
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟಿ ಕವಿತಾ ಗೌಡ, ನೇಹಾ ಗೌಡ ಈಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ನಟಿ ರಶ್ಮಿ ಪ್ರಭಾಕರ್ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ತಿಳಿಸಿದ್ದರು. ಅಂದಹಾಗೆ ಕನ್ನಡ ಕಿರುತೆರೆಯ ಇನ್ನೋರ್ವ ನಟಿ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ. ನಟಿ ಐಶ್ವರ್ಯಾ ಸಾಲೀಮಠ ಅವರು ‘ರಾಮಾಚಾರಿ’ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಅವರು ಸೀರಿಯಲ್‌ನಲ್ಲಿ ಕಾಣಿಸದೆ ಕೆಲವು ತಿಂಗಳುಗಳು ಆಗಿತ್ತು. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅವರು ‘ರಾಮಾಚಾರಿ’ ಧಾರಾವಾಹಿಯಲ್ಲಿ ಕೊನೆಯ ದಿನ ಎಂದು ವಿಡಿಯೋ ಶೇರ್ ಮಾಡಿಕೊಳ್ಳುವುದರ ಮೂಲಕ ಸೀರಿಯಲ್‌ನಿಂದ ಹೊರಬಂದಿರೋದಾಗಿ ಹೇಳಿಕೊಂಡಿದ್ದರು. ಇಂದು ಅವರು ಗಣೇಶ ಚತುರ್ಥಿ ಪ್ರಯುಕ್ತ ಗುಡ್‌ನ್ಯೂಸ್ ನೀಡಿದ್ದಾರೆ.
ಐಶ್ವರ್ಯಾ ಸಾಲೀಮಠ ಹಾಗೂ ವಿನಯ್ ಯುಜೆ ಅವರು ಪಾಲಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಐಶ್ವರ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ, “ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮ ಸಣ್ಣ ಸೀಕ್ರೇಟ್‌ನ್ನು ಹಂಚಿಕೊಳ್ಳುವ ಸಮಯವಿದು. ಈ ವಿಶೇಷ ದಿನದಂದು ನಾವು ಪಾಲಕರಾಗುತ್ತಿದ್ದೇವೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ನಾವು ಪಾಲಕರಾಗುತ್ತಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನಮಗೆ ಆಶೀರ್ವದಿಸಿದ್ದಾನೆ. ಕೊನೆಗೂ ನಮ್ಮ ಕುಟುಂಬ ಬೆಳೆಯುತ್ತಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ನಮಗೆ ನೀಡಿ, ದೃಷ್ಟಿ ಹಾಕಬೇಡಿ” ಎಂದಿದ್ದಾರೆ.
ನಟ ವಿನಯ್ ಗೌಡ, ಐಶ್ವರ್ಯಾ ಶಿಂಧೋಗಿ, ಸುಕೃತಾ ನಾಗ್, ನಿಧಿ ಹೆಗಡೆ, ಸ್ಪಂದನಾ ಸೋಮಣ್ಣ, ಅನ್ವಿತಾ ಸಾಗರ್, ಧನರಾಜ್ ಆಚಾರ್ ಮುಂತಾದವರು ಐಶ್ವರ್ಯಾ ಸಾಲೀಮಠ ಹಾಗೂ ವಿನಯ್ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
2016 ಜೂನ್ 7ರಂದು ‘ಮಹಾಸತಿ’ ಧಾರಾವಾಹಿ ಪ್ರೋಮೋ ಶೂಟಿಂಗ್‌ನಲ್ಲಿ ಇವರಿಬ್ಬರ ಭೇಟಿಯಾಗಿತ್ತು. ಆ ಧಾರಾವಾಹಿಯಲ್ಲಿ ವಿನಯ್ ಹೀರೋ ಆಗಿದ್ದರು. ಇದಾದ ಬಳಿಕ ವಿನಯ್ ಹಾಗೂ ಐಶ್ವರ್ಯಾ ಅವರು ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರ ಸ್ನೇಹ ಇನ್ನಷ್ಟು ಗಟ್ಟಿಯಾಗಿ ಪ್ರೀತಿಗೆ ತಿರುಗಿತ್ತು. ಮೂಲತಃ ಉತ್ತರ ಕರ್ನಾಟಕದವರಾದ ಈ ಜೋಡಿ ಕುಟುಂಬದವರ ಒಪ್ಪಿಗೆ ಪಡೆದು ಗ್ರ್ಯಾಂಡ್ ಆಗಿ ಮದುವೆ ಆಗಿತ್ತು. ಐಶ್ವರ್ಯಾ ಅವರು ‘ಅಗ್ನಿಸಾಕ್ಷಿ’, ‘ಸೇವಂತಿ’, ‘ಸರಯೂ’, ‘ರಾಮಾಚಾರಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಹುತೇಕ ಕನ್ನಡ ಸೇರಿದಂತೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ಅವರು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ವಿನಯ್ ಯುಜೆ ಕೂಡ ಕೆಲ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿನಯ್ ಯುಜೆ ಹಾಗೂ ಐಶ್ವರ್ಯಾ ಸಾಲೀಮಠ ಅವರು ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು. ಅಂದಹಾಗೆ ಸದ್ಯ ತಾಯಿಯಾಗುತ್ತಿರುವ ಖುಷಿಯಲ್ಲಿರುವ ಐಶ್ವರ್ಯಾ ಸದ್ಯ ಮಗುವಿನ ಕಡೆಗೆ ಗಮನ ಕೊಡಲಿದ್ದು, ಯಾವಾಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ವಿನಯ್ ಯುಜೆ ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದು, ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.