ಟೊಮೆಟೊ ಬೆಳೆದ ರೈತನ ಅಭಿವೃದ್ಧಿ ಸಹಿಸದೇ, ಫಲಬಿಟ್ಟ ಟೊಮೆಟೊ ಗಿಡ ಕತ್ತರಿಸಿದ ಕಿಡಿಗೇಡಿಗಳು

Aug 3, 2023, 1:56 PM IST

ಚಾಮರಾಜನಗರ (ಆ.03) ದೇಶದಲ್ಲಿ ಬಂಗಾರದ ಬೆಲೆಯನ್ನು ಹೊಂದಿರುವ ಟೊಮೆಟೊವನ್ನು ಎರಡು ಎಕರೆಯಲ್ಲಿ ಹುಲುಸಾಗಿ ಬೆಳೆದಿದ್ದ ರೈತ, ಇನ್ನೊಂದು ವಾರದಲ್ಲಿ ಹಣ್ಣುಗಳನ್ನು ಕಿತ್ತು ಮಾರುಕಟ್ಟೆಗೆ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿಯೇ ಕಿಡಿಗೇಡಿಗಳು ಎಲ್ಲ ಟೊಮೆಟೊ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿದ್ದಾರೆ.
ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಮಂಜು ಎನ್ನುವ ರೈತ ಎರಡು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಲಕ್ಷಾಂತರ ರೂ. ಹಣವನ್ನು ಖರ್ಚು ಮಾಡಿದ್ದ ರೈತನಿಗೆ, ಹುಲುಸಾಗಿ ಬೆಳೆದಿದ್ದ ಟೊಮೆಟೊ ಬೆಳೆಯಿಂದ ತನ್ನ ಎಲ್ಲ ಕಷ್ಟವೂ ಪರಿಹಾರ ಆಗಬಹುದು ಎಂದು ನಿರೀಕ್ಷೆ ಮಾಡಿದ್ದನು. ಆದರೆ, ರೈತನೊಬ್ಬ ಉದ್ಧಾರ ಆಗಬಾರದು ಎನ್ನುವ ಉದ್ದೇಶದಿಂದ ಹುಲುಸಾಗಿ ಬೆಳೆದು ಇನ್ನೇನು ಕಟಾವಿಗೆ ಬಂದಿದ್ದ ಎರಡು ಎಕರೆ ಟೊಮೆಟೊ ಬೆಳೆಯನ್ನು ಬುಡ ಸಮೇತವೇ ಕತ್ತರಿಸಿ ಹಾಕಿದ್ದಾರೆ. ಕಿಡಿಗೇಡಿಗಳ ಕುಕೃತ್ಯದಿಂದ ರೈತನ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತ ಜಮೀನಿನಲ್ಲಿ ಮಲಗಿ ಹೊರಳಾಡಿ ಕಣ್ಣೀರು‌ ಹಾಕಿದ್ದಾನೆ. ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊ ನಾಶದ ಹಿನ್ನೆಲೆಯಲ್ಲಿ ರೈತ ಮಂಜು ಅವರು, ಬೇಗೂರು ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಪೊಲೀಸರು ನ್ಯಾಯ ಕೊಡಿಸುವುದು ಅಗತ್ಯವಾಗಿದೆ.