ಮನೆಗೊಬ್ಬ ಮಗ ಬೇಕು ಎಂದು ಕಂಡ ಕಂಡ ದೇವರನ್ನೆಲ್ಲಾ ಬೇಡಿಕೊಳ್ಳುವವರು ಹಲವರು ಇದ್ದಾರೆ. ಅವರೊಮ್ಮೆ ಈ ಮಾತನ್ನು ಕೇಳಿಸಿಕೊಳ್ಳಿ ಅಂತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್
ಮಗ ವಂಶೋದ್ಧಾರಕ, ಕುಲ ದೀಪಕ, ಹೆಣ್ಣಾದರೆ ಆಕೆ ಕುಲದಿಂದ ಹೊರಕ್ಕೆ ಹೋಗುವವಳು ಎಂದೆಲ್ಲಾ ಇಂದಿಗೂ ಅಂದುಕೊಳ್ಳುವ ಅಮ್ಮಂದಿರು ಅದೆಷ್ಟೋ ಮಂದಿ ಇದ್ದಾರೆ. ಏನಿಲ್ಲವೆಂದರೂ ಕೊನೆಗೆ ಪಿಂಡದಾನ ಮಾಡಲಿಕ್ಕಾದರೂ ಮನೆಗೊಬ್ಬ ಮಗ ಬೇಕೇ ಬೇಕು ಎಂದು ಇಂದಿಗೂ ಹೇಳುವವರು ಅದೆಷ್ಟು ಮಂದಿ ಇಲ್ಲ? ಮಕ್ಕಳೇ ಇಲ್ಲ ಎಂದು ಇಂದು ಕೊರಗುವ ಹಲವು ಅಮ್ಮ-ಅಪ್ಪಂದಿರ ನಡುವೆ ಮನೆಯಲ್ಲಿ ಇರುವವರು ಹೆಣ್ಣುಮಕ್ಕಳಷ್ಟೇ ಎಂದು ಸಂಕಟಪಡುವವರೂ ಇದ್ದಾರೆ. ಇಂದು ಹೆಣ್ಣು ಎಷ್ಟೇ ಸಾಧನೆ ಮಾಡಲಿ, ಎಲ್ಲಾಕ್ಷೇತ್ರಗಳಲ್ಲಿಯೂ ಮುಂದೆ ಹೋಗಿರಲಿ, ಅಪ್ಪ-ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊತ್ತಿರಲಿ... ಆದರೂ ಕೆಲವು ಪಾಲಕರಿಗೆ ಅದೇನೋ ಗಂಡು ಮಕ್ಕಳು ಇಲ್ಲ ಎನ್ನುವ ಕೊರಗು. ಅಂಥವರಿಗೆಲ್ಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ಭಾಗ್ಯಲಕ್ಷ್ಮಿ ಸೀರಿಯಲ್ ತಕ್ಕ ಉತ್ತರ ಕೊಟ್ಟಿದೆ. ಇದು ಕೇವಲ ಧಾರಾವಾಹಿಯಾದರೂ ಇಂಥ ಘಟನೆಗಳು ಅದೆಷ್ಟೋ ಮನೆಗಳಲ್ಲಿ ನಡೆಯುತ್ತಲೇ ಇದೆ. ಅದಕ್ಕೆ ಸಾಕ್ಷಿಯೆಂಬಂತೆ ಇಂದು ಹಳ್ಳಿ ಮೂಲೆಗಳಲ್ಲಿಯೂ ತಲೆ ಎತ್ತಿರುವ ವೃದ್ಧಾಶ್ರಮಗಳು. ಇನ್ನು ದೊಡ್ಡ ಸಿಟಿಗಳ ಮಾತಂತೂ ಬಿಡಿ. ಗಲ್ಲಿ ಗಲ್ಲಿಗಳಲ್ಲಿಯೂ ವೃದ್ಧಾಶ್ರಮಗಳೇ ಕಾಣಿಸುತ್ತಿವೆ!
ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್ ವಿಷಯಕ್ಕೆ ಬರುವುದಾದರೆ ನಾಯಕ ತಾಂಡವ್ ಕಟ್ಟಿಕೊಂಡವಳು, ಮಕ್ಕಳು ಹಾಗೂ ಅಮ್ಮನನ್ನು ಬಿಟ್ಟು ಇಟ್ಟುಕೊಂಡವಳ ಪಾಲಾಗಿದ್ದಾನೆ. ಶ್ರೇಷ್ಠಾಳ ಮಾತು ಕೇಳಿ ಮನೆಯ ಸಾಲವನ್ನೂ ಪತ್ನಿ, ಅಮ್ಮನ ಮೇಲೆ ಹಾಕಿ ಕೈತೊಳೆದುಕೊಳ್ಳುವ ಪ್ಲ್ಯಾನ್ ಮಾಡಿದ್ದ. ಆದರೆ ಅಮ್ಮ ಕುಸುಮಾ ಅವನ ಮುಖಕ್ಕೆ ಉಗಿದು ಉಪ್ಪಿನಕಾಯಿ ಹಾಕಿ ಬಂದಿದ್ದಾಳೆ. ಏನೇ ಆದರೂ ತಾನು ಮತ್ತು ತನ್ನ ಸೊಸೆ ಸೋಲನ್ನಪ್ಪುವುದಿಲ್ಲ ಎಂದು ಮಗನಿಗೆ ಸವಾಲು ಎಸೆದು ಬಂದಿದ್ದಾಳೆ. ಗಂಡನನ್ನು ಬಿಟ್ಟು ಕುಸಿದು ಹೋಗಿರುವ ಸೊಸೆಗೆ ಈ ಅತ್ತೆಯೇ ಅಮ್ಮ ಆಗಿದ್ದಾಳೆ.
ಎದ್ದು ಬಂದು ಎದೆಗೆ ಒದೆಯೋದಾ? ಹೊಸ ವರ್ಷದ ಶುರುವಿನಲ್ಲಿಯೇ ಬಿಗ್ಬಾಸ್ನಲ್ಲಿ ಇದೆಂಥ ಕಿತ್ತಾಟ?
ಈ ಮಧ್ಯೆಯೇ ಕುಸುಮಾ ಆಡಿದ ಮಾತುಗಳು ಗಂಡು ಮಕ್ಕಳಿಗೆ ಮಾತ್ರವಲ್ಲ, ಹೆತ್ತವರನ್ನು ನೋಯಿಸುವ ಪ್ರತಿ ಮಕ್ಕಳಿಗೂ ಅನ್ವಯ ಆಗುತ್ತದೆ. ಇಲ್ಲಿ ತಾಂಡವ್ ಅಮ್ಮನಿಗೆ ದುಡ್ಡು ಕೊಡುವ ಮಾತನಾಡಿದ್ದನ್ನು ಕೇಳಿ ಕುಸುಮಾ ರೋಸಿ ಹೋಗಿದ್ದಾಳೆ. ತನ್ನ ಮಾತು ಕೇಳಿ ಕೊನೆಯ ಪಕ್ಷ ತಾಂಡವ್ ತಾನು ಮಾಡಿದ್ದು ತಪ್ಪು ಎಂದು ಅರಿವಾಗಿ ವಾಪಸಾಗುವ ಮಾತನಾಡಬಹುದು ಎನ್ನುವ ಒಂದೇ ಒಂದು ಆಸೆಯೂ ಕಮರಿ ಹೋದ ಬೆನ್ನಲ್ಲೇ ಸೊಸೆ ಭಾಗ್ಯಳ ಎದುರು ಕಣ್ಣೀರಾಗಿದ್ದಾಳೆ ಕುಸುಮಾ. ಸಂಬಂಧ ಉಳಿಸಿಕೊಳ್ಳಲು ಇಷ್ಟಪಡುವವರು ಜಗಳ ಮಾಡ್ತಾರೆ, ಪ್ರಶ್ನೆ ಕೇಳ್ತಾರೆ, ವಾದ ಮಾಡ್ತಾರೆ. ಆದರೆ ಇಷ್ಟು ಸುಲಭದಲ್ಲಿ ಸಂಬಂಧ ಬಿಟ್ಟು ಕೊಡುವುದಿಲ್ಲ. ಆದರೆ ತಾಂಡವ್ ಯಾವುದನ್ನೂ ಮಾಡಲಿಲ್ಲ. ಮುಖಕ್ಕೆ ದುಡ್ಡು ಎಸಿತೀನಿ ಎಂದ ಎಂದು ಕಣ್ಣೀರು ಹಾಕಿದ್ದಾಳೆ.
'ನನ್ನ ಹೃದಯ ಒಡೆದು ಹೋಗ್ತಿದೆ. ಸಂಬಂಧ ಉಳಿಸಿಕೊಳ್ಳಲು ಸಣ್ಣ ಪ್ರಯತ್ನವನ್ನೂ ಅವನು ಮಾಡಲಿಲ್ಲ. ನನಗೆ ಸತ್ತಂತೆ ಆಗ್ತಿದೆ. ಆತ ನನ್ನ ಒಡಲು ಒಡೆದುಕೊಂಡು ಹೊರಗೆ ಬಂದಾಗ ನನಗೆ ಎಷ್ಟು ನೋವಾಗಿತ್ತು ಗೊತ್ತಾ? ಆದರೆ ಆಗ ನೋವಿನಲ್ಲಿ ಸುಖ ಇತ್ತು. ಆದರೆ ಇವತ್ತು ಸಂಬಂಧ ಮುರಿದುಕೊಂಡ ತಾಂಡವ್ ಅದರ 100ರಷ್ಟು ನೋವು ಕೊಟ್ಟ. ಮಗ ಬಂದ ಖುಷಿಯಲ್ಲಿದ್ದ ನನಗೆ ಇಂದು ಸತ್ತ ಅನುಭವ ಆಗ್ತಿದೆ ಎನ್ನುತ್ತಾಳೆ ಕುಸುಮ. ಮಕ್ಕಳನ್ನು ಹೇಗೆ ಸಾಕಬೇಕು ಎಂದು ನನ್ನ ನೋಡಿ ಕಲಿಯಿರಿ ಎಂದು ಊರೆಗೆಲ್ಲಾ ಬುದ್ಧಿ ಹೇಳುತ್ತಿದ್ದೆ. ಆದರೆ ಈಗೇನು ಮಾಡಲಿ? ನನಗೆ ನಾಚಿಕೆ ಆಗ್ತಿದೆ. ಊರಿನವರು ಕೂಡ ಇದ್ದರೆ ಕುಸುಮನಂಥ ಮಗ ಇರ್ಬೇಕು ಅಂತಿದ್ದರು, ಈಗ ನೀನು ಹೇಗಾದರೂ ಇರು, ಕುಸುಮನ ಮಗನ ಥರ ಮಾತ್ರ ಆಗಬೇಡ ಅಂತಾರೆ. ನಾನು ಹೇಗೆ ಮುಖ ತೋರಿಸಲಿ ಎಂದು ಕುಸುಮಾ ಭಾಗ್ಯಳನ್ನು ಪ್ರಶ್ನಿಸುತ್ತಾಳೆ.
ಆದರೆ ಆಕೆ ಸುಲಭದಲ್ಲಿ ಸೋಲನ್ನಪ್ಪುವ ಹೆಣ್ಣಲ್ಲ. ಮಗ ಮಗ ತಲೆಮೇಲೆ ಇಟ್ಟುಕೊಂಡು ಮೆರೆಸಿದೆ. ಅದಕ್ಕೆ ಆ ಭ್ರಮೆಯಿಂದ ಆಚೆಗೆ ಬಂದಿದ್ದೇನೆ. ನೀನು ಯೋಚನೆ ಮಾಡಬೇಡ. ನಿನಗೆ ನಾನಿದ್ದೇನೆ. ನೀನು ನನ್ನ ಜವಾಬ್ದಾರಿ, ನಾನು ನೋಡಿಕೊಳ್ತೇನೆ. ನಿನಗೆ ಮತ್ತು ಮಕ್ಕಳಿಗೆ ಕಷ್ಟ ಬರದ ಹಾಗೆ ನಾನು ನೋಡಿಕೊಳ್ತೇನೆ ಎನ್ನುತ್ತಾಳೆ. ಅತ್ತೆ-ಸೊಸೆಯ ಈ ಬಾಂಧವ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದರೆ, ಹಲವರು ಮಗನೇ ಬೇಕು ಎಂದು ಹರಕೆ ಹೊತ್ತುಕೊಳ್ಳುವ ಅಮ್ಮಂದಿರು ಸ್ವಲ್ಪ ಈ ಸೀರಿಯಲ್ ನೋಡಬೇಕು ಎನ್ನುತ್ತಿದ್ದಾರೆ.