ಮಧ್ಯಾಹ್ನದ ಮನರಂಜನೆಯಲ್ಲಿ ‘ಓಂ ನಮಃ ಶಿವಾಯ’ ಮತ್ತು ‘ಕಥೆಯ ರಾಜಕುಮಾರಿ’!

By Kannadaprabha NewsFirst Published Jul 13, 2020, 9:05 AM IST
Highlights

ಸ್ಟಾರ್‌ ಸುವರ್ಣ ವಾಹಿನಿ ಮಧ್ಯಾಹ್ನ ಧಾರಾವಾಹಿಗಳನ್ನು ಪ್ರಸಾರ ಮಾಡುವ ಮೂಲಕ ಮನರಂಜನೆ ಸಂಜೆಗಷ್ಟೆಸೀಮಿತವಲ್ಲ ಎಂಬುದನ್ನು ಈ ಹಿಂದೆ ಸಾಬೀತು ಮಾಡಿತ್ತು. ಈಗ ಮತ್ತೆ ಮಧ್ಯಾಹ್ನದ ಮನರಂಜನೆಯಲ್ಲಿ ಎರಡು ಹೊಸ ಧಾರಾವಾಹಿಗಳನ್ನು ಪ್ರಸಾರಮಾಡುತ್ತಿದೆ. ಜುಲೈ 13 ರಿಂದ ಮಧ್ಯಾಹ್ನ 12.30 ಕ್ಕೆ ಓಂ ನಮಃ ಶಿವಾಯ ಹಾಗೂ 1.30ಕ್ಕೆ ಕಥೆಯ ರಾಜಕುಮಾರಿ ಧಾರಾವಾಹಿಗಳು ಪ್ರಸಾರವಾಗಲಿವೆ.

ಓಂ ನಮಃ ಶಿವಾಯ (ಕಥಾ ಹಂದರ)

ಬ್ರಹ್ಮ ದೇವರು ಜಗತ್ತನ್ನು ಸೃಷ್ಟಿಸುವ ಸಮಯದಲ್ಲಿ, ಶಿವನ ಅರ್ಧನಾರೀಶ್ವರ ಸ್ವರೂಪದಿಂದ ಹೊರಬರುವ ಆದಿ ಶಕ್ತಿ, ಲೋಕಕಲ್ಯಾಣಕ್ಕಾಗಿ 106 ಅವತಾರಗಳನ್ನು ತಾಳುತ್ತಾಳೆ. ಈ 106 ಬಾರಿಯು ಶಿವನನ್ನು ಮದುವೆಯಾಗಲು ವಿಫಲಳಾಗುತ್ತಾಳೆ. ಆಗ ಬ್ರಹ್ಮ ತನ್ನ ಮಾನಸ ಪುತ್ರ ದಕ್ಷನಿಗೆ, ಆದಿ ಶಕ್ತಿ ನಿನ್ನ ಮಗಳಾಗಿ ಅವತರಿಸಲೆಂದು ತಪಸ್ಸು ಮಾಡು ಎಂದು ಸೂಚಿಸುತ್ತಾನೆ. ಆದಿ ಶಕ್ತಿ ದಕ್ಷನ ಮಗಳು ಸತಿಯಾಗಿ ಹುಟ್ಟುತ್ತಾಳೆ. ಶಿವನಿಗಾಗಿ ತಪಸ್ಸು ಮಾಡಿ, ಅವನನ್ನು ಮದುವೆಯಾಗುತ್ತಾಳೆ.

ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!

ಭೈರವ ಸ್ವರೂಪಿ ಶಿವ ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದಾಗ ದಕ್ಷ ಅವನನ್ನು ಸತಿ ಎದುರು ಅವಮಾನಿಸುತ್ತಾನೆ, ಇದನ್ನು ಸಹಿಸಲಾಗದೆ ಸತಿ ತನ್ನ ಪ್ರಾಣ ತ್ಯಾಗ ಮಾಡುತ್ತಾಳೆ. ಸತಿಯನ್ನು ಕಳೆದುಕೊಂಡ ಶಿವ ಘೋರ ತಪಸ್ಸಿನಲ್ಲಿ ಯುಗಗಳನ್ನೆ ಕಳೆಯುತ್ತಾನೆ.

ಶಿವ - ಪಾರ್ವತಿ ಮದುವೆ

ಆದಿ ಶಕ್ತಿ ಮತ್ತೊಮ್ಮೆ ಪರ್ವತ ರಾಜನ ಮಗಳು ಪಾರ್ವತಿಯಾಗಿ ಅವತರಿಸಿ ಶಿವನಿಗಾಗಿ ನೂರಾರು ವರ್ಷಗಳ ತಪಸ್ಸು ಮಾಡುತ್ತಾಳೆ. ನಂತರ ಶಿವ ಮತ್ತು ಪಾರ್ವತಿ ಮದುವೆಯಾಗುತ್ತಾರೆ. ಶಿವ ಪಾರ್ವತಿಗೆ ಅನೇಕ ತಾಂತ್ರಿಕ ವಿದ್ಯೆಗಳನ್ನು ನೀಡುತ್ತಾನೆ. ಇದರಿಂದ ಪಾರ್ವತಿ ನವದುರ್ಗೆಯರು ಮತ್ತು ಮಾತ್ರಿಕೆಯರ ಅವತಾರ ತಾಳುತ್ತಾಳೆ. ರಕ್ತಬೀಜ, ಮಹೀಷಾಸುರ, ಶುಂಭ ನಿಶುಂಭ, ಚಂಡ ಮುಂಡ ಮುಂತಾದ ರಾಕ್ಷಸರ ನಿಗ್ರಹ ಮಾಡುತ್ತಾಳೆ. ಇದಲ್ಲದೆ ಕಾರ್ತೀಕೇಯ ಮತ್ತು ಗಣೇಶನ ಜನನದ ಕಥೆಗಳನ್ನು ಓಂ ನಮಃ ಶಿವಾಯ ಧಾರಾವಾಹಿಯಲ್ಲಿ ನೋಡಬಹುದು.

ಮಹಾದೇವನ ಮಹಾ ಅವತಾರಗಳು

ವೀರಭದ್ರ, ಸ್ವಾಮಿ ಆದಿಯೋಗಿ, ಅಘೋರಿ, ನಟರಾಜ, ಕಾಲ ಭೃರವ ಹೀಗೆ ಶಿವನ ಅನೇಕ ಅವತಾರಗಳ ಹಿನ್ನಲೆ, ಜಲಂಧರ, ಆಂಧಕ, ಬ್ರಹ್ಮಾಸುರರಂತ ದಾನವರ ಸಂಹಾರ, ಕಲಿಯುಗದಲ್ಲಿ ಮೋಕ್ಷ ಪ್ರಾಪ್ತಿಗೆ ಮನುಷ್ಯರು ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ಶಿವನ ಜಾನಪದದ ಕಥೆಗಳು, ದ್ವಾದಷ ಜ್ಯೋತಿರ್ಲಿಂಗದ ಸಮಗ್ರ ಕಥೆಗಳ ಜೊತೆ ಶಿವನ ಬಗೆಗಿನ ಅನೇಕ ಸಂಗತಿಗಳನ್ನು ಧಾರಾವಾಹಿಯ ಸಂಚಿಕೆಗಳಲ್ಲಿ ಅಮೋಘವಾಗಿ ಸೆರೆಹಿಡಿಯಲಾಗಿದೆ. ಜುಲೈ 13ರಿಂದ ಮಧ್ಯಾಹ್ನ 12.30ಕ್ಕೆ ಇದೆಲ್ಲವನ್ನು ‘ಓಂ ನಮಃ ಶಿವಾಯ’ ಧಾರಾವಾಹಿಯಲ್ಲಿ ನೋಡಬಹುದಾಗಿದೆ.

ಕೃಷ್ಣನ ಪ್ರೇಯಸಿ 'ರಾಧೆ' ಪಾತ್ರಕ್ಕೆ ಜೀವ ತುಂಬಿದ ನಟಿ ಯಾರು ಗೊತ್ತಾ?

ಕಥೆಯ ರಾಜಕುಮಾರಿ (ಕಥಾ ಹಂದರ)

ಮಧ್ಯಾಹ್ನದ ಮನರಂಜನೆಯ ಮತ್ತೊಂದು ಭಾಗ ಕಥೆಯ ರಾಜಕುಮಾರಿ ಅವನಿ ಎನ್ನುವ ಹುಡುಗಿಯ ಕಥೆ. ರಾಧಾಕೃಷ್ಣ ಎನ್ನುವವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಹುಡುಗಿ ಅವನಿ ಅವರ ಮಗ ಅಕ್ಷಯ್‌ನನ್ನು ಮದುವೆಯಾಗುವ ಸಂದರ್ಭ ಎದುರಾಗುತ್ತೆ. ಶಿಕ್ಷಿತಳಲ್ಲದ ಅವನಿ, ಸಿಂಗಾಪುರ್‌ನಿಂದ ಬಂದಿರುವ ಅಕ್ಷಯ್‌ಗೆ ಜೋಡಿಯಾಗುತ್ತಾಳಾ? ರಾಧಾಕೃಷ್ಣ ಅವರ ಕುಟುಂಬದವರು ಅವನಿಯನ್ನು ತಮ್ಮ ಮನೆಯ ಸೊಸೆ ಎಂದು ಒಪ್ಪುತ್ತಾರಾ ಅನ್ನೋದು ಧಾರಾವಾಹಿಯ ಕಥೆ. ಆಶಿಕಾ ಗೋಪಾಲ್‌ ಪಡುಕೋಣೆ, ಮಧುಸೂದನ್‌ ಮತ್ತು ಪ್ರಿಯಾಂಕ ‘ಕಥೆಯ ರಾಜಕುಮಾರಿ’ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

click me!