Jan 1, 2025, 12:35 PM IST
ಅಲ್ಲು ಅರ್ಜುನ್ Vs ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿಷ್ಯ ಆಂಧ್ರದಲ್ಲೂ ಸದ್ದು ಮಾಡಿದೆ. ಅದ್ರಲ್ಲೂ ಈ ಬಗ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ಮೊದಲೇ ಎಲ್ಲರೂ ಆಳಿಗೊಂದು ಕಲ್ಲು ಎಸೀತಾ ಇದ್ದಾರೆ. ಈ ನಡುವೆ ಪವನ್ ಕಲ್ಯಾಣ್ ಕೂಡ ಅಲ್ಲು ಪರ ನಿಂತಿಲ್ಲ. ಅಳಿಯನ ಪರ ಮಾತನಾಡೋ ಬದಲು ತೆಲಂಗಾಣ ಸಿಎಂ ಗ್ರೇಟ್ ಎಂದಿದ್ದಾರೆ ಪವನ್ ಕಲ್ಯಾಣ್. ಪುಷ್ಪ-2 ಸಿನಿಮಾದ ಬಳಿಕ ಅಲ್ಲು ಅರ್ಜುನ್ಗೆ ಒಂದು ಕಡೆ ಯಶಸ್ಸು ಒದ್ದುಕೊಂಡು ಬಂದ್ರೆ, ಮತ್ತೊಂದು ಕಡೆ ಅದರ ಜೊತೆ ಜೊತೆಗೆ ದುರಾದೃಷ್ಟವೂ ಬೆನ್ನು ಬಿದ್ದಿದೆ. ಸಂಧ್ಯಾ ಥಿಯೇಟರ್ನಲ್ಲಾದ ಕಾಲ್ತುಳಿತ ಪ್ರಕರಣದಲ್ಲಿ ಈಗಾಗ್ಲೇ ಅಲ್ಲು ಅರ್ಜುನ್ ಜೈಲು ಸೇರಿ, ಜಾಮೀನಿನ ಮೇಲೆ ಆಚೆ ಬಂದಾಗಿದೆ.
ತೆಲಂಗಾಣ ಸಿಎಂ ಅಂತೂ ಅಲ್ಲು ಅರ್ಜುನ್ ಮೇಲೆ ಕೆಂಡಾಮಂಡಳ ಆಗಿದ್ದಾರೆ. ಅಸಲಿಗೆ ಈ ಕೇಸ್ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೇಕಂತಲೇ ಅಲ್ಲು ಅರ್ಜುನ್ನ ಜೈಲಿಗೆ ಕಳಿಸಿದ್ರು ಅನ್ನೋ ಅಲ್ಲು ಅರ್ಜುನ್ ಫ್ಯಾನ್ಸ್ ಆರೋಪ. ಇದರ ಬಗ್ಗೆ ತೆಲಂಗಾಣ, ಆಂಧ್ರದ ಅನೇಕ ಸಿನಿಮಾ ಮತ್ತು ರಾಜಕೀಯ ನಾಯಕರು ಮಾತನಾಡಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ತೆಲಂಗಾಣ ಡಿಸಿಎಂ ಪವನ್ ಕಲ್ಯಾಣ್ ಕೂಡ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಅಲ್ಲು ಅರ್ಜುನ್ಗೆ ಮಾವ. ಅಸಲಿಗೆ ಕಳೆದ ಚುನಾವಣೆ ವೇಳೆ ಅಲ್ಲು ಅರ್ಜುನ್ ಮೇಲೆ ಪವನ್ ಕಲ್ಯಾಣ್ಗೆ ತುಸು ಅಸಮಾಧಾನ ಆಗಿತ್ತು. ಕರ್ನಾಟಕದ ಅರಣ್ಯ ಭವನಕ್ಕೆ ಬಂದ ವೇಳೆ ಈಗ ಕಾಡುಕಳ್ಳರನ್ನ ಹೀರೋ ಅಗಿ ಮೆರೆಸಲಾಗ್ತಾ ಇದೆ ಅಂತ ಪುಷ್ಪನ ಕಾಲೆಳೆದಿದ್ರು.
ಇದೀಗ ಕಾಲ್ತುಳಿದ ಪ್ರಕರಣದಲ್ಲೂ ಪವನ್ ಕಲ್ಯಾಣ್ ಅಳಿಯನ ಪರ ವಹಿಸಿಲ್ಲ. ಅಲ್ಲು ಅರ್ಜುನ್ ಪರವಾಗಿ ಯಾರಾದರೂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬವನ್ನ ಭೇಟಿ ಮಾಡಬೇಕಿತ್ತು ಅಂದಿದ್ದಾರೆ. ಇನ್ನೂ ತೆಲಂಗಾಣ ಸಿಎಂ ಸ್ವಾರ್ಥದಿಂದ ಅಲ್ಲು ಅರ್ಜುನ್ನ ಅರೆಸ್ಟ್ ಮಾಡಿಸಿಲ್ಲ ಅವರು ಅಂಥವರಲ್ಲ ಅಂದಿದ್ದಾರೆ. ಅಲ್ಲಿಗೆ ಪರೋಕ್ಷವಾಗಿ ಅಲ್ಲು ಅರ್ಜುನ್ನ ಅಪರಾಧಿ ಅಂದಿದ್ದಾರೆ ಪವನ್. ಅಲ್ಲಿಗೆ ಹಳ್ಳಕ್ಕೆ ಬಿದ್ದ ಅಲ್ಲು ಮೇಲೆ ಆಳಿಗೊಂದರಂತೆ ಕಲ್ಲು ಹಾಕ್ತಾ ಇದ್ದಾರೆ. ಖುದ್ದು ಅಲ್ಲು ಅರ್ಜುನ್ ಮಾವ ಪವನ್ ಕಲ್ಯಾಣ್ ಕೂಡ ತಮ್ಮದೊಂದು ಇರಲಿ ಅಂತ ಪುಷ್ಪನಿಗೆ ಕಲ್ಲು ಹೊಡೆದಂತಿದೆ.