ಸಕ್ಸಸ್ ಸಂಭ್ರಮದಲ್ಲಿದ್ದ ಅಲ್ಲು ಅರ್ಜುನ್​ಗೆ ಖಾಕಿ ಶಾಕ್: ಮಧ್ಯಂತರ ಬೇಲ್ ಸಿಕ್ಕಿದ್ದಕ್ಕೆ ಪುಷ್ಪರಾಜ್ ಬಚಾವ್!

Dec 14, 2024, 12:20 PM IST

ಇತ್ತ ದಾಸ ಬೇಲ್ ಪಡೆದು ಆಚೆ ಬಂದ್ರೆ ಅತ್ತ ಟಾಲಿವುಡ್ ಐಕಾನ್ ಸ್ಟಾರ್ ಜೈಲು ಸೇರಿದ್ದಾರೆ. ಪುಷ್ಪ-2 ಸಕ್ಸಸ್ ಸಡಗರಲ್ಲಿದ್ದ ಅಲ್ಲು ಅರ್ಜುನ್​ಗೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅಲ್ಲು-ಮೆಗಾ ಫ್ಯಾಮಿಲಿಗೆ ಶಾಕ್​ ಗೆ ಒಳಗಾಗಿದೆ. ಅಷ್ಟಕ್ಕೂ ಅಲ್ಲು ಅರ್ಜುನ್ ಮಾಡಿದ ಮಹಾಪರಾಧ ಏನು..? ಅವರ ಮೇಲೆ ಯಾವೆಲ್ಲಾ ಕೇಸ್ ದಾಖಲಾಗಿವೆ.. ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಯೆಸ್ ಬಾಕ್ಸಾಫೀಸ್ ನಲ್ಲಿ ಆಲ್ ಟೈಂ ರೆಕಾರ್ಡ್ ಕ್ರಿಯೇಟ್ ಮಾಡಿ 1000 ಕೋಟಿಯ ಗಡಿ ದಾಟಿ ಮುನ್ನುಗ್ತಾ ಇದೆ ಪುಷ್ಪ-2 ಸಿನಿಮಾ. ಇಡೀ ಭಾರತೀಯ ಸಿನಿರಂಗದಲ್ಲಿ ಯಾವ ತಾರೆಯೂ ಮಾಡದ ದಾಖಲೆ ಮಾಡಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಆಗಸದಲ್ಲಿ ತೇಲ್ತಾ ಇದ್ರು. ಆದ್ರೆ ಆಗಸದಲ್ಲಿದ್ದ ಅಲ್ಲು ಅರ್ಜುನ್​ ನ ಧುತ್ ಅಂತ ಧರೆಗಿಳಿಸಿ ಜೈಲಿಗಟ್ಟಿದೆ ತೆಲಂಗಾಣ ಖಾಕಿ ಪಡೆ. 

ಪುಷ್ಪ-2 ಸಿನಿಮಾ ಡಿಸೆಂಬರ್ 5 ಕ್ಕೆ ವರ್ಲ್ಡ್  ವೈಡ್ ತೆರೆಗೆ ಬಂದಿತ್ತು.  ಅದರ ಮುನ್ನಾದಿನವೇ ಅನೇಕ ಕಡೆಗೆ ಪ್ರೀಮೀಯರ್ ಶೋಗಳು ಅರೇಂಜ್ ಆಗಿದ್ವು. ಹೈದ್ರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕೂಡ ಶೋ ಅರೇಂಜ್ ಆಗಿತ್ತು. ಈ ಶೋಗೆ ಅಚಾನಕ್ ಅಗಿ ಎಂಟ್ರಿ ಕೊಟ್ಟು ಜನರ ಮಧ್ಯೆ ಸಿನಿಮಾ ನೋಡಿದ್ರು ಅಲ್ಲು ಅರ್ಜುನ್. ಮೊದಲೇ ಪುಷ್ಪ-2 ಸಿನಿಮಾ ಬಗ್ಗೆ ಇದ್ದ ಕ್ರೇಜ್ ಗೆ ಥಿಯೇಟರ್ ನಲ್ಲಿ ಸೀಟ್ ಗಿಂತ ನಾಲ್ಕು ಪಟ್ಟು ಹೆಚ್ಚು ಜನ ಸೇರಿದ್ರು. ಅಲ್ಲು ಅರ್ಜುನ್ ಬೇರೆ ಬಂದಿದ್ದನ್ನ ನೋಡಿ ಅಭಿಮಾನಿಗಳು ಮುಗಿಬಿದ್ರು. ಈ ತಳ್ಳಾಟದಲ್ಲಿ ಕಾಲ್ತುಳಿತ ಸಂಭವಿಸಿ  35 ವರ್ಷದ ರೇವತಿ ಅನ್ನೋ ಮಹಿಳೆಯ ಪ್ರಾಣವೇ ಹೊರಟು ಹೋಗಿತ್ತು. 

ಈ ವಿಚಾರದಲ್ಲಿ ಕೇಸ್ ದಾಖಲಿಸಿಕೊಂಡ ಚಿಕ್ಕಡಪಲ್ಲಿ ಪೊಲೀಸರು ಥಿಯೇಟರ್ ಮಾಲಿಕರು, ಮ್ಯಾನೇಜರ್, ಅಲ್ಲು ಅರ್ಜುನ್ ಮೇಲೆ ಎಫ್. ಐ ಆರ್ ದಾಖಲು ಮಾಡಿದ್ರು. ಈ ಎಫ್. ಐ. ಆರ್ ರದ್ದು ಮಾಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಅಲ್ಲು ಅರ್ಜುನ್ , ಪೊಲೀಸ್ ನೊಟೀಸ್ ನ ನಿರ್ಲಕ್ಷ ಮಾಡಿದ್ರು. ಸಕ್ಸಸ್ ಮೀಟ್ ನಲ್ಲಿ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ 25 ಲಕ್ಷ ಪರಿಹಾರ ನೀಡುವ ಮಾತನಾಡಿದ್ರು. ಆದ್ರೆ ಈ ವಿಚಾರದಲ್ಲಿ ಚಿಕ್ಕಡಪಲ್ಲಿ ಪೊಲೀಸರು ಗಂಭೀರ ಸೆಕ್ಷನ್ ಗಳನ್ನ ಸೇರಿಸಿದ್ದಾರೆ. ಅಲ್ಲು ಅರ್ಜುನ್ ವಿರುದ್ಧ 105, 118 (1) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಉದ್ದೇಶಪೂರ್ವಕವಾಗಿ ಸಾವಿಗೆ ಕಾರಣವಾದವರ ವಿರುದ್ದ ಈ ಸೆಕ್ಷನ್ ದಾಖಲಾಗುತ್ತೆ. ಇದು ಸಾಬೀತಾದ್ರೆ 10 ವರ್ಷ ಜೈಲು ಶಿಕ್ಷೆ ಇದೆ. 

ಚಿಕ್ಕಡಪಲ್ಲಿ ಪೊಲೀಸರು  ಅಲ್ಲು ಅರ್ಜುನ್ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ವೇಳೆ ಹೈಡ್ರಾಮಾ ನಡೆದಿದೆ. ಅಲ್ಲು ಅರ್ಜುನ್ ಪತ್ನಿ ಕಣ್ಣೀರಿಟ್ಟಿದ್ದಾರೆ. ಅಲ್ಲು ಅರ್ಜುನ್ ತಂದೆ ಸ್ಟೇಷನ್ ಗೆ ವಿಸಿಟ್ ಮಾಡಿ ಬೇಲ್ ಗೆ ಏನೆಲ್ಲಾ ಮಾಡಬೇಕು ಅನ್ನೋ ಮಾಹಿತಿ ಸಂಗ್ರಹಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಳಿಯನ ಮನೆಗೆ ಹೋಗಿ ಸಂತೈಸಿದ್ದಾರೆ. ಈ ನಡುವೆ ಕೋರ್ಟ್ ಎಫ್.ಐಆರ್ ರದ್ದು ಮಾಡುತ್ತೆ ಅಂತ ಕಾದಿದ್ದ ಅಲ್ಲು ಅರ್ಜುನೆ್ ಗೆ ಕೋರ್ಟ್ ಶಾಕ್ ಕೊಟ್ಟಿದ್ದು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ಕೊಟ್ಟಿದೆ. ಅಲ್ಲಿಗೆ ಸಕ್ಸಸ್ ಸಂಭ್ರಮದಲ್ಲಿ ತೇಲ್ತಾ ಇದ್ದ ಪುಷ್ಪ ಏಕಾಏಕೀ ಜೈಲುಪಾಲಾಗಿದ್ದಾನೆ. ಅದೃಷ್ಟದ ಜೊತೆ ಜೊತೆಗೆ ಬಂದಿರೋ ಈ ದುರಾದೃಷ್ಟ ಕಂಡು ಕಣ್ಣೀರು ಹಾಕ್ತಾ ಇದ್ದಾನೆ.