'ಹೊಲದಲ್ಲಿದ್ದ ಬಾವಿಯೇ ಕಣ್ಮರೆ, ಹುಡುಕಿಕೊಡಿ ರೈತ ದುಂಬಾಲು'

Jul 6, 2021, 9:11 PM IST

ಬೆಳಗಾವಿ(ಜು.  06)   ಇವರ ಹೆಸರು ಮಲ್ಲಪ್ಪ ಕುಲಗುಡೆ ಅಂತ.  ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ‌‌ ಭೆಂಡವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಹೊಂಡ ಗ್ರಾಮದ ನಿವಾಸಿ.

ಈ ರೈತನ ಸರ್ವೆ ನಂಬರ್ 21/1 ರಲ್ಲಿ ಸರ್ಕಾರದಿಂದ ಬಾವಿ ತೋಡಲಾಗಿದೆ ಅಂತ ಭೆಂಡವಾಡ ಗ್ರಾಮ ಪಂಚಾಯತ್‌ನಲ್ಲಿ 77 ಸಾವಿರ ರೂಪಾಯಿ ನಕಲಿ ಬಿಲ್ ತೆಗೆದು, ಅಧಿಕಾರಿಗಳು ಆ ಹಣವನ್ನ ತಿಂದು ತೇಗಿದ್ದಾರೆ. ಆದರೆ ಮಲ್ಲಪ್ಪನ ಹೊಲದಲ್ಲಿ ಯಾವುದೇ ಬಾವಿ ತೋಡಲಾಗಿಲ್ಲ. ಇದು ಮಲ್ಲಪ್ಪನ ಗಮನಕ್ಕೆ ಬಂದಿದ್ದು, ಮಲ್ಲಪ್ಪ ಅದಕ್ಕೆ ಸಂಬಧಿಸಿದ ಬಿಲ್ ಹಿಡಿದು ಈಗ ಅಧಿಕಾರಿಗಳಿಗೆ ಬಾವಿ ಹುಡುಕಿಕೊಡಿ ಅಂತ ಮನವಿ ಸಲ್ಲಿಸಿದ್ದಾರೆ.

ಜಮೀನು ವಿವಾದ; ಚಾಮರಾಜನಗರ ಜಿಪಂ ಉಪಾಧ್ಯಕ್ಷೆ ತಂದೆ ಕೊಲೆ

ಅಲ್ಲದೇ ಅದೇ ಗ್ರಾಮದಲ್ಲಿ ಮಲ್ಲಪ್ಪ ರಾಮಪ್ಪ ಕುಲಗುಡೆ ಎಂಬ ಹೆಸರಿನ ಮತ್ತೋರ್ವ ವ್ಯಕ್ತಿ ಇದ್ದು, ಆತನ ಹೆಸರಿನಲ್ಲಿ ಯಾವುದೇ ರೀತಿಯ ಜಮೀನು ಇಲ್ಲ. ಅಲ್ಲದೇ ನಮ್ಮ ಜಮೀನಿನಲ್ಲಿ ಪೂರ್ವಜರ ಕಾಲದಿಂದಲೂ ಬಾವಿ ಇದ್ದು, ಒಂದೇ ಹೆಸರು ಇರುವುದರಿಂದ ಮತ್ತೋರ್ವ ವ್ಯಕ್ತಿ ಮಲ್ಲಪ್ಪ ರಾಮಪ್ಪ ಕುಲಗುಡೆ ಎಂಬುವರ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬಿಲ್ ತೆಗೆದಿದ್ದಾರೆ. ಆದ್ದರಿಂದ ಪಿಡಿಒ ಸದಾಶಿವ ಕರಿಗಾರ, ಮಲ್ಲಪ್ಪ ಕುಲಗುಡೆ ಹಾಗೂ ಹಾಲಪ್ಪ ರಾಮಪ್ಪ ಕುಲಗುಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.