು ಖುಷಿಯಾಯ್ತಾದರೂ, ಆ ಮಹಾನುಭಾವ ಪ್ರಾಣಿಪ್ರಿಯ ತನ್ನ ಗೆಳೆಯನ ಮೂಲಕ ಔಷಧಿ ತರಿಸಿ, ಧೈರ್ಯ ಮಾಡಿ ಹಚ್ಚಿದ ಪರಿಯಂತೂ ಶ್ಲಾಘನೀಯ. ಇದನ್ನೆಲ್ಲಾ ಗಮನಿಸುತ್ತಿದ್ದ ದಾಂಡೇಲಿಯ ಹಿರಿಯ ಸಮಾಜ ಸೇವಕ ದಿನೇಶ್ ವ್ಯಾಸ್ ಅವರು ಈ ಎಲ್ಲ ಘಟನೆಗಳನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.