
ಭಕ್ತ ಪ್ರಹ್ಲಾದ ಹಾಗೂ ಹಿರಣ್ಯ ಕಶಿಪು
ಕಿರುತೆರೆಯ ಜನಪ್ರಿಯ ಶೋ 'ನನ್ನಮ್ಮ ಸೂಪರ್ ಸ್ಟಾರ್' ನಲ್ಲಿ ಪ್ರಸಾರವಾಗಿದ್ದ ಮಕ್ಕಳಿಬ್ಬರ 'ಭಕ್ತ ಪ್ರಹ್ಲಾದ ಹಾಗೂ ಹಿರಣ್ಯ ಕಶಿಪು'ವಿನ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅಂದು ಆ ನಾಟಕದಲ್ಲಿ ನಟಿಸಿದ್ದ ಆ ಪುಟ್ಟ ಮಕ್ಕಳನ್ನು ನೀವು ಖಂಡಿತವಾಗಿಯೂ ಗುರುತು ಹಿಡಿಯುತ್ತೀರಿ. ನನ್ನಮ್ಮ ಸೂಪರ್ ಸ್ಟಾರ್‌ನಲ್ಲಿ (Nannamma Super Star) ಆ ಮಕ್ಕಳಿಬ್ಬರೂ ಪ್ರಹ್ಲಾದ ಹಾಗೂ ಹಿರಣ್ಯ ಕಶಿಪುವಿನ ಪಾತ್ರಗಳಲ್ಲಿ ಅಮೋಘವಾಗಿ ನಟಿಸಿದ್ದಾರೆ. ಜೊತೆಗೆ, ಸಂಬಾಷಣೆಯನ್ನೂ ಕೂಡ ನೀರು ಕುಡಿದಂತೆ ಹೇಳಿ ಮುಗಿಸಿದ್ದಾರೆ.
ಆದರೆ.. ಈ ವಿಡಿಯೋ ನೋಡುತ್ತಾ ಕ್ಲೈಮ್ಯಾಕ್ಸ್‌ಗೆ ಹೋದಂತೆ, ನಗು ತಡೆಯೋಕಾಗಲ್ಲ, ಮಕ್ಕಳ ಮುಗ್ಧತೆ ನೋಡಿ ಕಣ್ಣಲ್ಲಿ ನೀರು ಬರುತ್ತಿದ್ದರೂ ಉಕ್ಕಿ ಬರುವ ನಗುವನ್ನು ಯಾರಿಂದಲೂ ತಡೆಯೋದಕ್ಕೇ ಅಸಾಧ್ಯ ಎಂಬಂತಿದೆ. ಭಕ್ತ ಪ್ರಹ್ಲಾದ ಹಾಗೂ ಹಿರಣ್ಯ ಕಶಿಪುವಿನ ನಾಟಕ ಹಾಗೂ ಸಿನಿಮಾವನ್ನು ಬಹಳಷ್ಟು ಜನರು ನೋಡಿದ್ದಾರೆ. ಡಾ ರಾಜ್‌ಕುಮಾರ್ ಹಾಗೂ ಪುನೀತ್ ನಟಿಸಿದ್ದ ಈ ಸಿನಿಮಾವನ್ನೂ ಕೂಡ ಸಾಕಷ್ಟು ಜನರು ನೋಡಿದ್ದಾರೆ. ಆದರೆ, ಇಲ್ಲಿನ ಈ ಮಕ್ಕಳ ಮುಗ್ಧತೆ, ಕೊನೆಯಲ್ಲಿ ಆದ ಅವಾಂತರ ನೋಡಿದರೆ ನಕ್ಕುನಕ್ಕು ಹೊಟ್ಟೆ ಹುಣ್ಣಾಗುವುದು ಖಂಡಿತ ಎಂಬಂತಿದೆ.
'ಎಷ್ಟು ಬಾರಿ ನೋಡಿದರೂ ನಗು ತಡೆಯಕ್ಕೆ ಆಗಲ್ಲಪ್ಪ, ಮಕ್ಕಳ ಮುಗ್ಧತೆ ಎಷ್ಟು ಚೆಂದ ಅಲ್ವಾ' ಎಂಬ ಉದ್ಘಾರ ನಿಮ್ಮಿಂದ ಉದ್ದೇಶರಹಿತವಾಗಿ ಹೊರಬರದಿದ್ದರೆ ಹೇಳಿ.. ಅಷ್ಟು ಚೆಂದವಾಗಿದೆ ವಿಡಿಯೋ. ಹಾಗೇ, ಕೊನೆಯಲ್ಲಿ ಆದ ಅವಾಂತರ, ಕೊನೆಯಲ್ಲಿ ಒಂದು ಮಗುವಿಗಾದ ನಿಜವಾದ ಪರಿಸ್ಥಿತಿ ಕಂಡರೆ ಕರುಳು ಚುರುಕ್ ಎನ್ನುತ್ತದೆ. ಜೊತೆಗೆ, ಮಕ್ಕಳ ಮುಗ್ಧತೆ ಹಾಗೂ ಸಮಯಕ್ಕೆ ಸರಿಯಾಗಿ ಹೊರಹೊಮ್ಮವ ಅವರ ಭಾವನೆಗಳನ್ನು ಹಿಡಿದಿಡಲಾಗದ ಅವರ ಅಸಹಾಯಕತೆ ಎಂಥವರನ್ನೂ ಚಿಂತನೆಗೆ ದೂಡುತ್ತದೆ.
ವಿಡಿಯೋ ಹಾಗೇ ಸಾಗುತ್ತದೆ. ಬಾಯಿಪಾಠ ಮಾಡಿಕೊಂಡು ಸ್ಟೇಜಿಗೆ ಬಂದಿರುವ ಆ ಮಕ್ಕಳು ಅದನ್ನು ಅರಳು ಹುರಿದಂತೆ ಪಟಪಟ ಅಂತ ಒಪ್ಪಿಸುವುದೇ ಒಂದು ರೀತಿಯ ಚೆಂದ. ತಾವು ಜೀವನದಲ್ಲಿಯೇ ನೋಡದಿರುವ ಆ ಪೌರಾಣಿಕ ಪಾತ್ರಗಳನ್ನು ಅನುಭವಿಸಿ ಅಭಿನಯಿಸುವುದು ಅದಕ್ಕಿಂತ ಚೆಂದ. ಆದರೆ, ಕೊನೆಯಲ್ಲಿ ನಾಟಕ ಮರೆತು ರಿಯಾಲಿಟಿಗೆ ಹೋಗುವುದು ಎಲ್ಲಕ್ಕಿಂತ ಚೆಂದ.. ನಗು, ಜೊತೆಯಲ್ಲಿ ಕಣ್ಣೀರು ತರಿಸುವ ಈ ವಿಡಿಯೋ ಝಲಕ್ ನೋಡಿ, ನಿಮಗೆ ಕೊನೆಯಲ್ಲಿ ನಗು ಬರದಿದ್ದರೆ, ಅದರ ಜೊತೆಯಲ್ಲಿ ಆನಂದಭಾಷ್ಪ ಹರಿಯದಿದ್ದರೆ ಹೇಳಿ, ವಿಚಾರಿಸಿಕೊಳ್ಳುವಾ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.