
ಸರಿಗಮಪ ಶೋನಿಂದಲೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದ ಸುಹಾನಾ ಸೈಯದ್ ಅವರೀಗ ಪ್ರೀತಿ ವಿಷಯವನ್ನು ಬಹಿರಂಗ ಮಾಡಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಅವರು ಪ್ರೀತಿಯಲ್ಲಿರೋದಾಗಿ ಹೇಳಿಕೊಂಡಿದ್ದಾರೆ. ಶೋನಲ್ಲಿ ಹಾಡು ಹಾಡಿದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ಕಾಂಟ್ರವರ್ಸಿಗಳನ್ನು ಎದುರಿಸಿದ್ದಾರೆ. ಈ ಮೂಲಕ ಭಾರತ ಜಾತ್ಯಾತೀತ ರಾಷ್ಟ್ರ, ನಮಗೆ ನಮ್ಮದೇ ಆದ ಹಕ್ಕುಗಳಿವೆ ಎಂದು ಅವರು ಸಾರಿದ್ದರು.
ಸರಿಗಮಪ ರಿಯಾಲಿಟಿ ಶೋ ಸೀಸನ್ 13 ಶೋನಲ್ಲಿ ಶಿವಮೊಗ್ಗ ಮೂಲದ ಗಾಯಕಿ ಸುಹಾನಾ ಸೈಯದ್ ಅವರು ಶ್ರೀಕಾರ ಹಾಡು ಹಾಡಿದ್ದರು. ಬುರ್ಕಾ ಧರಿಸಿದ ಮುಸ್ಲಿಂ ಯುವತಿ ಹಿಂದುಗಳ ಹಾಡು ಹಾಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಉಂಟು ಮಾಡಿತ್ತು. ಮುಸ್ಲಿಂ v/s ಹಿಂದು ಎನ್ನುವಂತೆ ದೊಡ್ಡ ದೊಡ್ಡ ಪ್ರತಿಭಟನೆಗಳು ಕೂಡ ಆಗಿತ್ತು. ಈ ರಿಯಾಲಿಟಿ ಶೋ ಮುಗಿಯುವವರೆಗೂ ಅವರು ಬುರ್ಕಾ ಧರಿಸಿ ಹಾಡು ಹಾಡಿದ್ದರು.
ಈ ಶೋ ಮುಗಿದ ನಂತರ ಸಾಕಷ್ಟು ಫೋಟೋಶೂಟ್ ಸೇರಿದಂತೆ ಹೊರಗಡೆ ಇವೆಂಟ್‌ನಲ್ಲಿಯೂ ಸುಹಾನಾ ಸೈಯದ್ ಭಾಗಿಯಾಗಿದ್ದರು. ಆ ವೇಳೆ ಅವರು ಸೀರೆ ಉಟ್ಟಿದ್ದರು, ವಿವಿಧ ಸಾಂಪ್ರದಾಯಿಕ ಡ್ರೆಸ್ ಕೂಡ ಹಾಕಿದ್ದರು. ಶೋನಲ್ಲಿ ಹಾಕದೆ, ಈಗ ಈ ರೀತಿ ಯಾಕೆ ಬಟ್ಟೆ ಹಾಕ್ತಿದ್ದಾರೆ ಎಂಬ ಪ್ರಶ್ನೆ ಎದುರಾಗಿತ್ತು.
“ನಾನು ಮುಸ್ಲಿಂ ಕುಟುಂಬದಲ್ಲಿ ಬೆಳೆದು ಬಂದವಳು. ನಾನು ಹಿಜಾಬ್ ಹಾಕೋದಿಲ್ಲ. ಇದು ಅವರವರ ವೈಯಕ್ತಿಕ ಅಭಿಪ್ರಾಯ. ಯಾವ ರೀತಿ ಬಟ್ಟೆ ಹಾಕಬೇಕು ಎನ್ನೋದು ಅವರಿಗೆ ಬಿಟ್ಟಿದ್ದು. ಶಿಕ್ಷಣ ಎನ್ನೋದು ಎಲ್ಲ ಧರ್ಮಕ್ಕೆ ಮೀರಿದ್ದು. ಹಿಜಾಬ್ ಕಾರಣದಿಂದ ಹೆಣ್ಣು ಮಗು ಶಿಕ್ಷಣದಿಂದ ವಂಚಿತಳಾಗುತ್ತಾಳೆ ಎನ್ನೋದು ತಪ್ಪು. ಇಂದು ಎಲ್ಲರೂ ಓದುತ್ತೀನಿ ಎಂದಾಗ ಖುಷಿ ಪಡಬೇಕೆ ಹೊರತು ತಡೆಯಬಾರದು. ನನಗೆ ಶಿಕ್ಷಣದ ಮಹತ್ವ ಗೊತ್ತಿದೆ” ಎಂದು ಸುಹಾನಾ ಹೇಳಿದ್ದರು.
ಸುಹಾನಾ ಸೈಯದ್ ಅವರು ಸೀರೆ ಉಟ್ಟಾಗ ಹಣೆಗೆ ಕುಂಕುಮ ಇಡಲು ಆರಂಭಿಸಿದ್ದರು. ಇದು ಕೂಡ ಸಾಕಷ್ಟು ಚರ್ಚೆ ಉಂಟು ಮಾಡಿತ್ತು. ಸಾಂಪ್ರದಾಯಿಕ ಡ್ರೆಸ್ ಹಾಕುವಾಗ ಸುಹಾನಾ ಅವರು ಸಾಕಷ್ಟು ಬಾರಿ ಕುಂಕುಮ ಇಟ್ಟಿದ್ದೂ ಇದೆ. ಕುಂಕುಮ ಹಚ್ಚಿಕೊಂಡಾಗ ತುಂಬ ಲಕ್ಷಣವಾಗಿ ಕಾಣ್ತೀರಿ ಎಂದು ಜನರು ಕಾಮೆಂಟ್ ಮಾಡಿದ್ದುಂಟು.
ಇಶಾ ಫೌಂಡೇಶನ್‌ನಲ್ಲಿರುವ ಆದಿಯೋಗಿ, ಚಂದ್ರಗುತ್ತಿ ದೇವಸ್ಥಾನ ಸೇರಿದಂತೆ ಸಾಕಷ್ಟು ಹಿಂದು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಹೊಸನಗರದ ಶ್ರೀ ರಾಘವೇಶ್ವರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಮಂತ್ರಾಕ್ಷತೆಯನ್ನು ಕೂಡ ಪಡೆದಿದ್ದಾರೆ.
ಶ್ರೀಗಣೇಶೋತ್ಸವ ಕಾರ್ಯಕ್ರಮದಲ್ಲಿ ಸುಹಾನಾ ಅವರು ಸೀರೆ ಧರಿಸಿ, ಹಣೆಗೆ ಕುಂಕುಮ ಇಟ್ಟುಕೊಂಡು ದೇವರ ಭಜನೆಯನ್ನು ಕೂಡ ಹಾಡಿದ್ದರು. ಒಟ್ಟಿನಲ್ಲಿ ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆಯನ್ನು ಕೂಡ ಹಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.