ಧಾರಾವಾಹಿಗಳಲ್ಲಿ ಮಹಿಳೆಯರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕ್ರೂರರಾಗಿ ತೋರಿಸಲಾಗುತ್ತಿದೆ ಎನ್ನುವುದು ಸೀರಿಯಲ್ ಪ್ರೇಮಿಗಳ ಮಾತು. ಅಷ್ಟಕ್ಕೂ ಅವರು ಹೇಳ್ತಿರೋದು ಏಕೆ?
ಇಂದು ಧಾರಾವಾಹಿ ವೀಕ್ಷಕರಲ್ಲಿ ಹೆಚ್ಚಿನವರು ಮಹಿಳೆಯರೇ. ಅದೇ ಕಾರಣಕ್ಕೆ ಧಾರಾವಾಹಿ ಭಾಷೆ ಯಾವುದೇ ಇದ್ದರೂ ಅದು ಮಹಿಳಾ ಪ್ರಧಾನವೇ ಆಗಿರುತ್ತದೆ. ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿ ಪುರುಷ ಪಾತ್ರ ಎನ್ನುವುದು ನಾಮ್ಕೇವಾಸ್ತೆ ಎನ್ನುವ ಹಾಗೆ ಇರುತ್ತದೆ. ಸಿನಿಮಾಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳೇ ಬರುತ್ತಿಲ್ಲ ಎಂದು ನಾಯಕಿಯರು ಕೊರಗುವುದು ಇದೆ. ಆದರೆ ಸೀರಿಯಲ್ ವಿಷಯಕ್ಕೆ ಬಂದಾಗ ಇದು ಉಲ್ಟಾ. ಅದೇ ರೀತಿ ಮಹಿಳೆಯರನ್ನು ಅಗತ್ಯಕ್ಕಿಂತ ಹೆಚ್ಚು ಕೆಟ್ಟವರು ಎಂದು ತೋರಿಸುತ್ತಿರುವುದು ಹಲವಾರು ಮಹಿಳೆಯರಿಗೆ ನೋವು ತರುವ ವಿಷಯವಾಗಿದೆ.
ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿಯೂ ಅದೇ ರೀತಿಯಾಗಿದೆ. ಈ ಸೀರಿಯಲ್ನಲ್ಲಿ ದೀಪಿಕಾ ಮತ್ತು ಶಾರ್ವರಿಯ ಪಾತ್ರವನ್ನು ಅನಗತ್ಯವಾಗಿ ವಿಲನ್ಗಳಂತೆ ಬಿಂಬಿಸುತ್ತಾರೆ ಎನ್ನಲಾಗಿದೆ. ದೀಪಿಕಾಗೆ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಸಿಟ್ಟು. ಇನ್ನು ತುಳಸಿಯ ಮೇಲೆ ಅವಳಿಗೆ ಸೇಡಿಗೆ ಕಾರಣವೇ ಇಲ್ಲ. ಶಾರ್ವರಿಗೋ ತನ್ನ ಗಂಡನ ಅಣ್ಣನ ಪತ್ನಿಗೆ ಹೆಚ್ಚು ಗೌರವ ಕೊಡುತ್ತಿದ್ದರು ಎನ್ನುವ ಕಾರಣಕ್ಕೆ ಇಡೀ ಕುಟುಂಬವನ್ನೇ ನಾಶ ಮಾಡಲು ಹೋಗಿದ್ದಳು. ಇದು ಕೂಡ ಅಗತ್ಯಕ್ಕಿಂತ ಜಾಸ್ತಿಯೇ ತೋರಿಸಿದ್ದಾರೆ ಎನ್ನುವುದು ಅಭಿಮಾನಿಗಳ ಮಾತು. ಇಲ್ಲಿ ಪೂರ್ಣಿ ಸಹನೆ, ಒಳ್ಳೆತನದ ಪ್ರತೀಕವಾಗಿದ್ದಾರೆ. ಒಂದರ್ಥದಲ್ಲಿ ನಾಯಕಿ ತುಳಸಿಯ ರೀತಿಯಲ್ಲ. ಎಲ್ಲವನ್ನೂ ಸಹಿಸಿಕೊಳ್ಳುವ ಗುಣ. ಅದೇ ಇನ್ನೊಂದೆಡೆ ಮತ್ತೋರ್ವ ಸೊಸೆ ದೀಪಿಕಾ ತದ್ವಿರುದ್ಧ. ಅಪ್ಪನ ಬುದ್ಧಿಯೇ ಅವಳಿಗೆ ಬಂದಿದೆ. ಪೂರ್ಣಿ ಅನಾಥೆಯೆನ್ನುವ ಕಾರಣಕ್ಕೆ ಆಕೆಯನ್ನು ಕಂಡರೆ ದೀಪಿಕಾಗೆ ಆಗುವುದಿಲ್ಲ. ಸದಾ ಒಂದಿಲ್ಲೊಂದು ಮಸಲತ್ತು ಮಾಡುತ್ತಲೇ ಇರುತ್ತಾಳೆ. ಸಾಲದು ಎನ್ನುವುದಕ್ಕೆ ಅತ್ತೆ ಶಾರ್ವರಿ ಸಾಥ್ ಬೇರೆ. ಶಾರ್ವರಿ ಮತ್ತು ದೀಪಿಕಾರ ಕುತಂತ್ರದಿಂದಾಗಿ ಪೂರ್ಣಿ ಗರ್ಭ ಧರಿಸಲು ಸಾಧ್ಯವಾಗುತ್ತಿಲ್ಲ. ವೈದ್ಯರು ಆಕೆಗೆ ಮಗು ಹುಟ್ಟಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಆದರೆ ಈ ವಿಷಯ ಪೂರ್ಣಿಗೆ ತಿಳಿದಿಲ್ಲ. ದೀಪಿಕಾಗೆ ವಿಷಯ ಗೊತ್ತಾಗಿದೆ. ಅವಳು ಇದನ್ನೇ ಪರೋಕ್ಷವಾಗಿ ಪೂರ್ಣಿ ಎದುರು ತಿವಿಯುತ್ತಲೇ ಇರುತ್ತಾಳೆ.
ಶ್ರೇಷ್ಠಾಳ ಜಾಲದಲ್ಲಿ ಭಾಗ್ಯ ಲಾಕ್! ಅತ್ತೆ- ಸೊಸೆ ನಡುವೆಯೇ ಬಿರುಕು ಮೂಡಿಸುತ್ತಾ ಸಾಲ?
ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಈ ಸೀರಿಯಲ್ನಲ್ಲಿ ಪೂರ್ಣಿಯನ್ನು ದೀಪಿಕಾ ಮನೆಯಿಂದಲೇ ಹೊರಕ್ಕೆ ಹಾಕಿದ್ದಾಳೆ! ಮಗು ಆಗಲಿ ಎನ್ನುವ ಕಾರಣಕ್ಕೆ ಪೂರ್ಣಿ ವ್ರತ ಕೈಗೊಂಡಿದ್ದಳು. ಇನ್ನೇನು ಕೊನೆಯ ದಿನ. ವ್ರತ ಭಂಗ ಆಗಬಾರದು ಎಂದು ಪೂರ್ಣಿ ಪೂಜೆಯಲ್ಲಿ ಕುಳಿತಿದ್ದರೆ, ಅದನ್ನು ತಪ್ಪಿಸುವುದಕ್ಕಾಗಿ ದೀಪಿಕಾ ಪ್ಲ್ಯಾನ್ ಮಾಡಿದ್ದಳು. ಪೂಜೆಗೆ ಕುಳಿತ ಪೂರ್ಣಿಗೆ ಕೇಳಿಸುವಂತೆ ಅಭಿಗೆ ಅಪಘಾತ ಆಯ್ತಾ ಎಂದು ಫೋನ್ನಲ್ಲಿ ಮಾತನಾಡಿದ್ದಳು. ಇದನ್ನು ಕೇಳಿ ಪೂರ್ಣಿ ಪೂಜೆ ಬಿಟ್ಟು ಗಾಬರಿಯಿಂದ ಓಡಿ ಬಂದಿದ್ದಳು. ಆದರೆ ದೀಪಿಕಾ ಜೋರಾಗಿ ನಕ್ಕು ನಿನ್ನ ವ್ರತ ಭಂಗ ಮಾಡಲು ಹೀಗೆ ಮಾಡಿದೆ ಎಂದಿದ್ದಳು. ಇದೀಗ ಏನೇನೋ ಪೂರ್ಣಿಯ ಮನಸ್ಸನ್ನು ಕೆಡಿಸಿ ಅವಳನ್ನು ಮನೆಯಿಂದ ಹೊರಕ್ಕೆ ಹಾಕಲು ಯಶಸ್ವಿಯಾಗಿದ್ದಾಳೆ.
ಅವಳು ಸಾಯುವ ದಾರಿ ಹುಡುಕಲುಹೋಗಿದ್ದಾಳೆ ಎಂದು ಅತ್ತೆ ಶಾರ್ವರಿ ಎದುರು ಖುಷಿಯಿಂದ ದೀಪಿಕಾ ಹೇಳಿದ್ದಾಳೆ. ಇದನ್ನು ಕೇಳಿ ಶಾರ್ವರಿಗೆ ಖುಷಿಯಾಗಿದೆ. ಅದೇ ಇನ್ನೊಂದೆಡೆ ತುಳಸಿ ಮತ್ತು ಮಾಧವ್ ದೀಪಿಕಾಳ ಹುಡುಕಾಟದಲ್ಲಿ ತೊಡಗಿದ್ದಾರೆ. ಅಷ್ಟರಲ್ಲಿಯೂ ಪೂರ್ಣಿ ಬರೆದಿಟ್ಟು ಹೋಗಿರುವ ಪತ್ರ ತುಳಸಿಯ ಕೈ ಸೇರಿದೆ. ಮುಂದೇನಾಗುತ್ತದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ಸೀರಿಯಲ್ ಪ್ರೇಮಿಗಳು, ಹೆಣ್ಣುಮಕ್ಕಳನ್ನು ಇಷ್ಟೆಲ್ಲಾ ವಿಕೃತರಾಗಿ ಬಿಂಬಿಸುವುದು ಏಕೆ? ಅಗತ್ಯಕ್ಕಿಂತ ಹೆಚ್ಚು ಕೆಟ್ಟವರನ್ನಾಗಿ ಮಾಡುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ಗೆ ಇದೇನಾಗಿದೆ? ವೈರಲ್ ವಿಡಿಯೋ ನೋಡಿ ದಂಗಾದ ಅಭಿಮಾನಿಗಳು