BIG3 : ಶಾಲೆಯ ಆವರಣದಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್: ಭಯದಲ್ಲಿ ಮಕ್ಕಳ ಓಡಾಟ

Feb 24, 2023, 3:16 PM IST

ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಗೆಜ್ಜಿ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ, ಮಕ್ಕಳು ದಿನ ನಿತ್ಯ ಭಯದಲ್ಲಿಯೇ ಬದುಕುತ್ತಿದ್ದಾರೆ. ಯಮರೂಪಿ ಓವರ್ ಹೆಡ್ ಟ್ಯಾಂಕ್ ಮಕ್ಕಳ ತಲೆ ಮೇಲೆಯೇ ಇದ್ದು, ಯಾವ ಕ್ಷಣದಲ್ಲಾದರೂ ಕುಸಿಯಬಹುದು ಎಂಬ ಆತಂಕ ಮನೆ ಮಾಡಿದೆ. ಶಾಲೆಯ ಆವರಣದಲ್ಲೇ ಇರುವ ಈ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದೆ. ಎಲ್ಲಿ ನೋಡಿದರೂ ಸಿಮೆಂಟ್ ಕಿತ್ತು ಬರುತ್ತಿದೆ. ಟ್ಯಾಂಕ್ ಒಳಗಿರುವ ಕಬ್ಬಿಣದ ರಾಡ್'ಗಳು ಕೂಡಾ ಕಾಣುತ್ತಿದೆ. ಸಿಮೆಂಟ್ ಉದುರಿ ಬೀಳುತ್ತಿದೆ. ಮಕ್ಕಳು ಬ್ರೇಕ್ ಬಿಟ್ಟಾಗ ಆಟ ಆಡೋದೇ ಟ್ಯಾಂಕ್ ಕೆಳಗೆ. ಸಿಮೆಂಟ್ ಉದುರಿ ಮಕ್ಕಳ ತಲೆ ಮೇಲೆ ಬಿದ್ದರೆ ಗತಿ ಏನು ಎಂಬ ಆತಂಕ ಗ್ರಾಮಸ್ಥರದ್ದು.‌ ಸುಮಾರು 25 ವರ್ಷ ಹಳೆಯದಾದ ಟ್ಯಾಂಕ್ ಶಿಥಿಲಾವಸ್ಥೆ ತಲುಪಿ ನಡುಗುತ್ತಿದೆ. ಸುಮಾರು 50 ಲಕ್ಷ ಲೀಟರ್ ನೀರಿನ ಸಾಮರ್ಥ್ಯದ ಈ ಟ್ಯಾಂಕ್ ನಿಂದ ಮನೆ ಮನೆಗೆ ನೀರು ಸರಬರಾಜು ಮಾಡಲಾಗ್ತಿದೆ. ಹಳೆಯದಾದ ಈ ಟ್ಯಾಂಕ್ ಕೆಡವಿ ಮಕ್ಕಳಿಗೆ ಆಟವಾಡಲು ಅನುಕೂಲ ಮಾಡಿಕೊಡಬೇಕು. ಟ್ಯಾಂಕ್ ತೆರವುಗೊಳಿಸಿದರೆ ಸಂಪೂರ್ಣ ಮೈದಾನ ಮಕ್ಕಳಿಗೆ ಆಟವಾಡೋಕೆ ಲಭ್ಯವಾಗಲಿದೆ ಅನ್ನೋದು ಗ್ರಾಮಸ್ಥರ ಬೇಡಿಕೆ ಆಗಿದೆ.