ಬಿಗ್ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಫುಡ್ ಪಾಯ್ಸನ್ ಕುರಿತು ಬಿಗ್ಬಾಸ್ ಮನೆಯಲ್ಲಿ ನೀಡಿದ್ದ ಹೇಳಿಕೆ ಏನು? ಹೊರ ಬಂದ ಮೇಲೆ ಹೇಳ್ತಿರೋದೇನು?
ಬಿಗ್ಬಾಸ್ ಕನ್ನಡ ಫಿನಾಲೆ ಮುಗಿದಿದ್ದರೂ ಇದರ ವಿಷಯ ಇನ್ನೂ ಹಸಿರಾಗಿಯೇ ಇದೆ. ಕಾರ್ತಿಕ್ ಬಿಗ್ಬಾಸ್ ಟ್ರೋಫಿ ಗೆದ್ದ ಬಗ್ಗೆ ಹೆಚ್ಚಿನ ಜನರಿಗೆ ತಕರಾರು ಇಲ್ಲ. ಆದರೆ ಸದ್ಯ ಚಾಲ್ತಿಯಲ್ಲಿರುವ ಹೆಸರು ಡ್ರೋನ್ ಪ್ರತಾಪ್ ಅವರದ್ದು. ಡ್ರೋನ್ ರನ್ರ್ ಅಪ್ ಆಗಿದ್ದು ಹೇಗೆ ಎಂಬ ಬಗ್ಗೆ ಸಕತ್ ಚರ್ಚೆಯಾಗುತ್ತಿದೆ. ಇದಾಗಲೇ ತಾನು ಯುವ ವಿಜ್ಞಾನಿಯೆಂದು ಹೇಳಿಕೊಂಡು ಡ್ರೋನ್ ಮಾಡುವುದಾಗಿ ಹೇಗೆ ವರ್ಷಾನುಗಟ್ಟಲೇ ಸುಳ್ಳು ಹೇಳುತ್ತಲೇ ಎಲ್ಲರನ್ನೂ ಯಾಮಾರಿಸಿದ್ದ ಡ್ರೋನ್ ಪ್ರತಾಪ್ ಸುಳ್ಳು ಹೇಳುವಲ್ಲೇ ನಿಸ್ಸೀಮ ಎಂಬ ಗಂಭೀರ ಆರೋಪಗಳೂ ಇವೆ. ಕೋವಿಡ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ತನಗೆ ಸಿಕ್ಕಾಪಟ್ಟೆ ಹಿಂಸೆ ಕೊಟ್ಟಿದ್ದರು ಎಂದು ಬಿಗ್ಬಾಸ್ಮನೆಯಲ್ಲಿ ಸುಳ್ಳು ಹೇಳಿ ಅನುಕಂಪ ಗಿಟ್ಟಿಸಿಕೊಂಡ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆಯೇ ಇದೀಗ ಪ್ರತಾಪ್ ಮಾಧ್ಯಮಗಳಿಗೆ ನೀಡಿರೋ ಹೇಳಿಕೆಯೊಂದು ಸಕತ್ ವೈರಲ್ ಆಗುತ್ತಿದ್ದು, ಡ್ರೋನ್ ಪ್ರತಾಪ್ ವಿರುದ್ಧ ಮತ್ತೆ ಸುಳ್ಳು ಪ್ರತಾಪ್ ಎಂಬ ಹಣೆಪಟ್ಟಿ ಬಂದಿದೆ.
ಅಷ್ಟಕ್ಕೂ ಬಿಗ್ಬಾಸ್ ವೀಕ್ಷಕರಿಗೆ ತಿಳಿದಿರುವಂತೆ ಈ ತಿಂಗಳ ಮೊದಲ ವಾರದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದು ಆತ್ಮಹತ್ಯೆಗೆ ಪ್ರಯತ್ನ ಎಂದೂ ಭಾರಿ ಸದ್ದು ಮಾಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿನ ವೈದ್ಯರು ಅನಾರೋಗ್ಯದ ಕಾರಣ ಕೊಟ್ಟು, ಇದು ಆತ್ಮಹತ್ಯೆಗೆ ಪ್ರಯತ್ನವೇನೂ ಅಲ್ಲ, ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಪಾಯ್ಸನ್ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟರು. ಅಷ್ಟಕ್ಕೂ ಬಿಗ್ಬಾಸ್ ಮನೆಯಲ್ಲಿ ತಮ್ಮನ್ನು ಕಡೆಗೆಣಿಸಿದ್ದಕ್ಕೆ ಪ್ರತಾಪ್ ಅಸಾಮಾಧಾನಗೊಂಡಿದ್ದರು ಎನ್ನಲಾಗಿದೆ. ಟಾಸ್ಕ್ ವಿಚಾರದಲ್ಲಿ ಕಡೆಗಣಿಸಿದ್ದಕ್ಕೆ ಪ್ರತಾಪ್ ಬೇಸರಗೊಂಡಿದ್ದರು. ಈ ವಿಚಾರವಾಗಿ ಬಿಗ್ಬಾಸ್ ಮನೆಯಲ್ಲಿ ಅವರು ಕಣ್ಣೀರು ಕೂಡ ಆಗಿದ್ದರು. ‘ನಿನಗೆ ಆಡಲು ಬರಲ್ಲ, ಪ್ಯಾನಿಕ್ ಆಗ್ತೀಯ’ ಎಂದು ಇತರ ಸ್ಪರ್ಧಿಗಳು ಹೀಯಾಳಿಸಿದ್ದರಿಂದ ಪ್ರತಾಪ್ ಕುಗ್ಗಿ ಹೋಗಿದ್ದರು ಎನ್ನಲಾಗಿತ್ತು. ಅದೇ ಇನ್ನೊಂದೆಡೆ, ಬಿಗ್ಬಾಸ್ ಮನೆಗೆ ಬಂದಿದ್ದ ಗುರೂಜಿ ಕೂಡ, ಪ್ರತಾಪ್ ಅವರು ಕುಟುಂಬದಿಂದ ದೂರವೇ ಇದ್ದರೆ ಒಳಿತಾಗುತ್ತದೆ ಎಂದು ಕೂಡ ಹೇಳಿದ್ದರು. ಇದಕ್ಕೆ ಪ್ರತಾಪ್ ಕುಗ್ಗಿ ಹೋಗಿ ಆತ್ಮಹತ್ಯೆಗೆ ಟ್ರೈ ಮಾಡಿದ್ದರು ಎನ್ನಲಾಗಿತ್ತು.
ಪ್ಲೀಸ್ ಬಾಗಿಲು ತೆಗೆಯಿರಿ... ಅಪ್ಪ-ಅವ್ವನ್ನ ನೋಡ್ಬೇಕು... ಬಿಕ್ಕಿ ಬಿಕ್ಕಿ ಅತ್ತ ಡ್ರೋನ್ ಪ್ರತಾಪ್!
ನಂತರ ವಾಪಸಾಗಿದ್ದ ಪ್ರತಾಪ್, ‘ಎರಡು ದಿನ ಉಪವಾಸ ಇದ್ದೆ. ಆಗ ಅಲ್ಲಿಯೇ ಇದ್ದ ಕೆಲವು ವಿಟಾಮಿನ್ ಮಾತ್ರೆಗಳನ್ನು ತಿಂದೆ. ಇದರಿಂದ ಹೊಟ್ಟೆ ಹಾಳಾಯಿತು’ ಎಂದಿದ್ದರು. ಆಸ್ಪತ್ರೆಯ ವೈದ್ಯರು ಕೂಡ ಅವರಿಗೆ ಗ್ಯಾಸ್ಟ್ರರೈಟಿಸ್ ಹಾಗೂ ಡಿಹೈಡ್ರೇಷನ್‌ನಿಂದ ಈ ರೀತಿ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದರು. ಡ್ರೋನ್ ಪ್ರತಾಪ್ ಹೇಳಿದ ಹೇಳಿಕೆಯಿಂದ ಆತ್ಮಹತ್ಯೆಗೆ ಪ್ರಯತ್ನ ಅಲ್ಲ ಎಂದು ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.
ಆದರೆ ಇದೀಗ, ಡ್ರೋನ್ ಪ್ರತಾಪ್ ಬಿಗ್ಬಾಸ್ನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಬೇರೊಂದು ಹೇಳಿಕೆಯನ್ನೇ ನೀಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಡ್ರೋನ್ ಪ್ರತಾಪ್ ಈಗ ಹೇಳಿದ್ದೇನೆಂದರೆ, ನಾನು ಸರಿಯಾಗಿ ಊಟ ಮಾಡುತ್ತಾ ಇರಲಿಲ್ಲ. ರೆಫ್ರಿಜರೇಟರ್ನಲ್ಲಿರುವ ಯಾವುದೋ ಹಳೆಯ ಊಟ ತಿಂದೆ. ಇದರಿಂದ ಫುಡ್ ಪಾಯ್ಸನ್ ಆಯ್ತು. ಏನೋ ಕೆಲವರು ಈ ರೀತಿ ಹೇಳಿದ್ದಾರೆ. ಇದೆಲ್ಲಾ ಕೇಳಿದಾಗ ನಗು ಬರುತ್ತದೆ ಎಂದು ಹೇಳಿದ್ದಾರೆ. ಆದರೆ ಫ್ರಿಡ್ಜ್ನಲ್ಲಿ ಇಟ್ಟಿದ್ದ ಹಳೆಯ ಊಟ ಮಾಡಿದೆ ಎಂದು ಬಿಗ್ಬಾಸ್ ಮನೆಯಲ್ಲಿ ಇರುವಾಗ ಹೇಳಿಕೆ ನೀಡದೇ, ಅಲ್ಲಿ ಬೇರೊಂದು ಹೇಳಿಕೆ ಕೊಟ್ಟು, ಇದೀಗ ಅದನ್ನು ಮರೆತು ಬೇರೊಂದು ಹೇಳಿಕೆ ಕೊಡುತ್ತಿರುವುದು ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಡ್ರೋನ್ ಪ್ರತಾಪ್ ಈಗಲೂ ಹಾಟ್ ವಿಷಯ ಆಗಿದ್ದಾರೆ.
ರೀಲ್ ಬಿಟ್ಟ ವಿವಾದದ ಬೆನ್ನಲ್ಲೇ ಮತ್ತೊಂದು ಆರೋಪದಲ್ಲಿ ಪ್ರತಾಪ್! ಡ್ರೋನ್ ನೀಡ್ತೇನೆಂದು 35 ಲಕ್ಷ ಟೋಪಿ?