ಇವತ್ತಿನ ಹಾಟ್ ಫೇವರಿಟ್ ಅಡುಗೆ ಮತ್ತು ಕಾಮಿಡಿ. ಅಡುಗೆ ಷೋ ಯೂಟ್ಯೂಬಿನಿಂದ ಹಿಡಿದು ಚಾನಲ್ ತನಕ ಜನಪ್ರಿಯ. ಹಾಗೆಯೇ, ಹಾಸ್ಯಭರಿತ ಕಂಟೆಂಟ್ ಕೂಡ ಎಲ್ಲರಿಗೂ ಇಷ್ಟ. ಇದೀಗ ಮೊದಲ ಬಾರಿಗೆ ಅಡುಗೆ ಮತ್ತು ಹಾಸ್ಯವನ್ನು ಬೆಸೆದ ಒಂದು ರಿಯಾಲಿಟಿ ಷೋ ಕನ್ನಡ ಕಿರುತೆರೆಯಲ್ಲಿ ಆರಂಭವಾಗುತ್ತಿದೆ. ಅದರ ಹೆಸರು ‘ಕುಕ್ಕು ವಿತ್ ಕಿರಿಕ್ಕು’.
ಈ ರಿಯಾಲಿಟಿ ಷೋ ಕನ್ನಡಿಗರಿಗೆ ನೀಡುತ್ತಿರುವುದು ಸ್ಟಾರ್ ಸುವರ್ಣ. ಇಂದು ರಾತ್ರಿ 8.30ಕ್ಕೆ ಈ ಷೋ ಆರಂಭ. ಇನ್ನು ಮುಂದೆ ಪ್ರತೀ ಶನಿವಾರ, ಭಾನುವಾರ 9 ಗಂಟೆಗೆ ಈ ಶೋ ಪ್ರಸಾರವಾಗಲಿದೆ. ಇದು ಅಡುಗೆ ಮತ್ತು ಕಾಮಿಡಿ ಎರಡೂ ಸೇರಿರುವ ವಿನೂತನ ಷೋ.
ಇದನ್ನು ಉದ್ಘಾಟನೆ ಮಾಡುತ್ತಿರುವುದು ಅಡುಗೆಯಲ್ಲೂ ಆಸಕ್ತಿಯಿರುವ, ಅಪ್ರತಿಮ ಸೆನ್ಸ್ ಆ್ ಹ್ಯೂಮರ್ ಇರುವ ಕಿಚ್ಚ ಸುದೀಪ್. ಹೀಗಾಗಿಯೇ ಈ ಕಾರ್ಯಕ್ರಮದ ಬಗ್ಗೆ ಅತೀವ ಕುತೂಹಲ ಮೂಡಿದೆ.
ಏ.10 ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ 'ಕುಕ್ಕು ವಿತ್ ಕಿರಿಕ್ಕು'!
ಈವರೆಗೆ ಅಡುಗೆ ಕುರಿತು ರಿಯಾಲಿಟಿ ಶೋಗಳು ಕನ್ನಡದಲ್ಲಿ ಬಂದಿವೆ. ಕಾಮಿಡಿ ಪ್ರಧಾನ ಕಾರ್ಯಕ್ರಮಗಳೂ ಪ್ರಸಾರಗೊಂಡಿವೆ. ಈ ಎರಡೂ ವಿಚಾರಗಳು ಅತಿ ಹೆಚ್ಚು ಜನರ ಇಷ್ಟದ ವಿಚಾರಗಳು. ಆ ಎರಡನ್ನೂ ಒಂದೇ ಶೋದಲ್ಲಿ ಸೇರಿಸಿ ಮಜಾವಾದ ಮನರಂಜನೆ ಒದಗಿಸಲು ಕುಕ್ಕು ವಿತ್ ಕಿರಿಕ್ಕು ಶೋ ಕಿರುತೆರೆಗೆ ಬಂದಿದೆ. ಇಲ್ಲಿ ಎರಡು ತಂಡಗಳು ಇರುತ್ತವೆ. ಅದರಲ್ಲಿ ಒಂದು ತಂಡ ಕುಕ್ಕು. ಇನ್ನೊಂದು ತಂಡ ಕಿರಿಕ್ಕು. ಈ ಎರಡು ತಂಡಗಳ ಮಧ್ಯೆ ಸ್ಪರ್ಧೆ ನಡೆಯುತ್ತದೆ. ಒಂದೊಂದು ತಂಡದಲ್ಲಿ ಒಬ್ಬೊಬ್ಬರು ಗೆಲ್ಲುತ್ತಾರೆ. ಇಲ್ಲಿ ಸ್ಪರ್ಧೆಯ ತೀರ್ಪುಗಾರರಾಗಿ ಸಿಹಿ ಕಹಿ ಚಂದ್ರು ಮತ್ತು ಅಂತಾರಾಷ್ಟ್ರೀಯ ಮಟ್ಟದ ಶೆಫ್ ಉಡುಪಿಯ ಕನ್ನಡಿಗ ವೆಂಕಟೇಶ್ ಭಟ್ ಇರುತ್ತಾರೆ. ಅಕುಲ್ ಬಾಲಾಜಿ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ.
ಅಡುಗೆ ಕಾರ್ಯಕ್ರಮದಲ್ಲಿ ಯಶ್ ತಾಯಿ: ಪುತ್ರನ ನೆಚ್ಚಿನ ರೆಸಿಪಿ ರಿವೀಲ್!
ಈ ಕಾರ್ಯಕ್ರಮದ ವಿಶೇಷತೆ ಎಂದರೆ ಕನ್ನಡ ಕಿರುತೆರೆಯ 16 ಮಂದಿ ನಟ ನಟಿಯರು ಒಂದೇ ವೇದಿಕೆ ಮೇಲೆ ಅಡುಗೆ, ಆಟದ ಜೊತೆಗೆ ಕಚಗುಳಿ ಇಡುವಂತೆ ಜೋಕ್ ಹಾರಿಸಲಿದ್ದಾರೆ. ಕುಕ್‌ಗಳಾಗಿ ಸುಂದರ್ ವೀಣಾ, ಕಿರಿಕ್ ಕೀರ್ತಿ, ಚಂದನ್, ಕವಿತಾ ಗೌಡ, ವನಿತಾ ವಾಸು, ಗಾಯಕಿ ರೆಮೋ ಅಲಿಯಾಸ್ ರೇಖಾ ಮೋಹನ್, ನಟಿ ಅಪೂರ್ವ, ಲಾಸ್ಯ ಭಾಗವಹಿಸುತ್ತಾರೆ. ಕಿರಿಕ್ ಮಾಡಲು ಅರುಣ್ ಸಾಗರ್, ಒಳ್ಳೆ ಹುಡ್ಗ ಪ್ರಥಮ್, ನಯನಾ, ಕಾರುಣ್ಯ ರಾಮ್, ಚೈತ್ರಾ ವಾಸುದೇವನ್, ಅಭಿಜ್ಷಾ ಭಟ್ ಹಾಗೂ ಜಗ್ಗಪ್ಪ ಇರುತ್ತಾರೆ. ಇಷ್ಟೂ ಜನ ಒಂದೇ ವೇದಿಕೆಯಲ್ಲಿ ಮನರಂಜನೆ ನೀಡಲಿದ್ದಾರೆ.