ಈ ಫೋಟೋ ಮನೆಯಲ್ಲಿಟ್ಟರೆ ಕೆಡುಕು ಖಚಿತ, ನಿಮ್ಮ ಮನೆಯಲಿದ್ಯಾ?

By Suvarna News  |  First Published Nov 30, 2020, 4:24 PM IST

ಮನೆ ಸುಂದರವಾಗಿ ಕಾಣಬೇಕೆಂದರೆ ಚೆಂದ ಚೆಂದದ ಫೋಟೋಗಳನ್ನು ಹಾಕಲೇಬೇಕು. ಆದರೆ, ಫೋಟೋಗಳು ಚೆಂದವಿದೆ ಎಂದು ಹಾಕಿದರೆ ಮುಂದೆ ಅನಾಹುತಗಳನ್ನು ಎದುರಿಸಬೇಕು ಎಂಬ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತೇ ಇರುವುದಿಲ್ಲ. ಕೆಲವರು ತಾವಾಗಿಯೇ ಇಷ್ಟಪಟ್ಟು ತಂದು ಮನೆಯಲ್ಲಿ ಫೋಟೋಗಳನ್ನು ನೇತು ಹಾಕಿದರೆ, ಮತ್ತೆ ಕೆಲವರು ಯಾರೋ ಕೊಟ್ಟ ಗಿಫ್ಟ್ ಎಂದು ಹಾಕಿಕೊಂಡಿರುತ್ತಾರೆ. ಆದರೆ, ತಾವು ಹಾಕುತ್ತಿರುವುದು ಎಂಥ ಫೋಟೋ ಎಂಬ ಅರಿವು ಇರಬೇಕು…! ಹಾಗಾದರೆ ಯಾವ ಫೋಟೋಗಳನ್ನು ಹಾಕಿದರೆ ಶುಭ – ಅಶುಭ ಎಂಬ ಬಗ್ಗೆ ನೋಡೋಣ…


ಮನೆಯನ್ನು ಚೆಂದ ಕಾಣುವಂತೆ ಇಟ್ಟುಕೊಳ್ಳಬೇಕೆಂದು ಎಲ್ಲರೂ ಇಷ್ಟ ಪಡುತ್ತಾರೆ. ಹಾಗಾಗಿ ಚಂದದ ಫೋಟೋಗಳನ್ನು, ಪ್ರತಿಮೆಗಳನ್ನು, ಅಲಂಕಾರಿಕ ವಸ್ತುಗಳಿಂದ ಮನೆಯನ್ನು ಸಿಂಗರಿಸಿರುತ್ತಾರೆ. ಮನೆಯನ್ನು ಚಂದಗಾಣಿಸುವ ಭರದಲ್ಲಿ ವಾಸ್ತು ನಿಯಮಗಳ ಮರೆಯದಿರುವುದು ಒಳ್ಳೆಯದು.

ಮನೆಯು ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಮನೆಯಲ್ಲಿ ಶಾಂತಿ, ಸುಖ-ಸಮೃದ್ಧಿ ಮತ್ತು ನೆಮ್ಮದಿ ನೆಲೆಸಿರುವುದು ಅಷ್ಟೇ ಮುಖ್ಯವಾಗಿರುತ್ತದೆ. ಮನೆಯನ್ನು ಸುಂದರವಾಗಿಸುವ ಎಲ್ಲ ವಸ್ತುಗಳು ಮನೆಯ ಒಳಿತಿಗೆ ಪೂರಕವಾಗಿರುವುದಿಲ್ಲ. ಕೆಲವು ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಲು ಕಾರಣವಾಗುತ್ತವೆ. ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳಿಂದ ಮನೆಯಲ್ಲಿ ಜಗಳ, ಅಶಾಂತಿ ಮತ್ತು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. 

ಇದನ್ನು ಓದಿ: ಈ ಕಾರ್ತಿಕ ಪೂರ್ಣಿಮೆಯಂದು ಏನು ಮಾಡಿದರೆ ಶುಭವಾಗುತ್ತೆ...!? 

ವಾಸ್ತು ಶಾಸ್ತ್ರದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿದ್ದಲ್ಲದೇ, ಯಾವೆಲ್ಲ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂಬ ಬಗ್ಗೆ ಹೇಳಲಾಗಿದೆ. ಹಾಗಾದರೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳ ಬಗ್ಗೆ ತಿಳಿಯೋಣ...

ಹಿಂಸಾತ್ಮಕ ದೃಶ್ಯ ಅಥವಾ ಪ್ರಾಣಿಗಳ ಫೋಟೋ
ವಾಸ್ತು ಶಾಸ್ತ್ರದ ಪ್ರಕಾರ ಕ್ರೂರ ಪ್ರಾಣಿಗಳ ಫೋಟೋಗಳನ್ನು ಮನೆಯಲ್ಲಿಟ್ಟುಕೊಂಡರೆ ಅಶುಭವೆಂದು ಹೇಳಲಾಗುತ್ತದೆ. ಕಾಡು ಪ್ರಾಣಿಗಳಾದ ಸಿಂಹ, ಚಿರತೆ, ಹುಲಿ ಮುಂತಾದ ಪ್ರಾಣಿಗಳ ಫೋಟೋಗಳನ್ನು ಇಡಬಾರದು. ಮುಖ್ಯವಾಗಿ ಹಿಂಸೆಯನ್ನು ಪ್ರಚೋದಿಸುವ ವಸ್ತುಗಳನ್ನು, ಪ್ರಾಣಿ ಬೇಟೆಯಾಡುತ್ತಿರುವ ದೃಶ್ಯದ ಫೋಟೋವನ್ನು, ಮತ್ತೊಂದು ಪ್ರಾಣಿಗೆ ಹಿಂಸೆ ಕೊಡುತ್ತಿರುವ ಫೋಟೋವನ್ನು ಇಡಲೇಬಾರದೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ರೀತಿಯ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ವೃದ್ಧಿಸುತ್ತದೆ. ಮನೆಯ ಸದಸ್ಯರ ನಡುವೆ ಪರಸ್ಪರ ದ್ವೇಷ ಭಾವನೆ ಹೆಚ್ಚುವುದಲ್ಲದೆ ಕಲಹ, ಅಶಾಂತಿ, ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಮುಳುಗುತ್ತಿರುವ ಹಡಗಿನ ಫೋಟೋ
ಮನೆಯಲ್ಲಿ ಚಂದ ಚಂದದ ಫೋಟೋಗಳನ್ನು ಹಾಕುವುದು ಕೆಲವರ ಹವ್ಯಾಸವಾಗಿರುತ್ತದೆ. ನೆಚ್ಚಿನ ಚಲನಚಿತ್ರದ ದೃಶ್ಯವಾಗಿರಬಹುದು, ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಛಾಯಾಚಿತ್ರಗಳಾಗಿರಬಹುದು… ಹೀಗೆ ಆಸಕ್ತಿಗೆ ತಕ್ಕಂತೆ ವಿಶೇಷವೆನಿಸುವ ಫೋಟೋಗಳನ್ನು ಮನೆಯಲ್ಲಿ ಕಾಣುವಂತೆ ಹಾಕಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಫೋಟೋಗಳನ್ನು ಮನೆಯಲ್ಲಿ ಹಾಕುವುದರಿಂದ ದೌರ್ಭಾಗ್ಯ ಉಂಟಾಗುತ್ತದೆ. ಮುಳುಗುತ್ತಿರುವ ಹಡಗು ಅಥವಾ ದೋಣಿಯ ಫೋಟೋಗಳನ್ನು ಮನೆಯಲ್ಲಿ ಹಾಕಿಕೊಳ್ಳುವುದರಿಂದ ಮನೋಬಲ ಕ್ಷೀಣಿಸುವುದಲ್ಲದೆ, ಇಂಥಹ ದೃಶ್ಯಗಳು ದೌರ್ಭಾಗ್ಯ ಸೂಚಕವೆಂದು ಹೇಳಲಾಗುತ್ತದೆ. ಈ ಫೋಟೋಗಳು ಮನೆಯಲ್ಲಿರುವುದರಿಂದ ಅಶಾಂತಿ ಉಂಟಾಗುವುದಲ್ಲದೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ.

ಇದನ್ನು ಓದಿ: ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..! 

ತಾಜ್ ಮಹಲ್ ಫೋಟೋ ಅಥವಾ ಪ್ರತಿಮೆ
ಚಂದವಾಗಿರುವ ತಾಜ್ ಮಹಲ್ ನೋಡಲು ಹಲವಾರು ಜನರು ಬರುತ್ತಾರೆ.  ಕೆಲವರು ಮನೆಯಲ್ಲಿ ತಾಜ್ ಮಹಲ್ ಫೋಟೋವನ್ನು ಅಥವಾ ಪ್ರತಿಮೆಯನ್ನು ಮನೆಯ ಅಂದ ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಇಟ್ಟುಕೊಂಡಿರುತ್ತಾರೆ. ಪ್ರೇಮದ ಸಂಕೇತವಾಗಿ ಉಡುಗೊರೆಯಾಗಿ ತಾಜ್ ಮಹಲ್ ಪ್ರತಿಮೆಯನ್ನು ಕೊಡುವವರು ಸಹ ಇದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ ತಾಜ್ ಮಹಲ್‌ನ ಪ್ರತಿಮೆ ಅಥವಾ ಫೋಟೋವನ್ನು ಮನೆಯಲ್ಲಿಡುವುದು ಅಶುಭವೆಂದು ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುತ್ತದೆಂದು ಹೇಳಲಾಗುತ್ತದೆ. ಇದರಿಂದ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಯು ಇರುತ್ತದೆ.

Tap to resize

Latest Videos



ನಟರಾಜನ ಮೂರ್ತಿ ಅಥವಾ ಫೋಟೋ
ನೃತ್ಯದ ಬಗ್ಗೆ ಅಭಿರುಚಿಯನ್ನು ಹೊಂದಿದವರು ನಟರಾಜನ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿಟ್ಟುಕೊಂಡಿರುತ್ತಾರೆ. ವಾಸ್ತು ಶಾಸ್ತ್ರದಲ್ಲಿ ನಟರಾಜನ ಮೂರ್ತಿಯನ್ನು ಮನೆಯಲ್ಲಿಟ್ಟುಕೊಳ್ಳುವುದು ಉತ್ತಮವಲ್ಲವೆಂದು ಹೇಳಲಾಗಿದೆ. ಶಿವನು ತಾಂಡವ ನೃತ್ಯ ಮಾಡುತ್ತಿರುವ ಮುದ್ರೆಯಲ್ಲಿರುವ ನಟರಾಜನ ವಿಗ್ರಹವು ವಿನಾಶ ಮತ್ತು ಕೋಪದ ಸೂಚಕವಾಗಿದೆ. ಮನೆಯಲ್ಲಿ ನಗುತ್ತಿರುವ ಮತ್ತು ಸೌಮ್ಯ ಮುದ್ರೆಯನ್ನು ಹೊಂದಿರುವ ಫೋಟೋಗಳನ್ನು ಇಡಬೇಕು. 

ಇದನ್ನು ಓದಿ: ಕನಸಲ್ಲಿ ನೀರು ನೋಡಿದರೆ ಶುಭವೇ..? ಏನು ಹೇಳುತ್ತೆ ಸ್ವಪ್ನಶಾಸ್ತ್ರ ? 

ಮಹಾಭಾರತದ ದೃಶ್ಯ
ಮಹಾಭಾರತದ ಯುದ್ಧದ ದೃಶ್ಯದಲ್ಲಿ ರಥದ ಮೇಲೆ ಅರ್ಜುನ ಮತ್ತು ಕೃಷ್ಣ ಇರುವ ಫೋಟೋವನ್ನು ಕೆಲವರು ತಮ್ಮ ಮನೆಯಲ್ಲಿ ಹಾಕಿಕೊಂಡಿರುತ್ತಾರೆ. ಮಹಾಭಾರತದಲ್ಲಿ ಕುಟುಂಬ ಕಲಹದ ಬಗ್ಗೆ ತೋರಿಸಿದ್ದು, ಕೌರವರ ಪರಿವಾರ ನಾಶವಾಗುತ್ತದೆ. ಇದರಿಂದ ಮಹಾಭಾರತದ ಯುದ್ಧವಿರುವ ಫೋಟೋವನ್ನು ಬಳಸಿದರೆ ಕುಟುಂಬ ಕಲಹ ಹೆಚ್ಚಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಯುದ್ಧ ಅಥವಾ ಅಸ್ತ್ರ – ಶಸ್ತ್ರಗಳನ್ನು ಹೊಂದಿರುವ ಫೋಟೋಗಳನ್ನು ಹಾಕಬಾರದು.

click me!