Mar 22, 2022, 2:13 PM IST
ಕೊಪ್ಪಳ(Koppal) ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಗವಿಸಿದ್ದೇಶ್ವರ ಸ್ಚಾಮೀಜಿ(Gavi Siddeshwar Swamiji)ಗಳ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿದಿನ ಸಂಜೆ ಪ್ರವಚನ ಕಾರ್ಯಕ್ರಮ ಜರಗುತ್ತಿದೆ. ಇದರ ಮದ್ಯೆ ಪ್ರತಿದಿನ ಒಂದೊಂದು ಹಳ್ಳಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಪಾದಯಾತ್ರೆ ಮಾಡುತ್ತಾರೆ. ಈ ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲಕುಂಟಾ ಗ್ರಾಮದ ಜುಮ್ಮಾ ಮಸೀದಿ(masjid)ಗೆ ಭೇಟಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ.
ಗವಿಸಿದ್ದೇಶ್ವರ ಸ್ವಾಮೀಜಿ ಮಾತುಗಳೆಂದರೆ ಸಾಕು, ಅವುಗಳ ತೂಕ ಹೆಚ್ಚು. ಅವರು ಮಾತನಾಡುವ ಪ್ರತಿಯೊಂದು ಮಾತುಗಳು ಸಹ ಎಂತವರನ್ನು ಒಂದು ಕ್ಷಣ ಮಂತ್ರಮುಗ್ಧಗೊಳಿಸುತ್ತವೆ. ಮಸೀದಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಮುಸ್ಲಿಂ ಸಮುದಾಯದವರು ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಗವಿಸಿದ್ದೇಶ್ವರ ಸ್ವಾಮೀಜಿಗಳು ಭೂಮಿಯ ಮೇಲೆ ಬದುಕಿರುವ ಜೀವರಾಶಿಗಳಲ್ಲಿ ಮಾನವೀಯತೆ ಅತ್ಯಂತ ಶ್ರೇಷ್ಠವಾದದ್ದು, ಮನುಷ್ಯನಲ್ಲಿ ಭೇದ- ಭಾವ ಇರಬಾರದು. ಸದಾ ಒಳ್ಳೆಯ ಕಾರ್ಯಗಳಲ್ಲಿ ತೊಡಗಬೇಕೆಂದರು. ಜೊತೆಗೆ ಮನುಷ್ಯರಾದವರು ಸದಾ ತ್ಯಾಗದಲ್ಲಿ ತೊಡಗಿರಬೇಕು, ದಯಾ-ಕರುಣೆಯಿಂದ ಬಾಳಿದರೆ ಅದುವೇ ಸ್ವರ್ಗ. ಕೆಲವು ದಿನಗಳ ಹಿಂದೆ ದೇಶದಲ್ಲಿ ಭೇದ- ಭಾವ ಹರಡುವ ವಾತಾವರಣ ಇತ್ತು,ಈ ರೀತಿಯ ಬೆಳವಣಿಗೆಗೆ ಅವಕಾಶ ಕೊಡದೇ ಪ್ರತಿಯೊಬ್ಬರೂ ಸಹೋದರರಂತೆ ಜೀವಿಸಬೇಕೆಂದರು ಕರೆ ನೀಡಿದರು.
Food remedies: ಜಾತಕದ ದುರ್ಬಲ ಗ್ರಹಕ್ಕೆ ಬಲ ತುಂಬಲು ಈ ಆಹಾರ ಸೇವಿಸಿ
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮ ಧರ್ಮಗಳ ನಡುವೆ ಗಲಭೆಗಳಾಗುತ್ತಿರುವ ಈ ಸಂದರ್ಭದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲಕುಂಟಾದ ಜುಮ್ಮಾ ಮಸೀದಿಗೆ ಭೇಟಿ ನೀಡುವ ಮೂಲಕ ಸೌಹಾರ್ದತೆ ಮೆರೆದಿರುವುದು ನಿಜಕ್ಕೂ ಅನುಕರಣಿಯವೇ ಸರಿ.