
ಬೆಂಗಳೂರು (ನ.26): ಬಿಗ್‌ಬಾಸ್ ಕನ್ನಡ ಸೀಸನ್ 10ರ ಜನಪ್ರಿಯ ಸ್ಪರ್ಧಿ, 'ಹಳ್ಳಿಕಾರ್ ಒಡೆಯ' ಎಂದೇ ಖ್ಯಾತಿ ಪಡೆದಿರುವ ವರ್ತೂರ್ ಸಂತೋಷ್ ಅವರು ಮತ್ತೊಮ್ಮೆ ಬಿಗ್ ಬಾಸ್ ರನ್ನರ್ ಅಪ್‌ಗೆ ನೀಡುವ ಬಹುಮಾನದ ಕುರಿತು ಮಾತನಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಪ್ರಸಕ್ತ ಸೀಸನ್ 12ರ ರನ್ನರ್ ಅಪ್‌ಗೆ ₹10 ಲಕ್ಷ ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದು, ಆದರೆ ಅದಕ್ಕೆ ಒಂದು ಕುತೂಹಲಕಾರಿ ಷರತ್ತನ್ನು ವಿಧಿಸಿದ್ದಾರೆ. ನಾನು ಪ್ರಚಾರ ಮಾಡುವ ಹಳ್ಳಿಕಾರ್ ಎತ್ತುಗಳನ್ನು ಬಿಗ್ ಬಾಸ್ ಮನೆಯ ಮೂಲಕ ರಾಜ್ಯದ ಜನತೆಗೆ ತೋರಿಸಲು ಅವಕಾಶ ಮಾಡಿಕೊಟ್ಟರೆ ಮಾತ್ರ ನಗದು ಬಹುಮಾನ ಕೊಡುತ್ತೇನೆ. ಇಲ್ಲವಾದರೆ, ಈ ಹಣವನ್ನು ಹಳ್ಳಿಕಾರ್ ಎತ್ತುಗಳ ರೇಸ್‌ಗೆ ಬಳಸುತ್ತೇನೆ ಎಂದಿದ್ದಾರೆ.
ನ್ಯೂಸ್ ಬೀಟ್ ಕನ್ನಡ ಎಂಬ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ವರ್ತೂರ್ ಸಂತೋಷ್ ಅವರು ರನ್ನರ್ ಅಪ್‌ಗೆ ₹10 ಲಕ್ಷ ಕೊಡುವ ತಮ್ಮ ಹಳೆಯ ಮಾತಿಗೆ ಈಗಲೂ ಬದ್ಧರಾಗಿದ್ದಾರೆ. ಆದರೆ, ಈ ಬಾರಿ ಅವರು ವಿಧಿಸಿರುವ ಷರತ್ತು ಬಹಳ ವಿಶೇಷವಾಗಿದೆ. 'ಸೆಕೆಂಡ್ ರನ್ನರ್ ಅಪ್‌ಗೆ ₹10 ಲಕ್ಷ ರೂ. ಕೊಡ್ತೀನಿ ಎನ್ನುವ ಮಾತಿಗೆ ಈಗ ಕೂಡ ಬದ್ಧ. ಆದರೆ ಒಂದು ಷರತ್ತು. 'ಹಳ್ಳಿಕಾರ್ ಹೋರಿಗಳನ್ನು ಬಿಗ್‌ಬಾಸ್ ಮನೆಯೊಳಗೆ ಕರೆಸಿ. ಇದು ನನ್ನ ಮನವಿ' ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿಯೇ ಅಪರೂಪದ ಹಳ್ಳಿಕಾರ್ ತಳಿಯ ಪ್ರಚಾರಕ್ಕಾಗಿ ಮತ್ತು ತಮ್ಮ ಹಳ್ಳಿಕಾರ್ ಎತ್ತುಗಳ ಮೇಲಿನ ಪ್ರೀತಿಯಿಂದ ಸಂತೋಷ್ ಈ ಬೇಡಿಕೆಯನ್ನು ಬಿಗ್ ಬಾಸ್ ತಂಡದ ಮುಂದಿಟ್ಟಿದ್ದಾರೆ. ಈಗಾಗಲೇ ಅರ್ಧ ಸೀಸನ್ ಮುಗಿದಿದ್ದು, ಈ ಬಗ್ಗೆ ಬೇಗ ಹೋಗಿ ಮಾತನಾಡಿ ಖಚಿತಪಡಿಸಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.
ಒಂದು ವೇಳೆ ಬಿಗ್ ಬಾಸ್ ಮನೆಯೊಳಗೆ ಹಳ್ಳಿಕಾರ್ ಎತ್ತುಗಳ ಪ್ರವೇಶಕ್ಕೆ ಅವಕಾಶ ದೊರೆಯದಿದ್ದರೆ, ಆ ಹಣವನ್ನು ಸೆಕೆಂಡ್ ರನ್ನರ್ ಅಪ್‌ಗೆ ನೀಡುವ ಬದಲು ಹಳ್ಳಿಕಾರ್ ರೇಸ್‌ಗಳಿಗೆ ಬಳಸಿಕೊಳ್ಳುವುದಾಗಿ ಸಂತೋಷ್ ತಿಳಿಸಿದ್ದಾರೆ. ವಿನ್ನರ್ ಮತ್ತು ಫಸ್ಟ್ ರನ್ನರ್ ಅಪ್‌ಗೆ ದೊಡ್ಡ ಮೊತ್ತದ ಹಣ ಮತ್ತು ಉಡುಗೊರೆಗಳು ಸಿಗುತ್ತವೆ. ಆದರೆ, ಸೆಕೆಂಡ್ ರನ್ನರ್ ಅಪ್‌ಗೆ ಸಿಗುವ ಬಹುಮಾನ ಕಡಿಮೆ ಇರುತ್ತದೆ. ಹಾಗಾಗಿ ಫಿನಾಲೆ ಹಂತದವರೆಗೆ ಬಂದ ಅವರಿಗೂ ಪ್ರೋತ್ಸಾಹ ಮತ್ತು ನೆರವು ನೀಡುವ ಉದ್ದೇಶದಿಂದ ಈ ಬಹುಮಾನ ನೀಡುವುದಾಗಿ ಸಂತೋಷ್ ಹಿಂದೆ ಹೇಳಿದ್ದರು.
ಬಿಗ್‌ಬಾಸ್ ಸೀಸನ್ 12ರ ಆಟದ ಬಗ್ಗೆ ಪ್ರತಿಕ್ರಿಯಿಸಿದ ವರ್ತೂರ್ ಸಂತೋಷ್, 'ಈ ಸಲ ಆಟ ಇನ್ನು ವೇಗ ಪಡೆದುಕೊಂಡಿಲ್ಲ. ಹಾಗಂತ ಸ್ಲೋ ಆಗಿ ಕೂಡ ಇಲ್ಲ. ಮೀಡಿಯಂ ಆಗಿದೆ. ಇನ್ನು ಏರಿಳಿತ ಮುಂದುವರೆದಿದೆ. ಕೆಲವರಿಗೆ ಇನ್ನು ಆಟ ಗೊತ್ತಾಗಿಲ್ಲ. ವ್ಯಕ್ತಿತ್ವದ ಆಟ ಎನ್ನುವುದನ್ನು ಮರೆತುಬಿಟ್ಟಿದ್ದಾರೆ. ಇನ್ನು ಗೊತ್ತಾಗಬೇಕು' ಎಂದು ತಮ್ಮ ವಿಮರ್ಶೆಯನ್ನು ನೀಡಿದ್ದಾರೆ. ಈ ಹಿಂದೆ ಅವರು, 'ಹಳ್ಳಿ ಪ್ರತಿಭೆ, ಮುಗ್ಧೆ' ಎಂದಿದ್ದ ಸ್ಪರ್ಧಿ ಮಲ್ಲಮ್ಮ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಆದರೆ, ಮಲ್ಲಮ್ಮ ಅವರು 35 ದಿನಗಳ ಕಾಲ ಮನೆಯಲ್ಲಿ ಇದ್ದು ಎಲಿಮಿನೇಟ್ ಆಗಿದ್ದರು.
ವರ್ತೂರ್ ಸಂತೋಷ್ ಅವರ ಹೆಸರು ಬಿಗ್ ಬಾಸ್ ಮನೆಯಲ್ಲಿದ್ದಾಗ ಹುಲಿ ಉಗುರು ಪ್ರಕರಣದ ಮೂಲಕ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ದೂರು ದಾಖಲಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಬಿಗ್‌ಬಾಸ್ ಮನೆಯಿಂದಲೇ ಅವರನ್ನು ವಶಕ್ಕೆ ಪಡೆದು, ಜೈಲು ಸೇರುವಂತಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಮನೆಯೊಳಗೆ ಬಂದಿದ್ದ ಅವರು ಫಿನಾಲೆ ಹಂತದವರೆಗೂ ತಲುಪಿದ್ದರು. ಆ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಅನೇಕ ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳ ಹುಲಿ ಉಗುರಿನ ವಿಚಾರ ತನಿಖೆಗೆ ಒಳಪಟ್ಟು ಸಂಚಲನ ಸೃಷ್ಟಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.