Covid-19 effect: ಎರಡು ವರ್ಷಗಳ ಬಳಿಕ ತಲಕಾವೇರಿಯಲ್ಲಿ ತೀರ್ಥಸ್ನಾನಕ್ಕೆ ಅವಕಾಶ

Apr 5, 2022, 3:44 PM IST

ಸರದಿ ಸಾಲಿನಲ್ಲಿ ಕಾವೇರಿ ದರ್ಶನ.. ತೀರ್ಥಕೊಳದಲ್ಲಿ ಪುಣ್ಯಸ್ನಾನ ಮಾಡುತ್ತಿರುವ ಭಕ್ತಾದಿಗಳು, ತೀರ್ಥಸ್ನಾನಕ್ಕೆ ಅವಕಾಶ ಸಿಕ್ಕಿರುವುದರ ಬಗ್ಗೆ ಭಕ್ತಾದಿಗಳಲ್ಲಿ ಮನೆ ಮಾಡಿದ ಸಂತಸ..

ಇದು ರಾಜ್ಯದ ಪವಿತ್ರ ಕ್ಷೇತ್ರವಾದ ಕೊಡಗಿನ ತಲಕಾವೇರಿ(Talakaveri)ಯಲ್ಲಿ ಈಗ ಕಂಡು ಬರುತ್ತಿರುವ ದೃಶ್ಯ. ಕೋವಿಡ್(Covid) ಆರಂಭವಾದಾಗಿನಿಂದಲೂ ತಲಕಾವೇರಿಯ ತೀರ್ಥಕೊಳದಲ್ಲಿ ಭಕ್ತಾದಿಗಳಿಗೆ ತೀರ್ಥಸ್ನಾನ ಮಾಡಲು ಅವಕಾಶ ನೀಡುತ್ತಿರಲಿಲ್ಲ. ಅಷ್ಟೇ ಅಲ್ಲದೆ ಎರಡು ವರ್ಷದ ಕಾವೇರಿ ತೀರ್ಥೊದ್ಭವ ಸಂದರ್ಭವೂ ತೀರ್ಥಸ್ನಾನಕ್ಕೆ ಅವಕಾಶ ನಿರಾಕರಣೆ ಮಾಡಲಾಗಿತ್ತು. ಪರಿಣಾಮ ಕಾವೇರಿ ಭಕ್ತಾದಿಗಳು ತೀವ್ರ ನಿರಾಸೆಗೊಂಡಿದ್ದರು. ತೀರ್ಥೊದ್ಭವದ ಸಂದರ್ಭ ಭಕ್ತಾದಿಗಳು ಹಾಗೂ ಜಿಲ್ಲಾಡಳಿತದ ನಡುವೆ ವಾಕ್ಸಮರವೂ ನಡೆದಿತ್ತು. ಇದೀಗ ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಕಡಿಮೆಯಾಗಿದ್ದು ಕಳೆದ ಕೆಲವು ದಿನಗಳಿಂದ ಕೊರೋನಾ ಪ್ರಮಾಣ ಶೂನ್ಯವಾಗಿದೆ. ಆದ್ದರಿಂದ ಕಳೆದ ಮೂರು ದಿನಗಳಿಂದ ತಲಕಾವೇರಿಯಲ್ಲಿ ಭಕ್ತಾದಿಗಳಿಗೆ ತೀರ್ಥಸ್ನಾನ(Holy bath)ಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಭಕ್ತಾದಿಗಳು ಸಂತಸಗೊಂಡಿದ್ದಾರೆ.

 ಇನ್ನು ಹೊರಗಿನಿಂದ ಬರುವ ಭಕ್ತಾದಿಗಳಿಗಿಂತ ಕೊಡಗಿನ ಭಕ್ತಾದಿಗಳಿಗೆ ತೀರ್ಥಸ್ನಾನ ಇಲ್ಲದೆ ತೀವ್ರ ಸಮಸ್ಯೆಯಾಗಿತ್ತು. ಜಿಲ್ಲೆಯ ಮೂಲನಿವಾಸಿಗಳು ತಮ್ಮವರನ್ನು ಕಳೆದುಕೊಂಡಾಗ ಭಾಗಮಂಡಲದಲ್ಲಿ ಪಿಂಡ ಪ್ರಧಾನ ಮಾಡಿ ನಂತರ ತಲಕಾವೇರಿಗೆ ಬಂದು ತೀರ್ಥ ಸ್ನಾನ ಮಾಡುವುದು ಪುರಾತನ ಸಂಪ್ರದಾಯ. ಆದರೆ ಎರಡು ವರ್ಷಗಳಿಂದ ಇದಕ್ಕೆ ಅವಕಾಶ ಇಲ್ಲದೆ ಪರಿತಪಿಸುವಂತಾಗಿತ್ತು. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕೋವಿಡ್ ಕಾರಣದಿಂದಾಗಿ ಜಿಲ್ಲಾಡಳಿತ ಒಪ್ಪಿರಲಿಲ್ಲ. ಇದೀಗ ಎಂದಿನಂತೆ ಭಕ್ತಾದಿಗಳು ಆಗಮಿಸಿ ತೀರ್ಥಸ್ನಾನ, ತೀರ್ಥಪ್ರೋಕ್ಷಣೆ ಮಾಡಿಸಿಕೊಂಡು ನೆಮ್ಮದಿಯಿಂದ ತೆರಳುತ್ತಿದ್ದಾರೆ.

ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗ ಕಿತ್ತು ತಿನ್ನುತ್ತವೆ, ಕೋಡಿಶ್ರೀ ಆಘಾತಕಾರಿ ಭವಿಷ್ಯ

 ಒಟ್ಟಿನಲ್ಲಿ ತಲಕಾವೇರಿಯಲ್ಲಿ ಈಗ  ಭಕ್ತಾಧಿಗಳ ತೀರ್ಥಸ್ನಾನ ಮಾಡಿ ನಿರಾಳರಾಗುತ್ತಿದ್ದಾರೆ. ಮುಂದೆ  ಯಾವುದೇ ಅಡೆತಡೆಗಳು ಬಾರದಿರಲಿ ಎಂದು ಕಾವೇರಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.