ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಅದರಿಂದ ವಾಸ್ತು ದೋಷ ಉಂಟಾಗಿ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ ಮತ್ತು ವೈವಾಹಿಕ ಜೀವನದಲ್ಲಿ ಕಲಹವನ್ನು ಉಂಟುಮಾಡುತ್ತವೆ ಎಂಬುದನ್ನು ತಿಳಿಯೋಣ..
ವಿವಾಹವು ಒಂದು ಪವಿತ್ರ ಅನುಬಂಧ. ವೈವಾಹಿಕ ಜೀವನಕ್ಕೆ ಕಾಲಿಡುವ ನವ ಜೋಡಿಗಳನ್ನು ನೂರ್ಕಾಲ ಸುಖವಾಗಿ ಬಾಳಿರೆಂದು ಹಿರಿಯರು ಆಶೀರ್ವದಿಸುತ್ತಾರೆ, ಬಂಧು- ಮಿತ್ರರು ಹಾರೈಸುತ್ತಾರೆ.
ಜೀವನ ಪೂರ್ತಿ ಒಟ್ಟಾಗಿ ಬಾಳಬೇಕಾದ ಜೋಡಿ ಕ್ಷುಲ್ಲಕ ಕಾರಣಗಳಿಗೆ ಜಗಳವಾಡಿ ದೂರವಾಗುತ್ತಾರೆ ಎಂದರೆ ಅದಕ್ಕೆ ಹಲವಾರು ಕಾರಣಗಳಿರುತ್ತವೆ. ಸಾಮರಸ್ಯದ ಕೊರತೆ, ಹೊಂದಿಕೊಳ್ಳುವ ಮನೋಭಾವ ಇಲ್ಲದಿರುವುದು, ಭಿನ್ನಾಭಿಪ್ರಾಯ, ಅನುಮಾನ ಇತ್ಯಾದಿ ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತವೆ. ಹಾಗಂತ ಅದೇ ನಿಜವೆಂದಲ್ಲ. ದಂಪತಿಗಳು ಪದೇ ಪದೇ ಜಗಳವಾಡುತ್ತಿದ್ದಾರೆಂದರೆ ಅದಕ್ಕೆ ಕಾರಣ ವಾಸ್ತುವು ಇರಬಹುದು. ಹೌದು. ಅದರಲ್ಲೂ ಮಲಗುವ ಕೋಣೆಯಲ್ಲಿಟ್ಟಿರುವ ಕೆಲವು ವಸ್ತುಗಳು ವಾಸ್ತು ದೋಷವನ್ನುಂಟು ಮಾಡುತ್ತವೆ.
ಕೆಲವು ಬಾರಿ ಅದೆಲ್ಲದರಲ್ಲೂ ಅನ್ಯೋನ್ಯವಾಗಿದ್ದ ದಂಪತಿಗಳು ಸರಿಯಾದ ಕಾರಣವೇ ಇಲ್ಲದೆ ಜಗಳವಾಡುತ್ತಿದ್ದಾರೆ ಅಥವಾ ಮುನಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ವಾಸ್ತು ದೋಷವೂ ಸಹ ಕಾರಣವಾಗಿರಬಹುದು.
ಇದನ್ನು ಓದಿ: ಈ ನಾಲ್ಕು ರಾಶಿಯವರ ಮೇಲೆ ಸದಾ ಇರತ್ತೆ ಶನಿ – ಬುಧ ಗ್ರಹಗಳ ಕೃಪೆ..!
ಹೌದು. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಸದಸ್ಯರು ನೆಮ್ಮದಿಯಿಂದ, ಪರಸ್ಪರ ಹೊಂದಿಕೊಂಡಿರಲು ಅಲ್ಲಿನ ವಾಸ್ತು ಸಹ ಕಾರಣವಾಗುತ್ತದೆ. ಅದರಲ್ಲೂ ಮಲಗುವ ಕೋಣೆಯು ಹೇಗಿರಬೇಕೆಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಕೆಲವು ಬಾರಿ ತಿಳಿಯದೇ ಆದ ತಪ್ಪಿನಿಂದ ಜೀವನ ಪೂರ್ತಿ ಕೊರಗುವಂತಾಗುತ್ತದೆ.
ಹಾಗಾದರೆ ಮಲಗುವ ಕೋಣೆಯಲ್ಲಿ ಯಾವ್ಯಾವ ವಸ್ತುಗಳನ್ನು ಇಡಬಾರದು ಎಂಬ ಬಗ್ಗೆ ತಿಳಿಯೋಣ.....
ದೇವಿ-ದೇವತೆಗಳ ಫೋಟೋ
undefined
ಮಲಗುವ ಕೋಣೆಯಲ್ಲಿ ದೇವಿ-ದೇವತೆಗಳ ಫೋಟೋವನ್ನು ಇಡಬಾರದು. ಅಷ್ಟೇ ಅಲ್ಲದೆ ಗುರುಗಳ ಅಥವಾ ಸ್ವಾಮೀಜಿಗಳ ಭಾವಚಿತ್ರ ಮತ್ತು ಧಾರ್ಮಿಕ ಪುಸ್ತಕಗಳನ್ನು ಮಲಗುವ ಕೋಣೆಯಲ್ಲಿ ಇಟ್ಟಿದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅವುಗಳನ್ನು ಅಲ್ಲಿಂದ ತೆಗೆದು ಸರಿಯಾದ ಸ್ಥಳದಲ್ಲಿ ಇಡುವುದು ಸೂಕ್ತ. ಅಂದರೆ ಈ ವಸ್ತುಗಳನ್ನು ಪೂಜಾ ಸ್ಥಳದಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ.
ಪುರುಷನಿಗೆ ಪತ್ನಿಯನ್ನು ಪ್ರತಿನಿಧಿಸುವ ಶುಕ್ರ ಗ್ರಹವು ಉತ್ತಮ ದಾಂಪತ್ಯ ಜೀವನದಕ್ಕೆ ಮುಖ್ಯವಾಗುತ್ತದೆ. ಹಾಗಾಗಿ ಅದೇ ಕೋಣೆಯಲ್ಲಿ ಗುರುವಿನ ಫೋಟೋವನ್ನು ಇಡುವುದರಿಂದ ವೈವಾಹಿಕ ಜೀವನದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಕಾರಣ ಶುಕ್ರನು ದೈತ್ಯ ಗುರು ಮತ್ತು ಬೃಹಸ್ಪತಿಯು ದೇವಗುರುವಾದ್ದರಿಂದ ಪರಸ್ಪರ ಶತ್ರುತ್ವವನ್ನು ಹೊಂದಿರುತ್ತಾರೆ.
ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...!
ಕಪ್ಪು ಬಣ್ಣದ ಹೊದಿಕೆ ಬೇಡ
ಹಾಸಿಗೆಗೆ ಹಾಸುವ ಬಟ್ಟೆಯ ಬಣ್ಣ ಕಪ್ಪಾಗಿದ್ದರೆ ಅದು ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ. ಹಾಗಾಗಿ ಹೊದಿಕೆ ಮತ್ತು ಹಾಸಿಗೆಗೆ ಕಪ್ಪು ಬಣ್ಣವನ್ನು ಬಳಸುವುದು ಒಳ್ಳೆಯದಲ್ಲವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಕಪ್ಪು ಬಣ್ಣವು ನಕಾರಾತ್ಮಕ ಶಕ್ತಿಯ ಪ್ರತೀಕವಾಗಿದೆ. ಇದು ಪತಿ-ಪತ್ನಿಯ ನಡುವಿನ ಸಂಬಂಧದಲ್ಲಿ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಪರಸ್ಪರ ಪ್ರೀತಿ ಹೆಚ್ಚಾಗಲು ವಿಧವಿಧವಾದ ಬಣ್ಣದ ಹೊದಿಕೆಯನ್ನು ಉಪಯೋಗಿಸಬೇಕು. ಮನಸ್ಸನ್ನು ಮುದಗೊಳಿಸುವಂತಹ ಹೊದಿಕೆಯನ್ನು ಬಳಸುವುದು ಉತ್ತಮ.
ಈ ರೀತಿಯ ಭಾವಚಿತ್ರ ಬೇಡ
ಮನೆಯನ್ನು ಅಂದಗಾಣಿಸುವ ಸಲುವಾಗಿ ವಿವಿಧ ರೀತಿಯ ಫೋಟೋಗಳನ್ನು ಹಾಕುತ್ತೇವೆ. ಈ ರೀತಿಯ ಫೋಟೋಗಳಲ್ಲಿ ನೀರಿನ ಅಥವಾ ಸಮುದ್ರದಲ್ಲಿ ತರಂಗಗಳನನ್ನು ಉಂಟುಮಾಡುವಂತಹ ಫೋಟೋಗಳನ್ನು ಹಾಕಬಾರದು. ಖಿನ್ನತೆ ಮತ್ತು ಕ್ರೂರತನವನ್ನು ಬಿಂಬಿಸುವಂತಹ ಫೋಟೋಗಳನ್ನು ಮಲಗುವ ಕೋಣೆಯಲ್ಲಿ ಹಾಕುವುದು ಉತ್ತಮವಲ್ಲ.
ಕೆಟ್ಟು ಹೋಗಿರುವ ವಿದ್ಯುತ್ ಉಪಕರಣಗಳು
ಸರಿ ಇಲ್ಲದ ಅಥವಾ ಹಳೆಯದಾದ ವಿದ್ಯುತ್ ಉಪಕರಣಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಮಂಚದಲ್ಲಿ ವಸ್ತುಗಳನ್ನು ಇಡಲು ಜಾಗವಿದ್ದು, ಅದರಲ್ಲಿ ಲೋಹದ ವಸ್ತು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಟ್ಟಿದ್ದರೆ ಅದನ್ನು ತೆಗೆದು ಹಾಕುವುದು ಉತ್ತಮ. ಇದರಿಂದ ಖಿನ್ನತೆ ಉಂಟಾಗಬಹುದು ಮತ್ತು ದಾಂಪತ್ಯದಲ್ಲಿ ಕಲಹಗಳು ಪ್ರಾರಂಭವಾಗಬಹುದು.
ಇದನ್ನು ಓದಿ: ಪತ್ನಿಯ ರಾಶಿ ಇದಾಗಿದ್ದರೆ ಪತಿಗೆ ಅದೃಷ್ಟ – ಮನೆಯಲ್ಲಿ ಧನ-ಧಾನ್ಯ ವೃದ್ಧಿ..!
ಮಂಚದ ನೇರಕ್ಕೆ ಕನ್ನಡಿ
ಮಲಗುವ ಕೋಣೆಯಲ್ಲಿ ಮಂಚಕ್ಕೆ ನೇರವಾಗಿ ಕನ್ನಡಿಯನ್ನು ಇಟ್ಟುಕೊಳ್ಳುವುದು ಉತ್ತಮವಲ್ಲ. ಇದರಿಂದ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ. ಹಾಗಾಗಿ ಕನ್ನಡಿಯನ್ನು ಅಲ್ಲಿಂದ ತೆಗೆಯಬೇಕು ಇಲ್ಲವೇ ಮಲಗುವ ಸಮಯದಲ್ಲಿ ಅದನ್ನು ಪರದೆಯಿಂದ ಮುಚ್ಚಿಡಬೇಕು.