Aug 22, 2023, 3:52 PM IST
ಈ ಯುವಕನ ಹೆಸರು ಚಂದ್ರಶೇಖರ್ ಎಂ.ಕೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ನಿವಾಸಿ. ಕಳೆದ ಎಂಟು ವರ್ಷಗಳಿಂದ ದೂರದ ಸೌದಿ ಅರೇಬಿಯಾದ(Saudi Arabia) ರಿಯಾದ್‌ನಲ್ಲಿರೋ ಅಲ್ಫಾನರ್ ಸೆರಾಮಿಕ್ಸ್ ಅನ್ನೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದವರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ಡಿಸೆಂಬರ್ ನಲ್ಲಿ ಹಸೆಮಣೆ ಏರುವ ಮೂಲಕ ಹೊಸತೊಂದು ಬದುಕು ಕಟ್ಟಿಕೊಳ್ಳಬೇಕಿತ್ತು. ಆದರೆ ಅಂದುಕೊಂಡದ್ದು ಆಗಲೇ ಇಲ್ಲ. ಬದಲಾಗಿ ದೂರದ ಸೌದಿಯಲ್ಲಿ ತಾನು ಮಾಡದ ತಪ್ಪಿಗೆ ಅಮಾಯಕ ಚಂದ್ರಶೇಖರ್ ಕಂಬಿ ಹಿಂದೆ ಬಿದ್ದಿದ್ದಾರೆ. 2022ರ ನವೆಂಬರ್ ನಿಂದ ರಿಯಾದ್ ನ ಜೈಲಿನಲ್ಲಿ(Jail) ಬಂಧಿಯಾಗಿದ್ದಾರೆ. ಮಹಿಳೆಯೊಬ್ಬರ ಬ್ಯಾಂಕ್ ಖಾತೆಯನ್ನ ಹ್ಯಾಕ್ ಮಾಡಿ ಚಂದ್ರಶೇಖರ್ ಹೆಸರಿನ ಬ್ಯಾಂಕ್ ಖಾತೆಗೆ 40 ಲಕ್ಷದಷ್ಟು ಹಣ ವರ್ಗಾವಣೆ ಮಾಡಲಾಗಿದೆ ಅನ್ನೋದು ಸದ್ಯ ಇರೋ ಆರೋಪ. ಹ್ಯಾಕ್ ಮಾಡಿ ಚಂದ್ರಶೇಖರ್ ಹಣ ಲಪಟಾಯಿಸಿದ್ದಾರೆ ಅನ್ನೋ ಆರೋಪದ ಮೇಲೆ ಅವರನ್ನು ರಿಯಾದ್ ಪೊಲೀಸರು(police) ಜೈಲಿಗೆ ತಳ್ಳಿದ್ದಾರೆ.
ಚಂದ್ರಶೇಖರ್ ಕಳೆದ ವರ್ಷ ಮೊಬೈಲ್(Mobile) ಹಾಗೂ ಸಿಮ್ ಖರೀದಿಗೆ ರಿಯಾದ್ ನ ಅಂಗಡಿಗೆ ಹೋಗಿದ್ದು, ಅಲ್ಲಿ 2 ಬಾರಿ ಕೈ ಬೆರಳಿನ ಥಂಬ್ ಪಡೆಯಲಾಗಿದೆ. ಇದಾದ ವಾರದ ಬಳಿಕ ಅರೆಬಿಕ್ ಭಾಷೆಯಲ್ಲೊಂದು ಸಂದೇಶ ಬರುತ್ತದೆ. ಆದರೆ ಅರೆಬಿಕ್ ಓದಲು ಗೊತ್ತಿಲ್ಲದ ಚಂದ್ರಶೇಖರ್ ಅದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಆ ಬಳಿಕ ರಿಯಾದ್ ಪೊಲೀಸರೇ ಕರೆ ಮಾಡಿ ಠಾಣೆಗೆ ಕರೆಸಿ ಅವರನ್ನ ವಿಚಾರಣೆ ಬಳಿಕ ಬಂಧಿಸಿ ಜೈಲಿಗೆ ತಳ್ಳಿದ್ದಾರೆ ಅನ್ನೋದು ಸದ್ಯ ತಿಳಿದು ಬಂದಿರೋ ಮಾಹಿತಿ. ಅಸಲಿಗೆ ಚಂದ್ರಶೇಖರ್ ಗೆ ತಿಳಿಯದೇ ರಿಯಾದ್ ನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಆ ಖಾತೆಗೆ ರಿಯಾದ್ ಮಹಿಳೆಯೊಬ್ಬರ 40 ಲಕ್ಷ ಹಣವನ್ನ ಹ್ಯಾಕ್ ಮಾಡಿ ವರ್ಗಾಯಿಸಿ ಮತ್ತೆ ಇನ್ನಾವುದೋ ದೇಶಕ್ಕೆ ವರ್ಗಾವಣೆ ಮಾಡಲಾಗಿದೆಯಂತೆ. ಆಕೆ ನೀಡಿರುವ ದೂರಿನಂತೆ ರಿಯಾದ್ ಪೊಲೀಸರು ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ.
ಸದ್ಯ ಜೈಲುಪಾಲಾದ ಚಂದ್ರಶೇಖರ್ ಬಿಡುಗಡೆಗೆ ರಿಯಾದ್ ವಕೀಲರ ಮೂಲಕ ಪ್ರಯತ್ನಪಟ್ಟರೂ 10 ಲಕ್ಷ ರೂ. ಖರ್ಚಾಗಿದೆಯೇ ವಿನಃ ಬೇರಾವುದೇ ಫಲಿತಾಂಶ ದೊರಕಿಲ್ಲ. ಅಲ್ಪಾನರ್ ಸೆರಾಮಿಕ್ಸ್ ಕಂಪೆನಿ ಕೂಡ ಕೈಚೆಲ್ಲಿ ಕುಳಿತಿದೆ. ಊರಿನಲ್ಲಿರುವ ತಾಯಿ ಹೇಮಾವತಿಗೆ ಮಗನನ್ನು ಯಾವ ರೀತಿ ಬಿಡುಗಡೆ ಮಾಡಿಸಬೇಕೆಂದು ಗೊತ್ತಿಲ್ಲ. ಆಕೆ ಕಂಗಾಲಾಗಿದ್ದು, ಕೊನೆಗೆ ಶೋಭಾ ಕರಂದ್ಲಾಜೆಯವರ ಮೂಲಕ ವಿದೇಶಾಂಗ ಸಚಿವ ಜೈಶಂಕರ್ ಮೂಲಕ ಬಿಡಿಸುವ ಪ್ರಯತ್ನವೂ ಸಫಲವಾಗಿಲ್ಲ. ಇದೀಗ ಅಂತಿವಾಗಿ ಚಂದ್ರಶೇಖರ್ 22 ಲಕ್ಷ(ಭಾರತೀಯ ಮೌಲ್ಯ) ಹಣವನ್ನು ಮಹಿಳೆಗೆ ನೀಡಬೇಕು. ಇಲ್ಲವಾದರೆ ಮತ್ತೆ ಎರಡು ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕೆಂದು ಅಲ್ಲಿನ ನ್ಯಾಯಾಲಯ ಸೂಚಿಸಿದೆ. ಆರಂಭದಲ್ಲಿ ಆರು ತಿಂಗಳ ಸೆರೆವಾಸ ಎಂದು ಹೇಳಲಾಗಿದ್ದ ಕಾರಣ ಮನೆಯವರು ಕೆಲಸಕ್ಕೆ ಸಮಸ್ಯೆಯಾಗುತ್ತೆ ಅಂತ ಸುಮ್ಮನಿದ್ದರು. ಆದರೆ ಇದೀಗ ಹಣ ಕಳೆದುಕೊಂಡ ಮಹಿಳೆಯ ದೂರಿನ ಪ್ರಕಾರ ಒಂದಾ ಅರ್ಧ ಹಣ ಪಾವತಿಸಬೇಕು ಅಥವಾ ಎರಡು ವರ್ಷ ಜೈಲು ಅನುಭವಿಸಬೇಕಿದೆ.
ಇದನ್ನೂ ವೀಕ್ಷಿಸಿ: ಮಾಡದ ತಪ್ಪಿಗೆ ಸೆರೆವಾಸ.. ಯಾರದ್ದೋ ಷಡ್ಯಂತ್ರಕ್ಕೆ ಕರಾವಳಿ ಹುಡುಗನಿಗೆ ಜೈಲು !