ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದು...!

By Suvarna News  |  First Published Dec 15, 2020, 2:37 PM IST

ಉಡುಗೊರೆ ನೀಡುವಾಗ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಬಗ್ಗೆ ಗಮನ ನೀಡುವುದು ಉತ್ತಮ. ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಉಡುಗೊರೆ ನೀಡುವಾಗ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ವಸ್ತುಗಳನ್ನು ಕೊಟ್ಟರೆ ಇದರಿಂದ ಪರಸ್ಪರ ಸಂಬಂಧ ಚೆನ್ನಾಗಿರುವುದಲ್ಲದೇ, ಜೀವನದಲ್ಲಿ ಒಳಿತನ್ನು ಕಾಣಬಹುದಾಗಿದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಉಡುಗೊರೆಯಾಗಿ ನೀಡಬಹುದಾದ ವಸ್ತುಗಳ ಬಗ್ಗೆ ತಿಳಿಯೋಣ...


ಸನಾತನ ಸಂಸ್ಕೃತಿಯಲ್ಲಿ ಪ್ರತಿ ಆಚರಣೆಗೂ ವಿಶೇಷವಾದ ಅರ್ಥವಿರುತ್ತದೆ. ಶುಭಕಾರ್ಯಗಳಿಗೆ ಹೋಗುವುದು, ಉಡುಗೊರೆ ಕೊಡುವುದು ಅಂತಹ ಆಚರಣೆಗಳಲ್ಲೊಂದು. ಹಾಗಾಗಿ ವಿಶೇಷ ಸಂದರ್ಭಗಳಲ್ಲಿ ಗಿಫ್ಟ್ ಕೊಡುವುದು ಮತ್ತು ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಗಿಫ್ಟ್ ಕೊಡುವ ವಿಶೇಷ ಸಂದರ್ಭ ಬಂತೆಂದರೆ ಗಿಫ್ಟ್ ಏನು ಕೊಡುವುದು? ಎಂಬ ಚಿಂತೆ ಕಾಡದೇ ಇರುವುದಿಲ್ಲ. ಗಿಫ್ಟ್ ಕೊಡುವವರಿಗೂ ಮತ್ತು ತೆಗೆದುಕೊಳ್ಳುವವರಿಗೂ ಇಷ್ಟವಾಗುವಂತಿರಬೇಕು. ಯಾವ ಬಗೆಯ ವಸ್ತುವನ್ನು ಉಡುಗೊರೆಯಾಗಿ ನೀಡಿದರೆ ಖುಷಿಯಾಗಬಹುದು ಎಂಬ ಬಗ್ಗೆ ಯೋಚಿಸಿ ಸುಸ್ತಾದರೂ ಹೊಳೆಯುವುದಿಲ್ಲ. ಈ ರೀತಿಯ ಗೊಂದಲಕ್ಕೆ ವಾಸ್ತು ಶಾಸ್ತ್ರದಲ್ಲಿ ಉತ್ತಮವಾದ ಉಪಾಯವಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನಸ್ಸಿಗೆ ಬಂದ ಉಡುಗೊರೆ ನೀಡುವುದರಿಂದ ಕೊಡುವವರಿಗೂ ಮತ್ತು ತೆಗೆದುಕೊಳ್ಳುವವರಿಗು ಒಳಿತಾಗುವುದಿಲ್ಲ. ಕೆಲವು ಬಗೆಯ ಉಡುಗೊರೆ ನೀಡುವುದರಿಂದ ಮನೆ ಮತ್ತು ಮನಸ್ಸಿಗೆ ಒಳಿತಾಗುವುದಿಲ್ಲವೆಂದು ಹೇಳಲಾಗುತ್ತದೆ. ಅದೇ ರೀತಿ ಕೆಲವು ಬಗೆಯ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದರಿಂದ ಎಲ್ಲರಿಗು ಒಳಿತಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಇದನ್ನು ಓದಿ: ಶರೀರದ ಈ ಭಾಗಗಳಲ್ಲಿರುವ ಮಚ್ಚೆ ತರುತ್ತೆ ಅದೃಷ್ಟ..! 

ಏಳು ಕುದುರೆಗಳು ಜೊತೆಯಾಗಿ ಓಡುತ್ತಿರುವ ಚಿತ್ರ

Tap to resize

Latest Videos

ಮನೆಗಳಲ್ಲಿ ಏಳು ಕುದುರೆಗಳು ಓಡುತ್ತಿರುವ ಚಿತ್ರ ಅಥವಾ ಫೋಟೋವನ್ನು ಹಾಕಿರುತ್ತಾರೆ. ಏಳು ಕುದುರೆಗಳು ಜೊತೆಯಾಗಿ ಓಡುತ್ತಿರುವ ಫೋಟೋವನ್ನು ಉಡುಗೊರೆಯಾಗಿ ನೀಡುವುದು ಶುಭವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಫೋಟೋವನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಶುಭವಷ್ಟೇ ಅಲ್ಲದೆ ಇದು ಸೂರ್ಯದೇವನ ಪ್ರತೀಕವೆಂದು ಸಹ ಹೇಳಲಾಗುತ್ತದೆ. ಈ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಯಜಮಾನನ ಆದಾಯ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆಂದು ಹೇಳಲಾಗುತ್ತದೆ.

ಬೆಳ್ಳಿ
ಜ್ಯೋತಿಷ್ಯ ಶಾಸ್ತ್ರದಲ್ಲೂ ಬೆಳ್ಳಿಗೆ ವಿಶೇಷವಾದ ಮಹತ್ವವಿದೆ. ಹಾಗೆಯೇ ವಾಸ್ತು ಶಾಸ್ತ್ರದ ಅನುಸಾರ ಬೆಳ್ಳಿ ಅತ್ಯಂತ ಶುಭ ಸೂಚಕವೆಂದು ಹೇಳಲಾಗುತ್ತದೆ. ಹಾಗಾಗಿ ಉಡುಗೊರೆ ನೀಡುವಾಗ ಬೆಳ್ಳಿಯ ವಸ್ತುವನ್ನು ನೀಡಿದರೆ ಶುಭವೆಂದು ಹೇಳಲಾಗುತ್ತದೆ. ಬೆಳ್ಳಿಯ ನಾಣ್ಯ ಅಥವಾ ಬೆಳ್ಳಿಯ ಸಾಮಗ್ರಿಯನ್ನು ಉಡುಗೊರೆಯಾಗಿ ನೀಡಿದರೆ ತೆಗೆದುಕೊಂಡವರ ಏಳಿಗೆಯಾಗುವುದಲ್ಲದೇ ಅವರ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಉಡುಗೊರೆಗೆ ಬೆಳ್ಳಿ ಉತ್ತಮ ಆಯ್ಕೆಗಳಲ್ಲೊಂದಾಗಿದೆ.

ಇದನ್ನು ಓದಿ: ಪದೇ ಪದೇ ಅನಾರೋಗ್ಯವಾ..? ಕಿಟಕಿಯ ದಿಕ್ಕು ಯಾವ ಕಡೆಗಿದೆ..? 

ಮಣ್ಣಿನಿಂದ ಮಾಡಿದ ವಸ್ತುಗಳು
ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ನೀಡುವುದು ಶುಭವೆಂದು ಹೇಳಲಾಗುತ್ತದೆ. ಮಣ್ಣಿನಿಂದ ತಯಾರಿಸಿದ ಪಾತ್ರೆ ಅಥವಾ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡುವುದರಿಂದ ತೆಗೆದುಕೊಂಡವರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಮತ್ತು ಮಾಡುವ ಕೆಲಸಗಳಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಮನೆಯಲ್ಲಿ ನೆಮ್ಮದಿ-ಶಾಂತಿ ನೆಲೆಸುತ್ತದೆ ಎಂದು ಸಹ ಹೇಳಲಾಗುತ್ತದೆ.

ಲಾಫಿಂಗ್ ಬುದ್ಧ
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಲಾಫಿಂಗ್ ಬುದ್ಧ ಇಟ್ಟಿರುವುದನ್ನು ನೋಡಿರುತ್ತೇವೆ. ಉಡುಗೊರೆಯಾಗಿ ಲಾಫಿಂಗ್ ಬುದ್ಧ ನೀಡುವುದರಿಂದ ಜೀವನದಲ್ಲಿ ಖುಷಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಲಾಫಿಂಗ್ ಬುದ್ಧ ಶೋ ಪೀಸ್ ಮನೆಯಲ್ಲಿ ಇರುವುದರಿಂದ ಮನೆಗೆ ಶುಭವಾಗುವುದಲ್ಲದೇ, ಮನೆಯಲ್ಲಿ ಜಗಳ, ಪರಸ್ಪರ ಮನಸ್ತಾಪಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ ಮನೆಯಲ್ಲಿ ಖುಷಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಶೃಂಗಾರ ಸಾಮಗ್ರಿ
ಮನೆಯ ಮಹಿಳೆಯರಿಗೆ ಶೃಂಗಾರದ ಸಾಮಗ್ರಿಗಳನ್ನು ಅಂದರೆ ವಸ್ತ್ರ, ಆಭರಣ ಅಥವಾ ಸಜ್ಜಾಗಲು ಉಪಯೋಗಿಸುವ ಇನ್ನಿತರ ವಸ್ತುಗಳನ್ನು ನೀಡುವುದರಿಂದ ಜೀವನದಲ್ಲಿ ಸುಖ ಮತ್ತು ಸೌಭಾಗ್ಯ ವೃದ್ಧಿಸುತ್ತದೆ.

ತಾಜಾ ಹೂ ಮತ್ತು ಗಿಡ
ಉಡುಗೊರೆಯಾಗಿ ತಾಜಾ ಹೂಗಳನ್ನು ಅಥವಾ ಗಿಡಗಳನ್ನು ನೀಡಿದರೆ ಸಂಬಂಧಗಳಲ್ಲಿರುವ ಬಾಂಧವ್ಯ ಚೆನ್ನಾಗಿರುತ್ತದೆಂದು ಹೇಳಲಾಗುತ್ತದೆ. ಅಲ್ಲದೇ ಹೂ, ಬಳ್ಳಿಗಳ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡುವುದು ಸಹ ಶುಭವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಮಹಿಳೆಯರು ತೆಂಗಿನ ಕಾಯಿಯನ್ನು ಒಡೆಯಬಾರದು… ಏಕೆ ಗೊತ್ತಾ..? 

ನವಿಲು ಗರಿ
ನವಿಲು ಗರಿಯನ್ನು ಉಡುಗೊರೆಯಾಗಿ ನೀಡುವುದರಿಂದ ಆ ಮನೆಯ ವಾಸ್ತು ದೋಷವೇನೇ ಇದ್ದರೂ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಆ ವ್ಯಕ್ತಿಯ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ.

click me!