Jan 12, 2024, 8:26 PM IST
ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟನೆಯ ಅನ್ನಪೂರ್ಣಿ ಸಿನಿಮಾ ಇತ್ತೀಚಿನ ಕೆಲ ದಿನಗಳಿಂದ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿದ್ದೇ ತಡ, ಚಿತ್ರದಲ್ಲಿನ ಸಂಭಾಷಣೆಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಆ ವಿವಾದ ಮಿತಿ ಮೀರಿದ ಹಿನ್ನೆಲೆಯಲ್ಲಿ, ನಯನತಾರಾ ನಟನೆಯ ಅನ್ನಪೂರ್ಣಿ ಚಿತ್ರವನ್ನೇ ಡಿಲೀಟ್ ಮಾಡಿದೆ ನೆಟ್‌ಫ್ಲಿಕ್ಸ್. ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಅನ್ನಪೂರ್ಣಿ ಸಿನಿಮಾ ಹೈಡ್ ಮಾಡಲಾಗಿದೆ. ಚಿತ್ರದಲ್ಲಿ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆಗಳನ್ನು ಅಳವಡಿಸಲಾಗಿದೆ. ಇದು ಅನೇಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿ, ಸೋಷಿಯಲ್ ಮೀಡಿಯಾದಲ್ಲಿ ವಿರೋಧವ್ಯ ವ್ಯಕ್ತವಾಗಿತ್ತು.
ಅನ್ನಪೂರ್ಣಿ ಚಿತ್ರದಲ್ಲಿ ಶ್ರೀರಾಮನನ್ನು 'ಮಾಂಸ ಭಕ್ಷಕ' ಎಂದು ಬಣ್ಣಿಸಲಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೆಟ್‌ಫ್ಲಿಕ್ಸ್ ಈ ನಿರ್ಧಾರಕ್ಕೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ರಾಮನ ಕುರಿತ ಹೇಳಿಕೆ ನೀಡಿದ ಅನ್ನಪೂರ್ಣಿ ಸಿನಿಮಾವನ್ನು ಈ ಕೂಡಲೇ ಡಿಲಿಟ್ ಮಾಡಬೇಕು, ಇಲ್ಲವಾದರೆ ಕಾನೂನು ರೀತಿ ಕ್ರಮ ಎದುರಿಸಬೇಕಾಗಬಹುದು ಎಂದು ಬೆದರಿಕೆಗಳು ಬಂದಿದ್ದವು. ಅಷ್ಟೇ ಅಲ್ಲ ಬಾಯ್ಕಾಟ್ ನೆಟ್‌ಫ್ಲಿಕ್ಸ್ ಎಂಬ ಅಭಿಯಾನಕ್ಕೂ ಕರೆ ನೀಡಿದ್ದರು. ಇದನ್ನು ಗಮನಿಸಿದ ಒಟಿಟಿ ಸಂಸ್ಥೆ, ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ನಯನತಾರಾ ಅವರ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಿಂದ ಡಿಲೀಟ್ ಮಾಡಿದೆ.