
ಬೆಂಗಳೂರು: ಗಾಯಕಿ ಸುಹಾನಾ ಸೈಯದ್ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ. ನಿತಿನ್ ಶಿವಾಂಶ್ ಜೊತೆಗಿನ ಪ್ರೀತಿಯ ವಿಷಯ ಹೇಳಿಕೊಂಡಿದ್ದು, ಸುಹಾನಾ ಸೈಯದ್ ಅವರ ಹಳೆ ಪೋಸ್ಟ್‌ಗಳು, ವಿವಾದಾತ್ಮಕ ವಿಷಯಗಳು ಮುನ್ನಲೆಗೆ ಬಂದಿವೆ. ಪೌರತ್ವ ತಿದ್ದುಪಡು ಕಾಯ್ದೆ ಹೋರಾಟದ ವೇಳೆ ಕೆಲವರು ಸುಹಾನಾ ಸೈಯರ್ ಅವರಿಗೆ ಭಾರತೀಯಳು ಎಂಬುದಕ್ಕೆ ದಾಖಲೆಯನ್ನು ಕೇಳಿದ್ದರು. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಪಾಕಿಸ್ತಾನಕ್ಕೆ ಹೋಗು ಎದು ಕಮೆಂಟ್ ಮಾಡಿದ್ದರು. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡು ಟೀಕಾಕಾರಿಗೆ ತೀಕ್ಷ್ಣವಾಗಿ ಉತ್ತರ ನೀಡಿದ್ದರು. ಅಂದು ಸುಹಾನಾ ಸೈಯದ್ ಹೇಳಿದ್ದೇನು ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ.
ನಾನು ಹುಟ್ಟಿದ್ದು ಬೆಳೆದದ್ದು ಎಲ್ಲ ಹಳ್ಳಿಯಲ್ಲಿ ಇಡೀ ಊರಿಗೆ ಒಂದೇ ಮುಸ್ಲಿಂ ಕುಟುಂಬದ ಮೂರು ಮನೆಗಳು ಅಷ್ಟೇ , ಮಿಕ್ಕವರೆಲ್ಲ ಹಿಂದೂಗಳು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುವಾಗ ಇದ್ದ ಸ್ನೇಹಿತರೆಲ್ಲರೂ ಹಿಂದೂಗಳೇ. ಎಂಬಿಎ ಪದವಿ ಮುಗಿಯುವ ತನಕ ಬೆಸ್ಟ್ ಫ್ರೆಂಡ್ ಅನಿಸಿಕೊಂಡವರು ಎಲ್ಲರೂ ಹಿಂದೂಗಳೇ. ಈಗಲೂ ಸಹ. ನಮ್ಮ ಮನೆಯಲ್ಲಿ ಎಲ್ಲರೂ ಎಲ್ಲಾ ದೇವಸ್ಥಾನಗಳಿಗೂ ಹೋಗ್ತೀವಿ. ಹಿಂದೂ ಸಹೋದರರ ಎಲ್ಲಾ ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀವಿ. ಹಾಗೆಯೇ, ನಾಗರಪಂಚಮಿ ದೀಪಾವಳಿ ಊರ ಜಾತ್ರೆ ಬಂದಾಗ ದೇವರಿಗೆ ನಮ್ಮ ಮನೆಯಿಂದ ಹಣ್ಣುಕಾಯಿ ತಪ್ಪದೇ ಒಪ್ಪಿಸುತ್ತೇವೆ. ನನ್ನ ಅಜ್ಜಿ ವರದಹಳ್ಳಿಯ ಶ್ರೀಧರ ಸ್ವಾಮಿಗಳನ್ನು ತುಂಬಾ ನಂಬುತ್ತಾ ಇದ್ರಂತೆ ನನಗೂ ಕೂಡ ಮನಸ್ಸಿಗೆ ತುಂಬಾ ಬೇಸರವಾದಾಗ ಅಪ್ಪನ ಹತ್ತಿರ ವರದಹಳ್ಳಿಗೆ ಮತ್ತೆ ದರ್ಗಾಕ್ಕೆ ಹೋಗಿ ಬರೋಣ ಅಪ್ಪಾ!! ಅಂತ ಅಂದರೆ ಸಾಕು,. ಅಮ್ಮ, ನಾನು ಬರ್ತೀನಿ ನಡಿ ಅಂತಾರೆ.
ನಾನು ನಮಾಜ್ ಮಾಡ್ತೀನಿ ರಂಜಾನ್ ಉಪವಾಸ ಮಾಡ್ತೀನಿ ತೀರ್ಥಪ್ರಸಾದ ನಾನು ತಗೊಳ್ತೀನಿ ಕುಂಕುಮ ಹಚ್ಚಿಕೊಳ್ಳುತ್ತೀನಿ, ಕ್ರಿಸ್ಮಸ್ ಹಬ್ಬಕ್ಕೆ ಅಪ್ಪ-ಅಮ್ಮ ನಾನು ತಮ್ಮ ಪ್ರತಿವರ್ಷ ತಪ್ಪದೆ ಚರ್ಚಿಗೆ ಹೋಗಿ ಕ್ಯಾಂಡಲ್ ಹಚ್ಚಿ ಪ್ರೇಯರ್ ಮಾಡಿ ಬರ್ತೀವಿ. ನನ್ನ ತಂದೆ ತಾಯಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು ಜಾತಿ,ಧರ್ಮ ನೋಡದೆ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿ ಕೊಡ್ತಾರೆ. ರಾಮಾಯಣ, ಮಹಾಭಾರತದ ಕಥೆಗಳನ್ನ ಹೇಳ್ತಾರೆ. ನಾನೂ ಕೂಡಾ ಭಗವದ್ಗೀತೆಯನ್ನು ಓದಿದ್ದೀನಿ. ಬೆಳಗ್ಗೆ ಎದ್ದಾಗ ಕರಾಗ್ರೇ ವಸತೇ, ಮಧ್ಯಾಹ್ನ ಅನ್ನಪೂರ್ಣೇ ಸದಾಪೂರ್ಣೇ, ರಾತ್ರಿ ಮಲಗುವಾಗ ರಾಮಂ ಸ್ಕಂದಂ ಹನುಮಂತಂ ಶ್ಲೋಕಗಳನ್ನು ಹೇಳಿದೀನಿ.
ಬರಿ ಜೀ ಕನ್ನಡ ವಾಹಿನಿಯಲ್ಲಿ ಮಾತ್ರ ನನ್ನ ನೋಡಿದ್ದೀರಿ ಹೊರತು, ನಾನು ಯಕ್ಷಗಾನ ಕಲಾವಿದೆ ಅನ್ನೋದು ಗೊತ್ತಾ? ಎಷ್ಟು ಬಾರಿ ಸಂಗೀತ ಸ್ಪರ್ಧೆಯಲ್ಲಿ ನನ್ನ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದೀನಿ ತಿಳಿದಿದೆಯಾ? ಸಂಗೀತದ ಮೇಲೆ ನನಗಿರುವ ಆಸಕ್ತಿ ಹಾಗೂ ಕನ್ನಡ ಸಾಹಿತ್ಯದ ಮೇಲೆ ನನಗಿರುವ ಪ್ರೀತಿ,ಗೌರವ ಗೊತ್ತಾ? ನಾನು ರಂಗಸ್ಥಳಕ್ಕೆ ಹೋಗುವ ಮುನ್ನ ಗಣಪತಿ ಪೂಜೆ ಮುಗಿಸಿ ಹೆಜ್ಜೆ ಹಾಕಿದ್ದು, ನಾಟಕಕ್ಕೆ ಬಣ್ಣ ಹಚ್ಚಿ ಅಭಿನಯಿಸುವ ಮುನ್ನ ಆಂಗಿಕಂ ಭುವನಂ ಎಂದು ಹಾಡಿ ಶಿವನೆ ಸತ್ಯ ಎಂದು ನಂಬಿಯೇ ರಂಗದ ಮೇಲೆ ಹೋಗಿದ್ದು, ಪೂಜಾ ಕುಣಿತ ಮಾಡುವಾಗಲೂ ಕರಗವನ್ನು,, ತಾಯಿಯ ಪೂಜೆ ಮಾಡಿದ ಮೇಲೆಯೇ ತಲೆಯ ಮೇಲೆ ಹೊತ್ತಿದ್ದು.
ಇನ್ನು, ಚಿಕ್ಕಂದಿನಿಂದಲೂ ಭಗತ್ ಸಿಂಗ್ ನ ಆದರ್ಶಗಳನ್ನು ಪಾಲಿಸುತ್ತಾ ಬಂದ ನನಗೆ ಯಾವುದೇ ವಿಷಯವನ್ನು ಪ್ರಶ್ನಿಸದೆ ಅನಿವಾರ್ಯ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ. ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕನನ್ನು ನಾನು ಎಂದಿಗೂ ಪೂಜಿಸಿಲ್ಲ. ಎಲ್ಲಾ ರಾಜಕೀಯ ಪಕ್ಷದವರು ಪರಿಸ್ಥಿತಿಗಳನ್ನು ಉಪಯೋಗಿಸಿಕೊಂಡು ತಮ್ಮ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎನ್ನುವ ಅರಿವು ನನಗಿದೆ. ಸರಿ ಮಾಡಿದರೆ ಸರಿ. ತಪ್ಪು ಮಾಡಿದವರು ಯಾರೇ ಆಗಿರಲಿ ಅದು ತಪ್ಪೇ.
ಇದನ್ನೂ ಓದಿ: ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್
ಯಾವುದೋ ಮಾತಿಗೆ ಸಂಬಂಧವಿಲ್ಲದ ನನ್ನ ತಂದೆ-ತಾಯಿಯನ್ನು ವಿಷಯಕ್ಕೆ ಎಳೆದು ಮಾತನಾಡುವ ನಿಮಗೆ ಸಿಕ್ಕಂತಹ ಸಂಸ್ಕಾರ, ನನ್ನ ತಂದೆ ತಾಯಿಯೂ ಕೊಟ್ಟಿಲ್ಲ, ನನಗೆ ವಿದ್ಯೆ ಹೇಳಿಕೊಟ್ಟ ಗುರುಗಳೂ ಕೊಟ್ಟಿಲ್ಲ. ನನ್ನದಲ್ಲದ ಪಾಕಿಸ್ತಾನಕ್ಕೆ ಹೋಗು ಎಂದು ಕಾಮೆಂಟ್ ಮಾಡಿದವರ ಮೇಲೆ ಧಿಕ್ಕಾರ, ಪ್ರಚಾರಕ್ಕೆ ಈ ಮಾತನ್ನು ಆಡುತ್ತಿರುವೆ ಅನ್ನೋ ನಿಮ್ಮ ಈ ಸಂಕುಚಿತ ಮನೋಭಾವದ ಮೇಲೆ ಅತಿಯಾದ ಕನಿಕರ ಇದೆ. ನಾನು ತಪ್ಪು ಎಂದಾದಲ್ಲಿ ನನಗೆ ತಿದ್ದಿಕೊಳ್ಳಲು ಏನೂ ಅಭ್ಯಂತರವಿಲ್ಲ, ಹಾಗಾಗಿ ನಾನು ಹೇಳಿದ ಮಾತು ತಪ್ಪು ಅಂತ ಅನ್ನಿಸಿದ ಮೇಲೆಯೂ ಗೌರವ ಮತ್ತು ಪ್ರೀತಿಯಿಂದ ಮಾತನಾಡಿರುವ ನನ್ನ ನಿಜವಾದ ಹಿಂದೂ ಸಹೋದರರ ಮೇಲೆ ಅತಿಯಾದ ಗೌರವ ಕೂಡಾ ಇದೆ.
ಏನು ಸಾಧನೆ ಮಾಡದೆ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡದೆ ಫೇಸ್‌ಬುಕ್‌ನಲ್ಲಿ 24ಗಂಟೆ ಆಕ್ಟಿವ್ ಇದ್ದು, ಬಸ್ ಸ್ಟ್ಯಾಂಡ್ ಗಳಲ್ಲಿ ಕೂತು ಹರಟೆ ಹೊಡೆದು ಭೂಮಿಗೆ ಭಾರವಾಗಿರುವ ನೀವು , ಮೊದಲು ನಿಮ್ಮ ಯೋಗ್ಯತೆಯನ್ನು ತಿಳಿದು ನಂತರ ಬೇರೆಯವರ ಯೋಗ್ಯತೆಯ ಬಗ್ಗೆ ಕಮೆಂಟ್ ಮಾಡಿ. ಇನ್ನು ದಾಖಲೆಗಳ ವಿಚಾರ ಬಂದರೆ ನನ್ನ ಬಳಿ ಹಾಗೂ ನನ್ನ ಕುಟುಂಬದವರ ಬಳಿ ಎಲ್ಲಾ ದಾಖಲೆಗಳು ಇವೆ ಆದರೆ ನಾನು ಪ್ರಶ್ನಿಸಿದ್ದು ನೀವು ಹೇಳಿರುವ ಐಡಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್ಪೋರ್ಟ್ ಯಾವುದೇ ಆಧಾರಗಳಿಲ್ಲದೆ ಹೊಟ್ಟೆಗೆ ತಿನ್ನಲು ಅನ್ನ ಇಲ್ಲದೆ ಹಾಗೂ ಯಾವುದೇ ಸೌಕರ್ಯಗಳನ್ನು ನಂಬಿ ಬದುಕದ, ಭಾರತದ ಮೂಲ ನಿವಾಸಿಗಳಾದ ಕೆಲವು, ಬುಡಕಟ್ಟು ಹಾಗೂ ಅಲೆಮಾರಿ ಜನಗಳ ಪರವಾಗಿ ( ಎಲ್ಲಾ ಧರ್ಮಗಳನ್ನು ಒಳಗೊಂಡು) ನೀವು ಹೇಳಿದಂತೆ ನಿಜವಾಗಿಯೂ ಇವರಾರಿಗೂ ತೊಂದರೆ ಇಲ್ಲ ಎಂತಾದರೆ ನನಗೂ ನಿಮಗೂ ಹಾಗೂ ಎಲ್ಲರಿಗೂ ಸಂತೋಷದ ವಿಚಾರ.
ಇದನ್ನೂ ಓದಿ: ಸರಿಗಮಪ ಖ್ಯಾತಿಯ ಸುಹಾನಾ ಪ್ರೀತಿಯ ಪೋಸ್ಟ್‌ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.