Car Vastu Tips: ಸುಖಕರವಾದ ಪ್ರಯಾಣ ನಿಮ್ಮದಾಗಲು ನಿಮ್ಮ ಕಾರಿಗೂ ವಾಸ್ತು ಇರಲಿ!

By Suvarna NewsFirst Published Aug 31, 2022, 10:17 AM IST
Highlights

ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುವ ನಿಮ್ಮ ವಾಹನದಲ್ಲಿ ಮಧುರವಾದ, ಸುಖಕರವಾದ, ಸುರಕ್ಷಿತವಾದ ಪ್ರಯಾಣ ನಿಮ್ಮದಾಗಬೇಕಲ್ಲವೇ? ಹಾಗಿದ್ದರೆ ಈ ಕೆಲವು ವಾಸ್ತು ಸೂತ್ರಗಳನ್ನು ನೀವು ಅನುಸರಿಸಲೇಬೇಕು.

ಕಾರು ಕೊಳ್ಳುವಾಗ, ಕಾರನ್ನು ಮನೆಯಲ್ಲಿ ಪಾರ್ಕ್‌ ಮಾಡುವಾಗ, ಕಾರಿನ ಬಣ್ಣ ಆರಿಸುವಾಗ ಸೂಕ್ಷ್ಮ ತಿಳಿದವರು ವಾಸ್ತು ಸಲಹೆಗಳನ್ನು ನೀಡುತ್ತಾರೆ (car vastu). ಉತ್ತಮ ವಾಸ್ತು ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಸುಖಕರವಾದ ಪ್ರಯಾಣ ನಿಮ್ಮದಾಗಬಹುದು. ವಾಹನದ ವಾಸ್ತು ನಿರ್ಲಕ್ಷಿಸಿದರೆ ನಕಾರಾತ್ಮಕತೆ ಉಂಟಾಗುತ್ತದೆ. ಕೆಲವೊಮ್ಮೆ ಸರಿಯಾದ ವಾಹನ ವಾಸ್ತು ಇಲ್ಲದೇ ಹೋದರೆ ಅವು ಮಾಲಿಕನ ಕೈಯಲ್ಲಿ ಅಪಘಾತವಾಗುವುದೂ ಉಂಟು. ಅಥವಾ ಅವಸರದ ಹೊತ್ತಿನಲ್ಲಿ ಕೈ ಕೊಡಬಹುದು. ಅಂಥ ಸನ್ನಿವೇಶ ಒದಗಬಾರದು ಎಂದಿದ್ದರೆ, ನಿಮಗಾಗಿ ವಾಹನ ಕೊಳ್ಳುವಾಗ ಈ ಕೆಳಗಿನ ವಾಸ್ತು ಸಲಹೆಗಳನ್ನು ಪಾಲಿಸಿ.

ಅದೃಷ್ಟದ ಬಣ್ಣ (Lucky car colour):
ಕಾರಿನ ಬಣ್ಣ ನಿಮ್ಮ ಅದೃಷ್ಟದ ಬಣ್ಣವಾಗಿರಲಿ. ಜನ್ಮರಾಶಿಯನ್ನು ಅನುಸರಿಸಿ ಯಾವ ಬಣ್ಣ ಅದೃಷ್ಟಶಾಲಿ ಎಂದು ಭವಿಷ್ಯಕಾರರು ಹೇಳುತ್ತಾರೋ, ಆ ಬಣ್ಣವನ್ನು ಆರಿಸಿಕೊಳ್ಳಿ. ಕಪ್ಪು ಅಥವಾ ಬಿಳಿ ವಾಹನಗಳು ಸಾಮಾನ್ಯವಾಗಿ ಎಲ್ಲರಗೂ ಒಪ್ಪುತ್ತವೆ. ಕೆಂಪು ಆರಿಸಿಕೊಳ್ಳುವ ಮುನ್ನ ಪರಿಶೀಲಿಸಿ.

ಒಳ್ಳೆಯ ಹೆಸರು:
ಕಾರಿಗೆ ಹೆಸರು ಇಡುವುದಾದರೆ, ಯಾವುದಾದರೂ ದೇವರು ಅಥವಾ ದೇವಿಯರ ಹೆಸರನ್ನು ಇಡುವುದು ಸೂಕ್ತ. ಅಥವಾ ನಿಮ್ಮ ತಂದೆ- ತಾಯಿಯ, ಮಕ್ಕಳ, ಮಡದಿ- ಗಂಡನ ಹೆಸರನ್ನೂ ಇಡಬಹುದು. ಆದರೆ ಜನಪ್ರಿಯವಾಗಿದೆ ಎಂಬ ಕಾರಣಕ್ಕೆ ಪೊರ್ಕಿ ಹೆಸರುಗಳನ್ನಿಡುವುದು ಅದೃಷ್ಟಕರವಲ್ಲ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಟಿವಿ, ಫ್ರಿಡ್ಜ್, ಎಸಿ ಎಲ್ಲಿಡಬೇಕು?

ಇವು ನೆನಪಿರಲಿ
- ಮುರಿದ ಅಥವಾ ಹಾನಿಗೊಳಗಾದ ವಸ್ತುಗಳನ್ನು ವಾಹನದಲ್ಲಿ ಇಡಬಾರದು. ಕಾಲಕಾಲಕ್ಕೆ ಕಾರನ್ನು ಸ್ವಚ್ಛವಾಗಿಡಿ. ಕಾರು ಶುಚಿಯಾಗಿಲ್ಲ ಎಂದರೆ ಪ್ರಯಾಣಿಸುವವರ ಮನಸ್ಸು ಕಲ್ಮಶವಾಗುತ್ತದೆ.
- ಹೊಸ ಕಾರನ್ನು ಶುಭದಿನದ ಶುಭ ಮುಹೂರ್ತದಲ್ಲಿ ಖರೀದಿಸಿ. ಮೊದಲಿಗೆ ದೇವಾಲಯದಲ್ಲಿ ಪೂಜಿಸಿ ಮನೆಗೆ ತನ್ನಿ. ಹೊಸ ಕಾರಿನಲ್ಲಿ ಕೆಲವು ಶುಭ ವಸ್ತುಗಳನ್ನು ಇಡಿ. ದೇವರ ವಿಗ್ರಹ ಇಡುವುದು ಒಳ್ಳೆಯದು.
- ಅನೇಕ ಮಂದಿ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಸಣ್ಣ ವಿಗ್ರಹವನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಗಣೇಶನ ವಿಗ್ರಹವನ್ನು ಇಡುವುದು ಉತ್ತಮ. ಅಡೆತಡೆಗಳಿಂದ ವಿಘ್ನವಿನಾಶಕ ರಕ್ಷಿಸುತ್ತಾನೆ.
- ಸಣ್ಣ ಕಪ್ಪು ಆಮೆಯನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಪ್ರಯೋಜನಕಾರಿ. ಇದು ವಾಹನದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುವ ಮೂಲಕ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ.
- ವಾಹನದಲ್ಲಿ ನೈಸರ್ಗಿಕ ಕಲ್ಲು ಅಥವಾ ಸ್ಫಟಿಕವನ್ನು ಇಡುವುದರಿಂದ ಭೂಮಿಯ ಅಂಶವು ಬಲಗೊಳ್ಳುತ್ತದೆ. ಇದು ಕಾರನ್ನು ಯಾವಾಗಲೂ ಸುರಕ್ಷಿತವಾಗಿರಿಸುತ್ತದೆ.
- ವಾಹನವು ಚಲಿಸುವಾಗ ಬಿಸಿಯಾಗುತ್ತದೆ. ಇದನ್ನು ಸರಿದೂಗಿಸಲು ಕಾರಿನೊಳಗೆ ನೀರು ಇರಬೇಕು. ಒಂದು ಬಾಟಲಿಯಲ್ಲಿ ನೀರು ಇಟ್ಟುಕೊಳ್ಳಬೇಕು. ಅದು ಪ್ರಯಾಣಿಕರ ಬಳಕೆಗೂ ಆಗುತ್ತದೆ.

ಕಾರನ್ನು ಮನೆಯಲ್ಲಿ ಪಾರ್ಕ್‌ ಮಾಡುವುದು ಎಲ್ಲಿ (How to and where to park car at home)?
- ಮನೆಯ ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಕಾರು ಗ್ಯಾರೇಜ್ ನಿರ್ಮಿಸಿದರೆ ಹೆಚ್ಚು ಸೂಕ್ತ. ಕಾರು ಗ್ಯಾರೇಜ್ ವಾಯುವ್ಯ ಪಶ್ಚಿಮ ದಿಕ್ಕಿನಲ್ಲಿದ್ದರೆ ಹೆಚ್ಚು ಪ್ರವಾಸ ಕೈಗೊಳ್ಳುವ ಅದೃಷ್ಟವಿರುತ್ತದೆ.
- ಆಗ್ನೇಯ ದಿಕ್ಕಿನಲ್ಲಿ ನಿಲುಗಡೆಗೊಳಿಸಿದ ಕಾರಿಗೆ ಸಣ್ಣ ಪುಟ್ಟ ದುರಸ್ತಿ ಕೆಲಸಗಳು ಎದುರಾಗಬಹುದು. ಗ್ಯಾರೇಜ್ ಮಹಡಿಯ ಮಟ್ಟವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಳಿಜಾರಿನಂತಿರಬೇಕು.
- ಕಾರಿನ ಸುತ್ತಲೂ ಕನಿಷ್ಠ ಎರಡರಿಂದ ಮೂರಡಿ ಪ್ರದೇಶವಿರಬೇಕು. ಓರ್ವ ವ್ಯಕ್ತಿಗೆ ಯಾವುದೇ ಅಡಚಣೆಯಿಲ್ಲದೆ ಸುತ್ತಲು ಸಾಧ್ಯವಾಗಬೇಕು. ಈ ಅಂತರವು ಕಾರಿನ ಸುತ್ತಲೂ ಬೆಳಕು ಹಾಗೂ ಗಾಳಿ ಪ್ರವಹಿಸುವಂತೆ ಮಾಡುತ್ತದೆ.
- ಪೂರ್ವ ಅಥವಾ ಉತ್ತರ ದಿಕ್ಕಿನತ್ತ ಮುಖ ಮಾಡಿ ಕಾರು ನಿಲ್ಲಿಸಿ. ಇವೆರಡೂ ಅತ್ಯುತ್ತಮ ದಿಕ್ಕುಗಳು. ಇದರಿಂದ ಕಾರಿನ ಎಂಜಿನ್‌ಗೆ ಯಾವುದೇ ತೊಂದರೆ ಎದುರಾಗದು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳಿಂದ ಬರುವ ಕಿರಣಗಳು ಕಾರಿಗೆ ದೋಷ ಉಂಟುಮಾಡಬಲ್ಲದು.
- ಕಾರು ಗ್ಯಾರೇಜ್‌ನ ಗೇಟ್ ಉತ್ತರ ಅಥವಾ ಪೂರ್ವ ದಿಕ್ಕಿನತ್ತ ಇರಬೇಕು. ಯಾವುದೇ ಅಡೆತಡೆಗಳಿಲ್ಲದೆ ತೆರೆಯಬೇಕು.
- ನೀರು ಸಂಗ್ರಹ ಮಾಡುವ ಸಂಪ್‌ನ ಗುಂಡಿಯ ಮೇಲ್ಗಡೆ ಕಾರು ಪಾರ್ಕಿಂಗ್ ಮಾಡಬಾರದು. ನೀರೆಂದರೆ ಜೀವನ. ಕಾರಿನ ಧೂಳು, ಆಯಿಲ್‌ ಇತ್ಯಾದಿ ನೀರಿಗೆ ಬಿದ್ದು ಕಲುಷಿತಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಮನೆಯ ವಾಸ್ತು ಸಮಸ್ಯೆ ಬಗೆಹರಿಸುತ್ತೆ ಇದೊಂದು ಮೂರ್ತಿ

click me!