ರಂಗಾಯಣದಲ್ಲಿ ರಾಜು ತಾಳಿಕೋಟೆ ಅಂತಿಮ ದರ್ಶನ; ಅಪ್ಪನ ಕೊನೆ ಆಸೆಯಂತೆಯೇ ಅಂತ್ಯಕ್ರಿಯೆ - ಪುತ್ರ ಭರತ್

Published : Oct 13, 2025, 08:24 PM IST
Raju Talikote last Ritual

ಸಾರಾಂಶ

ರಾಜು ತಾಳಿಕೋಟೆ ಅವರು ಉಡುಪಿಯ ಹೆಬ್ರಿಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಪುತ್ರ ಭರತ್ ತಾಳಿಕೋಟೆ ಈ ಸುದ್ದಿಯನ್ನು ಖಚಿತಪಡಿಸಿದ್ದು, ಅಂತಿಮ ಸಂಸ್ಕಾರವು ವಿಜಯಪುರ ಜಿಲ್ಲೆಯ ಚಿಕ್ಕಸಿಂಧಗಿ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಉಡುಪಿ/ಹುಬ್ಬಳ್ಳಿ (ಅ.13): ಸಿನಿಮಾ ಶೂಟಿಂಗ್ ಬಿಡುವಿನ ವೇಳೆ ಹೃದಯಾಘಾತದಿಂದ ಇಂದು ಸಂಜೆ ನಿಧನರಾದ ಹಿರಿಯ ರಂಗ ಕಲಾವಿದ ಹಾಗೂ ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರ ಪುತ್ರ ಭರತ್ ತಾಳಿಕೋಟೆ ಅವರು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದು, ತಂದೆಯವರನ್ನು ಉಳಿಸಲು ಚಿತ್ರತಂಡ ಪ್ರಯತ್ನಿಸಿದ್ದರೂ ವಿಫಲವಾಯಿತು ಎಂದು ಭಾವುಕರಾಗಿದ್ದಾರೆ. ನಟನ ಅಂತಿಮ ಸಂಸ್ಕಾರ ವಿಜಯಪುರ ಜಿಲ್ಲೆಯ ಚಿಕ್ಕಸಿಂಧಗಿ ಗ್ರಾಮದ ಅವರ ತೋಟದಲ್ಲಿ ನಾಳೆ (ಅ.14) ಸಂಜೆ ನಡೆಯಲಿದೆ.

ಚಿತ್ರೀಕರಣದ ವೇಳೆ ಹೃದಯಾಘಾತ:

ಮೂರು ದಿವಸಗಳ ಹಿಂದೆ ಶೈನ್ ಶೆಟ್ಟಿ ನಾಯಕತ್ವದ ಚಿತ್ರವೊಂದರ ಶೂಟಿಂಗ್‌ಗಾಗಿ ಅಪ್ಪಾಜಿ ಹೆಬ್ರಿಗೆ ಬಂದಿದ್ದರು. ಶೂಟಿಂಗ್ ನಡೆಯುತ್ತಿದ್ದಾಗಲೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರನ್ನು ಉಳಿಸಲು ಇಡೀ ಚಿತ್ರತಂಡ ಮತ್ತು ವೈದ್ಯರು ತುಂಬ ಪ್ರಯತ್ನ ಮಾಡಿದರು. ಆದರೆ, ಇಂದು ಸಂಜೆ 6 ಗಂಟೆ ಸುಮಾರಿಗೆ ನಮ್ಮನ್ನು ಅಗಲಿದ್ದಾರೆ. ಐ ಮಿಸ್ ಯೂ ಪಪ್ಪಾ. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಭರತ್ ತಾಳಿಕೋಟೆ ಕಣ್ಣೀರು ಹಾಕಿದರು. ಈ ಹಿಂದೆ ಒಮ್ಮೆ ರಾಜು ತಾಳಿಕೋಟೆ ಅವರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಎರಡನೇ ಬಾರಿಗೆ ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಭರತ್ ತಿಳಿಸಿದರು.

ರಂಗಾಯಣದಿಂದ ತೋಟದವರೆಗೂ ಅಂತಿಮ ಪಯಣ:

ಉತ್ತರ ಕರ್ನಾಟಕದ ರಂಗಭೂಮಿಗೆ ರಾಜು ತಾಳಿಕೋಟೆ ಅವರ ಕೊಡುಗೆಯನ್ನು ಪುತ್ರ ಸ್ಮರಿಸಿದರು. 'ಅವರು ಉತ್ತರ ಕರ್ನಾಟಕದಲ್ಲಿ 35 ವರ್ಷಗಳಿಂದ ನಾಟಕ ಮಾಡುತ್ತಿದ್ದರು. ಸರ್ಕಾರ ಕೂಡ ಅವರ ಸೇವೆಯನ್ನು ಗುರುತಿಸಿ ಅವರನ್ನು ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು. ಅವರು ಸುಮಾರು 70 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ, ಇನ್ನೂ 10ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಬೇಕಿದೆ ಎಂದರು.

ರಾಜು ತಾಳಿಕೋಟೆಯವರ ಅಂತಿಮ ವಿಧಿವಿಧಾನಗಳ ಬಗ್ಗೆ ಮಾಹಿತಿ ನೀಡಿದ ಭರತ್, ನಮ್ಮ ತಂದೆಯವರ ಮೃತದೇಹವನ್ನು ಮೊದಲು ಧಾರವಾಡ ರಂಗಾಯಣಕ್ಕೆ ಒಯ್ಯುತ್ತೇವೆ. ನಂತರ ಅದನ್ನು ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಚಿಕ್ಕಸಿಂಧಗಿ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ಇಬ್ಬರು ಹೆಂಡತಿಯರು, 5 ಮಕ್ಕಳಿದ್ದರೂ ಅನ್ಯೋನ್ಯವಾಗಿದ್ದೇವೆ:

ನಮ್ಮ ತಂದೆಯವರಿಗೆ ಎರಡು ಮದುವೆ ಆಗಿದೆ. ಒಟ್ಟು ಐದು ಮಕ್ಕಳು, ಇಬ್ಬರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಇದ್ದರೂ ನಮ್ಮ ಇಡೀ ಕುಟುಂಬ ಬಹಳ ಅನ್ಯೋನ್ಯವಾಗಿತ್ತು. ನಾವು ಇಡೀ ಕುಟುಂಬ ನಾಟಕದಲ್ಲಿ ನಟಿಸುತ್ತಿದ್ದೆವು. 'ಕಲಿಯುಗದ ಕುಡುಕ' ಅವರಿಗೆ ಬಹಳ ಹೆಸರು ತಂದ ನಾಟಕ ಎಂದು ಕುಟುಂಬದ ಬಗ್ಗೆ ಭಾವುಕವಾಗಿ ಮಾತನಾಡಿದರು. ರಾಜು ತಾಳಿಕೋಟೆಯವರು ಸದಾ ತಮ್ಮ ತೋಟದಲ್ಲಿ ಕಾಲ ಕಳೆಯಲು ಬಯಸುತ್ತಿದ್ದರು. ಹಾಗಾಗಿ ಅವರ ಪ್ರೀತಿಗೆ ತಕ್ಕಂತೆ ಅವರ 'ತೋಟದಲ್ಲಿಯೇ ಅಂತ್ಯ ಸಂಸ್ಕಾರ' ಮಾಡುತ್ತೇವೆ. ಅವರನ್ನು ಪ್ರೀತಿಸುವವರು, ಅಭಿಮಾನಿಗಳು ಮತ್ತು ಸಂಬಂಧಿಕರು ಚಿಕ್ಕಸಿಂಧಗಿಗೆ ಬಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಭರತ್ ತಾಳಿಕೋಟೆ ಮನವಿ ಮಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!