Hubballi KIMS: ಮೂಲೆಗುಂಪಾದ ಕಿಯೋಸ್ಕ್‌ ಮಷಿನ್‌: ಲಕ್ಷಾಂತರ ರೂಪಾಯಿ ಹಣ ನೀರಿನಲ್ಲಿ ಹೋಮ..!

Feb 25, 2022, 12:27 PM IST

ಹುಬ್ಬಳ್ಳಿ(ಫೆ.25): ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಕಿಯೋಸ್ಕ್ ಮಷಿನ್‌ಗಳು ಉಪಯೋಗಕ್ಕೆ ಬಾರದ ಸ್ಥಿತಿಯನ್ನು ತಲುಪಿವೆ. ಲಕ್ಷಾಂತರ ರೂಪಾಯಿ ವೆಚ್ಚದ ಕಿಯೋಸ್ಕ್ ಮಷಿನ್‌ಗಳನ್ನು ವ್ಯಾಕ್ಸಿನ್ ರಿಜಿಸ್ಟರ್‌ಗೆ ಉಪಯೋಗಕ್ಕೆ ಬಳಸಲಾಗುತ್ತಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಹಾಳಾಗಿ ಹೋಗಿವೆ. ಈಗಾಗಲೇ 6 ಮಷಿನ್‌ಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯು ತರಿಸಿದ್ದು, ತಾಂತ್ರಿಕ ದೋಷಗಳಿಂದ ಕಾರ್ಯನಿರ್ವಹಿಸದೆ ಬಂದ್ ಆಗಿವೆ. ಇದರಿಂದ ಲಕ್ಷಾಂತರ ರೂಪಾಯಿ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ.

ಇವು ಧಾರವಾಡದ ಐಐಟಿ ಕಾಲೇಜು ಸಿದ್ಧಪಡಿಸಿದ್ದ ಕಿಯೋಸ್ಕ್ ಮಷಿನ್‌ಗಳು. ಕಿಮ್ಸ್‌ಗೆ ಬಂದ ಕೆಲವೇ ದಿನಗಳಲ್ಲೇ ಕೆಟ್ಟು ನಿಂತಿವೆ. ಕೇಂದ್ರ ಸರ್ಕಾರದ ವಿಶೇಷ ಅನುದಾನದ ಅಡಿಯಲ್ಲಿ ಸಿದ್ಧಪಡಿಸಿದ್ದ ಧಾರವಾಡದ ಐಐಟಿ ಈ ಮಷಿನ್ ಗಳು ವ್ಯಾಕ್ಸಿನ್‌ಗೆ ಅನುಕೂಲವಾಗಲು ಬಳಕೆಯಾಗುತ್ತಿತ್ತು. ಮೊದಲು ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಹೆಸರು, ಆಧಾರ್ ನಂಬರ್, ವಯಸ್ಸು ರಿಜಿಸ್ಟರ್ ಮಾಡಿದರೆ ಸಾಕು ಅವರ ಇತಿಹಾಸವೇ ಕಿಯೋಸ್ಕ್‌ನಲ್ಲಿ ಬರುತ್ತಿತ್ತು. ಇದರಿಂದ ವ್ಯಾಕ್ಸಿನ್ ಹಾಕುವ ಆರೋಗ್ಯ ಸಿಬ್ಬಂದಿಗೆ ಸಮಯದ ಉಳಿತಾಯವಾಗುತ್ತಿತ್ತು. ಅಲ್ಲದೆ ಸಾರ್ವಜನಿಕರಿಗೆ ಘಂಟೆಗಟ್ಟಲೇ ಕಾಯುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಪ್ರಸ್ತುತವಾಗಿ ಕಿಯೋಸ್ಕ್ ಮಷಿನ್‌ಗಳು ಉಪಯೋಗಕ್ಕೆ ಬಾರದೆ ಧೂಳು ತಿನ್ನುತ್ತಿವೆ.

Russia Ukraine Crisis: ಉಕ್ರೇನ್‌ನಲ್ಲಿರುವ ರಾಜ್ಯದ ಯಾರಿಗೂ ತೊಂದರೆಯಾಗಿಲ್ಲ: ಸಿಎಂ ಬೊಮ್ಮಾಯಿ

ಕಿಮ್ಸ್ ಆಸ್ಪತ್ರೆಯಲ್ಲಿ ಈ ರೀತಿಯ ಲಕ್ಷಾಂತರ ರೂಪಾಯಿ ಮಷಿನರಿಗಳು ಧೂಳು ತಿನ್ನುತಿರೋದು ಇದೇ ಮೊದಲಲ್ಲ.. ಈ ಹಿಂದೆ ಕೊವಿಡ್ ತುರ್ತು ಸಂದರ್ಭದಲ್ಲಿ ತರಿಸಿದ್ದ ವೆಂಟಿಲೇಟರ್, ಬೆಡ್‌ಗಳು ಸಹ ಧೂಳು ತಿನ್ನುತ್ತಿವೆ. ಅಷ್ಟೇ ಅಲ್ಲದೇ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸುಸಜ್ಜಿತ ನಿರ್ಮಿಸಿದ್ದ ಕೊವಿಡ್ ಕೇರ್ ಸೆಂಟರ್ ಸಹ ಪಾರಿವಾಳಗಳ ಗೂಡಾಗಿ ಪರಿಣಮಿಸಿದ್ದನ್ನು ಸುವರ್ಣ ನ್ಯೂಸ್ ಈ ಹಿಂದೆ ತೋರಿಸಿತ್ತು.‌ 

ಒಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಷಿನ್ ತಂದರೂ ಉಪಯೋಗಕ್ಕೆ ಬಾರದಂತಾಗಿದ್ದು, ವಿಪರ್ಯಾಸಕರ ಸಂಗತಿಯಾಗಿದೆ. ಇನ್ನಾದರೂ ಕಿಮ್ಸ್ ಹಾಗೂ ಜಿಲ್ಲಾಡಳಿತ ಸೂಕ್ತ ನಿರ್ವಹಣೆ ವ್ಯವಸ್ಥೆ ಮೂಲಕ ಹಾಳಾಗಿ ಹೋಗುವ ಸಂಪನ್ಮೂಲಗಳ ಸದ್ಬಳಕೆ ಮಾಡಬೇಕಿದೆ.