DKD Super Mom: 2 ತಿಂಗಳ ಎಳೆ ಮಗು, ಕ್ಯಾನ್ಸರ್ ಗೆದ್ದ ಅಮ್ಮ: ಈ ತಾಯಂದಿರ ಡ್ಯಾನ್ಸ್ ನೋಡಿ ಜಡ್ಜಸ್ ಶಾಕ್!

Published : Sep 08, 2026, 04:27 PM IST
DKD Super Mom

ಸಾರಾಂಶ

ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಮೆಗಾ ಆಡಿಷನ್ ಶುರುವಾಗಿದೆ. ಅಮ್ಮಂದಿರ ಅದ್ಭುತ ಡ್ಯಾನ್ಸ್, ಭಾವುಕ ಕತೆಗಳು ಹಾಗೂ ಕ್ಯಾನ್ಸರ್ ಗೆದ್ದ ತಾಯಿಯ ವಿಶೇಷ ಪ್ರದರ್ಶನ ಗಮನ ಸೆಳೆಯುತ್ತಿದೆ.

ಅಮ್ಮಂದಿರು ಅಂದರೆ ಮನೆ, ಮಕ್ಕಳು, ಜವಾಬ್ದಾರಿ ಎಂದಷ್ಟೇ ಅಲ್ಲ. ತಮ್ಮ ಕನಸುಗಳಿಗೂ ರೆಕ್ಕೆ ಕೊಟ್ಟು ವೇದಿಕೆ ಏರಬಹುದು ಎಂಬುದನ್ನು ತೋರಿಸಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಸಜ್ಜಾಗಿದೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಹೊಸ ಶೋ ಆರಂಭಕ್ಕೂ ಮುನ್ನವೇ ಕುತೂಹಲ ಮೂಡಿಸಿದ್ದು, ಮೆಗಾ ಆಡಿಷನ್‌ನ ಅಧಿಕೃತ ಪ್ರೋಮೋ ಭರ್ಜರಿ ಸದ್ದು ಮಾಡುತ್ತಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಪ್ರತಿಭಾವಂತ ಅಮ್ಮಂದಿರು ಈ ಮೆಗಾ ಆಡಿಷನ್‌ನಲ್ಲಿ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಒಂದೊಂದು ಪ್ರದರ್ಶನವೂ ವಿಭಿನ್ನವಾಗಿದ್ದು, ಅಮ್ಮಂದಿರ ಎನರ್ಜಿ ಮತ್ತು ಆತ್ಮವಿಶ್ವಾಸ ನೋಡುಗರ ಗಮನ ಸೆಳೆಯುತ್ತಿದೆ.

ಮಕ್ಕಳಾದ್ಮೇಲೂ ಕನಸುಗಳಿಗೆ ಬ್ರೇಕ್ ಇಲ್ಲ!

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ನಲ್ಲಿ ಅಮ್ಮಂದಿರ ಡ್ಯಾನ್ಸ್ ಮಾತ್ರವಲ್ಲ, ಅವರ ಬದುಕಿನ ಕತೆಗಳಿಗೂ ಜಾಗವಿದೆ. ಮಕ್ಕಳು, ಕುಟುಂಬ ಹಾಗೂ ವೈಯಕ್ತಿಕ ಜವಾಬ್ದಾರಿಗಳ ನಡುವೆಯೂ ತಮ್ಮೊಳಗಿನ ಕಲಾವಿದೆಯನ್ನು ಜೀವಂತವಾಗಿಟ್ಟುಕೊಂಡು ಡ್ಯಾನ್ಸ್ ವೇದಿಕೆ ಏರಿರುವ ತಾಯಂದಿರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕೆಲವರು ಪುಟ್ಟ ಮಕ್ಕಳನ್ನೂ ಕರೆದುಕೊಂಡೇ ಆಡಿಷನ್‌ಗೆ ಬಂದಿದ್ದಾರೆ. ತಾಯ್ತನದ ಜವಾಬ್ದಾರಿಗಳ ನಡುವೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ವೇದಿಕೆ ಏರಿರುವ ಇವರ ಕತೆಗಳನ್ನು ಜಡ್ಜ್‌ಗಳಾದ ಶಿವರಾಜ್‌ಕುಮಾರ್, ತರುಣ್ ಸುಧೀರ್, ವಿಜಯ್ ರಾಘವೇಂದ್ರ ಹಾಗೂ ರಚಿತಾ ರಾಮ್ ಕೇಳಿದ್ದಾರೆ.

ಕ್ಯಾನ್ಸರ್ ಗೆದ್ದ ಅಮ್ಮನ ಡ್ಯಾನ್ಸ್!

ಈ ಮೆಗಾ ಆಡಿಷನ್‌ನಲ್ಲಿ ಕ್ಯಾನ್ಸರ್‌ನಿಂದ ಬಳಲಿದ್ದ ತಾಯಿಯೊಬ್ಬರು ಭಾಗಿಯಾಗಿರುವುದು ವಿಶೇಷ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಅವರು ಮತ್ತೆ ನೃತ್ಯ ಮಾಡುವಷ್ಟು ಆತ್ಮವಿಶ್ವಾಸದಿಂದ ವೇದಿಕೆ ಏರಿದ್ದಾರೆ. ಇವರ ಕತೆ ಕೇಳಿದ ಶಿವಣ್ಣ ಸೇರಿದಂತೆ ಜಡ್ಜ್‌ಗಳು ಭಾವುಕರಾಗಿದ್ದಾರೆ. ಮತ್ತೊಂದೆಡೆ, ಕೇವಲ ಎರಡು ತಿಂಗಳ ಮಗುವನ್ನು ಹೊತ್ತು ಆಡಿಷನ್‌ಗೆ ಬಂದ ತಾಯಿಯೊಬ್ಬರನ್ನು ನೋಡಿ ‘ಚಿನ್ನಾರಿ ಮುತ್ತ’ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮಗುವಿನ ವಯಸ್ಸಿನ ಬಗ್ಗೆಯೂ ಅವರು ಕುತೂಹಲದಿಂದ ಪ್ರಶ್ನಿಸಿದ್ದಾರೆ.

ಡ್ಯಾನ್ಸ್‌ನಲ್ಲಿ ಅಮ್ಮಂದಿರ ಎನರ್ಜಿ ನೋಡಿದ್ರೆ ಶಾಕ್!

ಇಲ್ಲಿ ಬಂದಿರುವ ಸ್ಪರ್ಧಿಗಳು ಸಾಮಾನ್ಯ ಪ್ರತಿಭೆಗಳಲ್ಲ. ಎರಡು-ಮೂರು ಮಕ್ಕಳ ತಾಯಂದಿರಾಗಿದ್ದರೂ ಡ್ಯಾನ್ಸ್ ಮಾಡುವಾಗ ಅವರ ಎನರ್ಜಿ ಮಾತ್ರ ಕಮ್ಮಿಯಾಗಿಲ್ಲ. ಪ್ರೋಮೋದಲ್ಲಿನ ಅವರ ಅದ್ಭುತ ಹೆಜ್ಜೆಗಳು, ವೇಗ ಮತ್ತು ಆತ್ಮವಿಶ್ವಾಸ ನೋಡಿದರೆ ‘ಸೂಪರ್ ಮಾಮ್’ ಎಂಬ ಹೆಸರೇ ಇವರಿಗೆ ಸೂಕ್ತ ಎನ್ನಿಸುವಂತಿದೆ. ಆದರೆ ಮೆಗಾ ಆಡಿಷನ್‌ನಲ್ಲಿ ಮಿಂಚುವ ಈ ಪ್ರತಿಭಾವಂತ ಅಮ್ಮಂದಿರ ಪೈಕಿ ಅಂತಿಮವಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಈಗಾಗಲೇ ಶುರುವಾಗಿದೆ.

ಹಾರುವ ಹಕ್ಕಿಯ ರೆಕ್ಕೆಯಂತೆ ಡಿಕೆಡಿ ಸೆಟ್

ಈ ಬಾರಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಶೋನ ಸೆಟ್ ಕೂಡ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಹಾರುವ ಹಕ್ಕಿಯ ರೆಕ್ಕೆಗಳ ಕಲ್ಪನೆಯಲ್ಲಿ ರೂಪಿಸಲಾಗಿರುವ ವೇದಿಕೆ, ಅಮ್ಮಂದಿರ ಕನಸುಗಳಿಗೆ ರೆಕ್ಕೆ ನೀಡುವಂತಿದೆ. ಒಟ್ಟಿನಲ್ಲಿ ಡ್ಯಾನ್ಸ್, ಎಮೋಷನ್, ತಾಯ್ತನದ ಕತೆಗಳು ಹಾಗೂ ಮನರಂಜನೆ-ಎಲ್ಲವನ್ನೂ ಒಟ್ಟಿಗೆ ನೀಡುವ ಪ್ರಯತ್ನ ಈ ಶೋನಲ್ಲಿದೆ. ಅಮ್ಮಂದಿರ ಅದ್ಭುತ ಎನರ್ಜಿ ಈಗಾಗಲೇ ಪ್ರೋಮೋ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು, ಈ ಬಾರಿ ಡಿಕೆಡಿ ವೇದಿಕೆಯಲ್ಲಿ ‘ಸೂಪರ್ ಮಾಮ್’ಗಳ ಹವಾ ಜೋರಾಗುವ ಲಕ್ಷಣ ಕಾಣಿಸುತ್ತಿದೆ.

ಈ ವಾರದಿಂದಲೇ ಮೆಗಾ ಆಡಿಷನ್

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಮೆಗಾ ಆಡಿಷನ್ ಈ ವಾರಾಂತ್ಯದಿಂದ ಆರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಶೋ ಪ್ರಸಾರವಾಗಲಿದೆ. ಜೀ ಕನ್ನಡ ತನ್ನ ಅಧಿಕೃತ ಪೇಜ್‌ನಲ್ಲಿ ಮೆಗಾ ಆಡಿಷನ್‌ನ ಪ್ರೋಮೋ ಹಂಚಿಕೊಂಡಿದ್ದು, ಅಮ್ಮಂದಿರ ವಿಭಿನ್ನ ಡ್ಯಾನ್ಸ್ ಪ್ರದರ್ಶನಗಳು ಮತ್ತು ಅವರ ಬದುಕಿನ ಕತೆಗಳು ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್
ನಿಧಿಗೆ ಕರ್ಣ ಮಾಡಿಕೊಟ್ಟ ಟೇಸ್ಟಿ ತರಕಾರಿ ದೋಸೆಯನ್ನ ಎರಡು ವಿಧಾನದಲ್ಲಿ ಮಾಡ್ಕೊಳ್ಳಿ