
ಸಹನಾಮೂರ್ತಿಯಂತಿದ್ದ, ಅಳುಮುಂಜಿಯೆಂದೇ ಅಂದುಕೊಂಡಿದ್ದ ಪುಟ್ಟಕ್ಕನ ಮಗಳು ಸಹನಾ, ತನ್ನ ಮೇಲೆ ಆಗಿರುವ ದೌರ್ಜನ್ಯವನ್ನು ಖಂಡಿಸಿ ಅತ್ತೆ ಹೇಳಿದ ಕಾರಣ, ತಾಳಿಯನ್ನೇ ತೆಗೆದುಕೊಟ್ಟಳು. ಅಮೃತಧಾರೆಯಲ್ಲಿ ಜೈದೇವನ ಹೆಂಡ್ತಿ ಮಲ್ಲಿಗೆ ಆಗ್ತಿರೋ ಅವಮಾನವನ್ನು ಭೂಮಿಕಾ ಸೌಮ್ಯ ರೂಪದಲ್ಲಿಯೇ ಮುಖಕ್ಕೆ ಹೊಡೆದವರ ಥರ ತಿರುಗೇಟು ನೀಡಿದಳು, ಪತಿ-ಮಕ್ಕಳು ಅಂತೆಲ್ಲಾ ಹೇಳಿದ್ದನ್ನು ಕೇಳಿಕೊಂಡು ಎಲ್ಲವನ್ನೂ ಸಹಿಸಿಕೊಂಡಿದ್ದ ಭಾಗ್ಯಲಕ್ಷ್ಮಿ, ಮಗಳಿಗೆ ಕೇಡು ಮಾಡಿದ ಟೀಚರ್ ವಿರುದ್ಧವೇ ತಿರುಗಿ ಬಿದ್ದಳು... ಹೀಗೆ ಇಂದಿನ ಧಾರಾವಾಹಿಗಳ ಕಾನ್ಸೆಪ್ಟ್ ಬದಲಾಗುತ್ತಿದೆ ಎಂದೇ ಬಿಂಬಿತವಾಗುತ್ತಿದೆ.
ಹಿಂದೆಲ್ಲಾ, ಸೀರಿಯಲ್ಗಳಲ್ಲಿ ಹೆಣ್ಣು ಎಂದರೆ ಪ್ರತಿಭಟಿಸಿದ್ದು ಕಡಿಮೆಯೇ. ಅದೇನೇ ಇದ್ದರೂ ಘಾಟಿ ಹೆಂಗಸು, ವಿಲನ್ಗಷ್ಟೇ ಸೀಮಿತವಾಗಿತ್ತು. ಹೀರೋಯಿನ್ ಎಂದರೆ ಎಲ್ಲವನ್ನೂ ಸಹಿಸಿಕೊಂಡು ಇರುವವಳೇ ಎನ್ನುವುದಾಗಿತ್ತು. ಇಂದಿನ ಸೀರಿಯಲ್ಗಳಲ್ಲಿಯೂ ಈ ಕಾನ್ಸೆಪ್ಟ್ ಇಲ್ಲವೆಂದೇನಲ್ಲ. ಕೆಲವು ಧಾರಾವಾಹಿಗಳಲ್ಲಿ ನಾಯಕಿಯರು ಅತೀ ಎನಿಸುವಷ್ಟು ಮುಗ್ಧರಾಗಿ ಇರುವುದೂ ಇದೆ. ವಿಲನ್ಗೆ ಕಪಾಳಮೋಕ್ಷ ಮಾಡಬಾರದೇ ಎಂದು ಎಷ್ಟೋ ಬಾರಿ ನೆಟ್ಟಿಗರು ಹೇಳುತ್ತಿರುವುದೂ ಉಂಟು. ಆದರೆ ಹೀಗೆ ಮಾಡಿದರೆ ಸೀರಿಯಲ್ಗಳ ಟಿಆರ್ಪಿ ರೇಟ್ ಕಡಿಮೆಯಾಗುತ್ತದೆ, ನಾಯಕಿ ಏನಿದ್ದರೂ ಅಳುತ್ತಲೇ ಇರಬೇಕು, ಅವಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ಹೆಚ್ಚು ಜನ ನೋಡುತ್ತಾರೆ ಎನ್ನುವ ಪರಿಕಲ್ಪನೆಯೂ ಇತ್ತು. ಆದರೆ ಈಗ ಕಾಲಕ್ಕೆ ತಕ್ಕಂತೆ ಸೀರಿಯಲ್ಗಳ ಪರಿಕಲ್ಪನೆ ಬದಲಾಗುತ್ತಿದೆ.
ತಾಳಿಯೇ ಸರ್ವಸ್ವ ಎನ್ನೋ ಪುಟ್ಟಕ್ಕನ ಎದುರೇ ಅದನ್ನು ಕಿತ್ತೆಸೆದ ಮಗಳು! ಸರಿ-ತಪ್ಪುಗಳ ವಿಮರ್ಶೆ ಶುರು...
ಹೌದು. ಇದೀಗ ಧಾರಾವಾಹಿಗಳ ಪ್ರೊಮೋ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾದಾಗ, ಅವುಗಳನ್ನು ಜನರು ಅಕ್ಸೆಪ್ಟ್ ಮಾಡಿಕೊಳ್ಳುವ ರೀತಿ ಕಂಡರೆ ಕಾಲ ಬದಲಾಗಿದೆ, ವೀಕ್ಷಕರ ಮನಸ್ಥಿತಿಯೂ ಬದಲಾಗುತ್ತಿದೆ ಎನ್ನುವುದು ತಿಳಿದುಬರುತ್ತದೆ. ಅಳುಮುಂಜಿ ರೀತಿ ಅಳ್ತಾ ಕೂರದೇ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೆಣ್ಣು ಸಿಡಿದೇಳಬೇಕು ಅಂತ ಕನ್ನಡ ಸೀರಿಯಲ್ಸ್ ತೋರಿಸುವಷ್ಟು ಪ್ರಗತಿಪರ ಆಗುತ್ತಿದೆ. ಅದನ್ನು ವೀಕ್ಷಕರು ಅಕ್ಸೆಪ್ಟ್ ಮಾಡುತ್ತಿರುವುದು ಒಳ್ಳೇ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ.
ಅಷ್ಟಕ್ಕೂ ಸೀರಿಯಲ್ಗಳು ಟಿಆರ್ಪಿ ಮೇಲೆ ನಿಂತಿವೆ. ಟಿಆರ್ಪಿ ರೇಟ್ ಕಡಿಮೆಯಾಗುತ್ತಿದ್ದರೆ, ಸೀರಿಯಲ್ಗಳ ಕಥೆಯನ್ನೇ ಬದಲಿಸಲಾಗುತ್ತದೆ. ಅಂಥ ಸಂದರ್ಭದಲ್ಲಿ ಹೆಚ್ಚಾಗಿ ನಾಯಕಿಯರಿಗೆ ವಿಷ ಹಾಕುವುದು ಮಾಮೂಲಾಗಿದೆ. ಈಗಲೂ ಅದೇನೂ ನಿಂತಿಲ್ಲ. ಅಮೃತಧಾರೆ ಸೀರಿಯಲ್ನಲ್ಲಿ ಜೈದೇವನ ಪತ್ನಿ ಮಲ್ಲಿಗ ವಿಷ ಹಾಕುವುದು, ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಪುಟ್ಟಕ್ಕನ ಮಗಳು ಸಹನಾಗೆ ಅತ್ತೆ ವಿಷ ಹಾಕುವುದು ಇಂದಿಗೂ ಇದೆ. ವಿಷ ಪ್ರಾಷನ ಮಾಡಿಸಿದ್ದು ಗೊತ್ತಾದ ಮೇಲೂ ನಾಯಕಿ ಅದನ್ನು ಸಹಿಸಿಕೊಂಡು ಇರುವುದು ಇಲ್ಲಿಯವರೆಗಿನ ವಸ್ತುವಾಗಿತ್ತು. ಒಟ್ಟಿನಲ್ಲಿ ಸಹನಾಮೂರ್ತಿ, ತಾಳ್ಮೆಯ ಪ್ರತಿಬಿಂಬ ಎಂದೆಲ್ಲಾ ಹೆಣ್ಣಿಗೆ ಏನು ಬಿರುದುಗಳನ್ನು ನೀಡಲಾಗಿವೆಯೋ ಅವೆಲ್ಲವೂ ಸೀರಿಯಲ್ ನಾಯಕಿಯಲ್ಲಿ ಇರುತ್ತಿದ್ದವು. ಆದರೆ ಇದೀಗ ಕಾಲ ಬದಲಾಗುತ್ತಿದೆ ಎನ್ನುವುದಕ್ಕೆ ಇಂದಿನ ಸೀರಿಯಲ್ಗಳೇ ಸಾಕ್ಷಿಯಾಗಿವೆ. ಪುಟ್ಟಕ್ಕನ ಮಗಳು ತಾಳಿ ಕಿತ್ತುಕೊಟ್ಟ ಸಂದರ್ಭದಲ್ಲಿ ನೆಟ್ಟಿಗರು ಅಪಾರ ಪ್ರಮಾಣದಲ್ಲಿ ಮೆಚ್ಚುಗೆಯ ಕಮೆಂಟ್ ಹಾಕಿರುವುದೂ ಇದಕ್ಕೆ ಸಾಕ್ಷಿಯಾಗಿದೆ.
ಕೊನೆಗೂ ರಣಚಂಡಿ ಅವತಾರ ಎತ್ತಿದ ಭಾಗ್ಯ: ಕನ್ನಿಕಾ ಮಿಸ್ಗೆ ಶಿಕ್ಷೆ ಆಗತ್ತಾ, ಅಥ್ವಾ..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.