ಉಡುಗೊರೆ ಕೊಡುವುದು, ತೆಗೆದುಕೊಳ್ಳುವುದು ಮಾಡುವುದರಿಂದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ. ಮನಸ್ಸಿಗೆ ಇಷ್ಟವಾಗುವ ಉಡುಗೊರೆಗಳನ್ನು ಕೊಡಲು ಎಲ್ಲರೂ ಇಚ್ಚಿಸುತ್ತಾರೆ. ಇಲ್ಲವೇ ದುಬಾರಿಯಾಗಿರುವ ವಸ್ತುಗಳನ್ನು, ಶೋ ಪೀಸ್‌ಗಳನ್ನು ಹೀಗೆ ಹಲವು ರೀತಿಯ ಉಡುಗೊರೆಗಳನ್ನು ಕೊಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಚಂದ ಕಾಣುವ ಅಥವಾ ಶೋಗೆಂದೇ ಇರುವ ಕೆಲವು ಗಿಫ್ಟ್‌ಗಳನ್ನು ಕೊಡುವುದರಿಂದ ಬಾಂಧವ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಯಾವ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದಲ್ಲ ಎಂಬುದನ್ನು ನೋಡೋಣ..
ವಾಸ್ತು ಶಾಸ್ತ್ರದಲ್ಲಿ ಹೇಳಲಾದ ಸರಳ ನಿಯಮಗಳ ಪಾಲನೆಯು ಅನೇಕ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ವಾಸ್ತು ಶಾಸ್ತ್ರವು ಇತ್ತೀಚೆಗೆ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಮನೆಯ ವಾಸ್ತು ಹೀಗಿದ್ದರೆ ಉತ್ತಮ, ದೇವರ ಕೋಣೆಯ ವಾಸ್ತು ಸರಿಯಾಗಿದ್ದರೆ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.
ಹೌದು. ಹಾಗಾಗಿ ಮನೆಯನ್ನು ಕಟ್ಟಿಸುವಾಗ ವಾಸ್ತುಶಾಸ್ತ್ರದ ಬಗ್ಗೆ ಹೆಚ್ಚು ಗಮನವಿಟ್ಟು ಎಲ್ಲವು ವಾಸ್ತು ಪ್ರಕಾರವೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ವಾಸ್ತು ಶಾಸ್ತ್ರವು ಬರಿ ಮನೆಗಷ್ಟೇ ಸೀಮಿತವಾಗಿಲ್ಲದೇ ನಿತ್ಯದಲ್ಲಿ ಮಾಡುವ ಹಲವು ಕೆಲಸಗಳಲ್ಲೂ ರೂಢಿ ಮಾಡಿಕೊಳ್ಳಬೇಕಾದ ಶಾಸ್ತ್ರವಾಗಿದೆ. ಸ್ನೇಹಿತರ, ಬಂಧುಗಳ ಮನೆಗೆ, ಶುಭಕಾರ್ಯಗಳಿಗೆ ಹೋಗುವಾಗ ಉಡುಗೊರೆ ತೆಗೆದುಕೊಂಡು ಹೋಗುವುದು ಪದ್ಧತಿ. ಹಾಗೆಯೇ ವಾಸ್ತು ಶಾಸ್ತ್ರದಲ್ಲಿ ಉಡುಗೊರೆ ಕೊಡುವಾಗ ಸಹ ಕೆಲವು ನಿಯಮಗಳನ್ನು ಪಾಲಿಸಬೇಕೆಂಬ ಬಗ್ಗೆ ಹೇಳಲಾಗಿದೆ. ಕೆಲವು ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದು ಒಳ್ಳೆಯದಲ್ಲವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಯಾವ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದಲ್ಲ ಎಂಬುದನ್ನು ನೋಡೋಣ..
ಇದನ್ನು ಓದಿ: ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದು...!
ದೇವರ ಮೂರ್ತಿ
ಹಬ್ಬ ಅಥವಾ ಇನ್ನಿತರ ಶುಭ ಕಾರ್ಯಗಳಲ್ಲಿ ದೇವರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಶಾಸ್ತ್ರದ ಪ್ರಕಾರ ದೇವರ ಮೂರ್ತಿಯನ್ನು ತರುವುದಷ್ಟೇ ಅಲ್ಲದೇ ಅದನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ಮುಖ್ಯವಾಗುತ್ತದೆ. ನಾವು ಉಡುಗೊರೆಯಾಗಿ ಮೂರ್ತಿಯನ್ನು ನೀಡಿದಾಗ ಅದನ್ನು ಸರಿಯಾಗಿ ಪೂಜಿಸದೇ ಇದ್ದಲ್ಲಿ ಅದರ ಅಶುಭ ಪ್ರಭಾವ ಉಡುಗೊರೆ ನೀಡಿದವರ ಕುಟುಂಬದ ಮೇಲಾಗುತ್ತದೆ. ಹಾಗಾಗಿ ಪ್ರತಿಷ್ಠಾಪಿಸಿ, ನಿಯಮ ಬದ್ಧವಾಗಿ ಪೂಜಿಸಬೇಕಾದ ಮೂರ್ತಿಗಳನ್ನು ಉಡುಗೊರೆಯಾಗಿ ಕೊಡುವುದು ಒಳ್ಳೆಯದಲ್ಲವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಲ್ಲದೇ ಕೆಲವು ಮೂರ್ತಿಗಳನ್ನು ಅಥವಾ ಪೇಂಟಿಂಗ್‌ಗಳನ್ನು ಅಂದರೆ ಲಡ್ಡುಗೋಪಾಲ, ಗಣೇಶ, ರಾಧಾಕೃಷ್ಣ ಜೋಡಿಯ ಚಿತ್ರ ಮುಂತಾದ ಪ್ರತಿಷ್ಠಾಪನೆ ಮಾಡದೇ ಆರಾಧಿಸುವಂಥ ಚಿತ್ರಗಳನ್ನು ನೀಡಬಹುದೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಪೆನ್ನು ಮತ್ತು ರುಮಾಲು
ವಾಸ್ತು ಶಾಸ್ತ್ರದ ಪ್ರಕಾರ ಪೆನ್ನನ್ನು ಮತ್ತು ರುಮಾಲನ್ನು ಉಡುಗೊರೆ ರೂಪದಲ್ಲಿ ನೀಡಬಾರದೆಂದು ಹೇಳಲಾಗುತ್ತದೆ. ಈ ರೀತಿಯ ಉಡುಗೊರೆ ನೀಡುವುದರಿಂದ, ಉಡುಗೊರೆ ಕೊಟ್ಟವರು ನಕಾರಾತ್ಮಕ ಪ್ರಭಾವವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಕೆಲಸಕ್ಕೆ ಸಂಬಂಧಿಸಿದ ಯಾವುದಾದರೂ ವಸ್ತುವನ್ನು ಗಿಫ್ಟ್ ರೂಪದಲ್ಲಿ ನೀಡಿದರು ಸಹ ಅದರಿಂದ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುವ ಮುಖಾಂತರ ಅದರ ನಕಾರಾತ್ಮಕ ಪ್ರಭಾವವನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾಗಿ ಈ ರೀತಿಯ ವಸ್ತುಗಳನ್ನು ಉಡುಗೊರೆಯಾಗಿ ನೀಡದಿರುವುದು ಉತ್ತಮ.
ಇದನ್ನು ಓದಿ: ಶರೀರದ ಈ ಭಾಗಗಳಲ್ಲಿರುವ ಮಚ್ಚೆ ತರುತ್ತೆ ಅದೃಷ್ಟ..!
ಹರಿತವಾದ ವಸ್ತುಗಳು
ಹರಿತವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದೆಂದು ಹೇಳಲಾಗುತ್ತದೆ. ಉದಾಹರಣೆಗೆ ಚಾಕು, ಕತ್ತಿ, ಖಡ್ಗ ಈ ರೀತಿಯ ವಸ್ತುಗಳನ್ನು ಗಿಫ್ಟ್ ಕೊಡಬಾರದೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಹೊತ್ತಿ ಉರಿಯುವಂಥ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ನಿಷಿದ್ಧವೆಂದು ಹೇಳಲಾಗುತ್ತದೆ. ಬೆಂಕಿ ಪೊಟ್ಟಣ, ಮೊಂಬತ್ತಿ, ಶೋ ಲೈಟ್‌ಗಳು ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಈ ರೀತಿಯ ಗಿಫ್ಟ್ ಅನ್ನು ನೀಡುವುದರಿಂದ ಸಂಬಂಧಗಳು ಹಾಳಾಗುತ್ತವೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಪದೇ ಪದೇ ಅನಾರೋಗ್ಯವಾ..? ಕಿಟಕಿಯ ದಿಕ್ಕು ಯಾವ ಕಡೆಗಿದೆ..?
ನೀರಿಗೆ ಸಂಬಂಧಿಸಿದ ವಸ್ತುಗಳು
ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದು ಒಳ್ಳೆಯದಲ್ಲವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಉದಾಹರಣೆದೆ ಶೋ ಪೀಸ್‌ಗಳಲ್ಲಿ ಬರುವ ಜಲಪಾತಗಳು, ಅಕ್ವೇರಿಯಂ, ಆಮೆ ಮುಂತಾದ ನೀರಿನ ವಸ್ತುಗಳನ್ನು ಗಿಫ್ಟ್ ನೀಡಬಾರದೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ರೀತಿಯ ಗಿಫ್ಟ್ ನೀಡುವುದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಗುತ್ತದೆ.