*ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ!
*ಆಮೆಗತಿಯಲ್ಲಿ ಕಾಮಗಾರಿ, ಹಳ್ಳಿ ಜನರಿಂದ ಸರ್ಕಾರಕ್ಕೆ ಹಿಡಿಶಾಪ
*ಹೆದ್ದಾರಿಯಲ್ಲಿ ಧೂಳು...ಬರೇ ಧೂಳು, 10 ಹಳ್ಳಿಗಳು ಧೂಳುಮಯ
*ನೀರನ್ನೂ ಹಾಕಲ್ಲ, ಡಾಂಬರ್ ಕೂಡ ಹಾಕಲ್ಲ, ನರಕಮಯ ಜೀವನ
*ಧೂಳಿನಿಂದ ಹತ್ತಾರು ಕಾಯಿಲೆಗೆ ತುತ್ತಾಗುತ್ತಿರುವ ಗ್ರಾಮಸ್ಥರು
ಚಿಕ್ಕಮಗಳೂರು(ಜ. 24): ಕೆಮ್ಮ, ಜ್ವರ, ಶೀತ ಬಂದ್ರೆ ಕೊರೋನಾ ಅನ್ನೋ ಕಾಲವಿದು. ಇಂತಹ ಕಾಲದಲ್ಲಿ ಧೂಳುಭರಿತ ರಸ್ತೆಯಲ್ಲಿ ಸಂಚಾರ ಮಾಡಿದ್ರೆ, ವಾಹನಗಳ ಅತೀ ವೇಗದಲ್ಲಿ ಸಂಚಾರಿಸಿದ್ರೆ ಪ್ರಯಾಣಿಕರ ಹಾದಿಯಾಗಿ ಸ್ಥಳೀಯರು ಕಾಯಿಲೆಗೆ ತುತ್ತಾಗುವುದು ಗ್ಯಾರಂಟಿ ಎನ್ನುವಂತಾಗಿದೆ. ಚಿಕ್ಕಮಗಳೂರಿನ (Chikkamagaluru) ಕೊಟ್ಟಿಗೆ ಹಾರದಲ್ಲಿ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದಕ್ಕೆ ಕಾರಣ ಈ ರಸ್ತೆಯಲ್ಲಿನ ಧೂಳು. ಈ ರಸ್ತೆಯಲ್ಲಿ ಜನರು , ವಾಹನಗಳು ಸಂಚರಿಸುವಾಗ ಬರುವ ಧೂಳಿನಿಂದಾಗಿ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಲ್ಲಿನ 10ಕ್ಕೂ ಹೆಚ್ಚು ಹಳ್ಳಿಗಳ ಜನರು ನರಕದಲ್ಲಿ ಜೀವನ ನಡೆಸುವಂತಹ ಸ್ಥಿತಿ ಬಂದೊದಗಿದೆ.
ಇದನ್ನೂ ಓದಿ: ಕಾಫಿ ನಾಡಲ್ಲಿ ಮರೆಯಾದ ಬೆಲ್ಲದ ವಾಸನೆ, ಅಳಿವಿನ ಅಂಚಿನಲ್ಲಿದೆ ಅಲೆಮನೆಗಳು!
ಮಾಡೋ ಕೆಲಸವನ್ನ ಸರಿಯಾಗಿ ಮಾಡದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಯ ಜನರನ್ನ ಕೆಮ್ಮುತ್ತ ಮನೆಯಲ್ಲಿ ಕೂರುವಂತೆ ಮಾಡಿದ್ದಾರೆ. ಜಿಲ್ಲೆಯ ಮೂಡಿಗೆರೆಯಿಂದ ಕೊಟ್ಟಿಗೆಹಾರದವರೆಗೂ ಹೆದ್ದಾರಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿಗೆ ರಸ್ತೆ ಅಗೆದಿರೋ ಅಧಿಕಾರಿಗಳು ರಸ್ತೆಗೆ ಡಾಂಬರ್ ಹಾಕಿಲ್ಲ. ಪ್ರವಾಸಿತಾಣ, ಧಾರ್ಮಿಕ ಕ್ಷೇತ್ರಕ್ಕಾಗಿ ನಿತ್ಯ ನೂರಾರು ವಾಹನಗಳು ಓಡಾಡುವ ಈ ಮಾರ್ಗದಲ್ಲಿ 10ಕ್ಕೂ ಹೆಚ್ಚು ಹಳ್ಳಿಗಳು ಇವೆ. ಹೆಚ್ಚಾಗಿ ಟೂರಿಸ್ಟ್ ವಾಹನಗಳೇ ಓಡಾಡುವ ಈ ಮಾರ್ಗದಲ್ಲಿ ವಾಹನ ಚಾಲಕರು ಬೇಕಾಬಿಟ್ಟಿ ವೇಗವಾಗಿ ಓಡಾಡುವುದರಿಂದ ನಿತ್ಯ 10ಕ್ಕೂ ಹೆಚ್ಚಿನ ಹಳ್ಳಿಗಳು ಸಂಪೂರ್ಣ ಧೂಳಿನಲ್ಲಿ ಮುಳುಗಿವೆ. ಈ ಕುರಿತು ಒಂದು ವರದಿ ಇಲ್ಲಿದೆ!