ಲಿವಿಂಗ್ ರೂಮ್ ಮನೆಯ ಅತ್ಯಂತ ಪ್ರಮುಖವಾದ ಭಾಗ. ಮನೆಯ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಮಾತನಾಡುವ, ಚರ್ಚಿಸುವ ಜಾಗ ಇದು. ಲಿವಿಂಗ್ ರೂಮ್‍ನಲ್ಲಿ ಟಿವಿ ಎಲ್ಲಿಡಬೇಕು, ಕುಳಿತುಕೊಳ್ಳೋದು ಎಲ್ಲಿ ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ನಿರ್ದಿಷ್ಟ ನಿಯಮಗಳಿವೆ.
ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರುವ, ಹೆಚ್ಚಿನ ಸಮಯ ಕಳೆಯುವ ಸ್ಥಳವೆಂದ್ರೆ ಅದು ಲಿವಿಂಗ್ ರೂಮ್ ಅಥವಾ ಹಾಲ್. ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ಟಿವಿ ನೋಡುತ್ತ ಹರಟುವ, ಮಾತುಕತೆ ನಡೆಸುವ ಈ ಸ್ಥಳ ಮನೆಯ ಅತ್ಯಂತ ಪ್ರಮುಖವಾದ ಭಾಗ. ಲಿವಿಂಗ್ ರೂಮ್ ಮನೆಯ ಯಾವ ಭಾಗದಲ್ಲಿರಬೇಕು,ಹೇಗಿರಬೇಕು ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಒಂದಿಷ್ಟು ನಿಯಮಗಳಿವೆ. ಈ ನಿಯಮಗಳ ಪ್ರಕಾರವೇ ಲಿವಿಂಗ್ ರೂಮ್ ಇದ್ದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಂಪತ್ತು ಲಭಿಸುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಹಾಗಾದ್ರೆ ಲಿವಿಂಗ್ ರೂಮ್ ಬಗ್ಗೆ ವಾಸ್ತುಶಾಸ್ತ್ರ ಏನ್ ಹೇಳುತ್ತೆ?
ಯಾವ ದಿಕ್ಕಿನಲ್ಲಿರಬೇಕು?
ಮನೆಯಲ್ಲಿ ಲಿವಿಂಗ್ ರೂಮ್ ಈಶಾನ್ಯ ದಿಕ್ಕಿನಲ್ಲಿದ್ದರೆ ಅತ್ಯುತ್ತಮ. ಒಂದು ವೇಳೆ ಈಶಾನ್ಯ ದಿಕ್ಕಿನಲ್ಲಿ ಲಿವಿಂಗ್ ರೂಮ್ ಮಾಡಲು ಸೂಕ್ತ ಸ್ಥಳಾವಕಾಶವಿಲ್ಲವೆಂದ್ರೆ ಪೂರ್ವ ದಿಕ್ಕಿಗಿರುವಂತೆ ನೋಡಿಕೊಳ್ಳಿ. ಇವೆರಡೂ ಅವಕಾಶವಿಲ್ಲವೆಂದ್ರೆ ಉತ್ತರ ದಿಕ್ಕು ಲಿವಿಂಗ್ ರೂಮ್‍ಗೆ ಸೂಕ್ತ ದಿಕ್ಕು.
ಗೋಡೆ ಅಂದ ಹೆಚ್ಚಿಸುವ ಗಡಿಯಾರಕ್ಕೂ ಇದೆ ವಾಸ್ತು ನಂಟು!
ಗೋಡೆ ಬಣ್ಣ ಹೀಗಿರಲಿ
ಲಿವಿಂಗ್ ರೂಮ್ ಗೋಡೆಗಳಿಗೆ ಗಾಢ ಬಣ್ಣ ಹಚ್ಚೋದು ಹೆಚ್ಚು ಸೂಕ್ತ. ಕಣ್ಣುಗಳನ್ನು ಸೆಳೆಯುವ ಬಣ್ಣಗಳಿದ್ದರೆ ಮಾತ್ರ ಲಿವಿಂಗ್ ರೂಮ್ ಆಕರ್ಷಕವಾಗಿ ಕಾಣಲು ಸಾಧ್ಯ. ಗೋಡೆಗಳ ಬಣ್ಣ ಗಾಢವಾಗಿದ್ದಾಗ ಸಹಜವಾಗಿ ಮನೆಯೊಳಗೆ ಪ್ರವೇಶಿಸುವ ಅತಿಥಿಗಳ ಕಣ್ಣು ಮೊದಲು ಗೋಡೆಗಳ ಮೇಲೆಯೇ ಹೋಗುತ್ತದೆ. ಇದೊಂದು ರೀತಿಯಲ್ಲಿ ಒಳ್ಳೆಯದೆ. ವಕ್ರ ದೃಷ್ಟಿಯೇನಾದರೂ ಇದ್ದರೆ ಅದು ಬೇರೆ ವಸ್ತುಗಳ ಮೇಲೆ ಬೀಳೋದಿಲ್ಲ.
ಯಜಮಾನ ಎಲ್ಲಿ ಕೂರಬೇಕು ಗೊತ್ತಾ?
ಮನೆಯ ಯಜಮಾನ ಲಿವಿಂಗ್ ರೂಮ್‍ನ ನೈರುತ್ಯ ಭಾಗದಲ್ಲಿ ಕೂರಬೇಕು. ಆತನ ಮುಖ ಪೂರ್ವ ಅಥವಾ ಉತ್ತರ ದಿಕ್ಕಿನೆಡೆಗೆ ಇರಬೇಕು. ಕುಟುಂಬದ ಇತರ ಸದಸ್ಯರು ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು. ಮನೆಗೆ ಆಗಮಿಸುವ ಅತಿಥಿಗಳು ಮನೆಯ ಯಜಮಾನನ ಮುಂದೆ ಕುಳಿತುಕೊಳ್ಳಬೇಕು. ಅವರ ಮುಖ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನೆಡೆಗೆ ಇರಬೇಕು. ಪೂರ್ವ ಅಥವಾ ಉತ್ತರಕ್ಕೆ ಮುಖ್ಯದ್ವಾರ ಹೊಂದಿರುವ ಮನೆಗಳಲ್ಲಿ ಲಿವಿಂಗ್ ರೂಮ್ ಈಶಾನ್ಯ ಭಾಗದಲ್ಲೇ ಇರಬೇಕು. ಹೀಗಾಗಿ ಲಿವಿಂಗ್ ರೂಮ್‍ನಲ್ಲಿ ಮನೆಯ ಯಜಮಾನ ಹಾಗೂ ಸದಸ್ಯರು ಕುಳಿತಾಗ ಈಶಾನ್ಯ, ಪೂರ್ವ ಹಾಗೂ ಉತ್ತರ ದಿಕ್ಕುಗಳಿಂದ ಸಕಾರಾತ್ಮಕ ವೈಬ್ರೇಷನ್‍ಗಳು ಬರುತ್ತವೆ. ಇವು ಮನೆಯ ಸದಸ್ಯರಿಗೆ ಶುಭಕಾರಕ.
ಆ್ಯಂಟಿಕ್ ಅಂತ ಮನೇನಲ್ಲಿ ಏನೇನೋ ಇಟ್ಕೋಬೇಡಿ!
ಟಿವಿ ಎಲ್ಲಿಡಬೇಕು?
ಲಿವಿಂಗ್ ರೂಮ್‍ನಲ್ಲಿ ಟಿವಿ ಇಲ್ಲವೆಂದ್ರೆ ಹೇಗೆ ಅಲ್ವಾ? ಟಿವಿಯನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿಡೋದು ಸೂಕ್ತ. ಇದರಿಂದ ಮನೆಯ ಸದಸ್ಯರೆಲ್ಲ ಪೂರ್ವ ದಿಕ್ಕಿನಲ್ಲಿ ಕುಳಿತು ಟಿವಿ ನೋಡುತ್ತಾರೆ. ಪರಿಣಾಮ ಮನೆ ಸದಸ್ಯರ ಆರೋಗ್ಯ, ಸಂಪತ್ತು ವೃದ್ಧಿಯಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಟಿವಿ ಇಡುವುದು ಕೂಡ ಒಳ್ಳೆಯ ಐಡಿಯಾ. ಟಿವಿ ನೋಡಲು ಮನೆ ಸದಸ್ಯರು ನೈರುತ್ಯ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಇದು ಜೀವನಕ್ಕೆ ಭದ್ರತೆ, ಅದೃಷ್ಟ, ಗೆಲುವು ಮುಂತಾದನ್ನು ತರುತ್ತದೆ. ಪಶ್ಚಿಮ ದಿಕ್ಕಿಗೆ ಟಿವಿ ಇಡುವುದು ಅಷ್ಟು ಸೂಕ್ತವಲ್ಲ. ಒಂದು ವೇಳೆ ಪಶ್ಚಿಮದಲ್ಲಿ ಟಿವಿ ಇಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದ್ರೆ ಪೂರ್ವ ದಿಕ್ಕಿನಲ್ಲಿ ವಿಶಾಲವಾದ ತೆರೆದ ಸ್ಥಳವಿರುವುದು ಅಗತ್ಯ. ನೈರುತ್ಯ, ಆಗ್ನೇಯ ಹಾಗೂ ವಾಯುವ್ಯ ದಿಕ್ಕಿನಲ್ಲಿ ಟಿವಿ ಇಡಬಾರದು.
ಹಾಲ್‍ಗೆ ಎಷ್ಟು ಬಾಗಿಲಿಡಬಹುದು?
ಲಿವಿಂಗ್ ರೂಮ್‍ಗೆ ಎಷ್ಟು ಬೇಕಾದ್ರೂ ಬಾಗಿಲುಗಳನ್ನಿಡಬಹುದು. ಆದ್ರೆ, ವಾಸ್ತುಶಾಸ್ತ್ರದ ನಿಯಮಗಳ ಅನ್ವಯ ಬಾಗಿಲುಗಳನ್ನು ಸರಿಯಾದ ಸ್ಥಳದಲ್ಲಿಡಬೇಕು. ಮನೆಯ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ನಿರ್ಣಯಿಸುವಲ್ಲಿ ಬಾಗಿಲುಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ.
ಈ ಸ್ಮಾರ್ಟ್ ಐಡಿಯಾ ಪಾಲಿಸಿ ಮನೆ ಚಿಕ್ಕದೆಂಬ ಚಿಂತೆ ಬಿಡಿ
ಮ್ಯೂಸಿಕ್ ಹಾಕಿಡಿ
ಲಿವಿಂಗ್ ರೂಮ್‍ನಲ್ಲಿ ನಿರಂತರವಾಗಿ ಮ್ಯೂಸಿಕ್ ಹಾಕಿಡಿ. ಅದರಲ್ಲೂ ಇನ್‍ಸ್ಟ್ರುಮೆಂಟಲ್ ಮ್ಯೂಸಿಕ್ ಹಾಕಿಟ್ಟರೆ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ಉತ್ತಮವಾಗಿ ಜೋಡಿಸಿಟ್ಟ ಫರ್ನಿಚರ್‍ಗಳು ಹಾಗೂ ವಾಲ್ ಹ್ಯಾಂಗಿಂಗ್ಸ್ ಮನೆಯೊಳಗಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.