
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಮತ್ತು ಆಕೆಯ ಗಂಡ ಸಹನಾಳ ಗಂಡ ಮುರಳಿ ಒಟ್ಟಾಗಿ ಲವ್ವಿಡವ್ವಿ ಮಾಡುತ್ತಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದವರು ಒಮ್ಮೆಲೆ ದಂಗಾಗುವುದು ನಿಜವೇ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಈಗಷ್ಟೇ ಸ್ನೇಹಾಗೆ ಪತಿ ಕಂಠಿಯ ಮೇಲೆ ಪ್ರೀತಿ ಚಿಗುರುತ್ತಿದ್ದರೆ, ಅತ್ತ ಅಕ್ಕ ಸಹನಾ ಮತ್ತು ಪತಿ ಮರಳಿ ಮಧ್ಯೆ ಬಿರುಕು ಮೂಡುತ್ತಿರುವ ಹೊತ್ತು ಇದು. ಪತಿ ಮರಳಿ ಬೇರೊಬ್ಬಳ ಜೊತೆಯಲ್ಲಿ ಸ್ನೇಹ ಬೆಳೆಸಿದ್ದಾನೆ ಎಂಬ ಗುಮಾನಿ ಸಹನಾಗೆ ಶುರುವಾಗಿದೆ. ಅಮ್ಮ ಪುಟ್ಟಕ್ಕ ಮಗಳಿಗೆ ಎಷ್ಟೇ ಕಿವಿಮಾತು ಹೇಳಿದರೂ, ಹೀಗೆಲ್ಲಾ ಏಕಾಏಕಿ ದಿಢೀರ್ ನಿರ್ಧಾರಕ್ಕೆ ಬರಬಾರದು ಎಂದು ಹೇಳುತ್ತಿದ್ದರೂ ಅದನ್ನು ಕೇಳುವಷ್ಟು ಸಹನೆ ಸಹನಾಗೆ ಇಲ್ಲವಾಗಿದೆ, ಏಕೆಂದರೆ ಪರಿಸ್ಥಿತಿ ಎಲ್ಲವೂ ಪತಿಯ ವಿರುದ್ಧವೇ ಎತ್ತಿ ತೋರಿಸುವಂತಿದೆ.
ಇಂಥ ಸಂದರ್ಭದಲ್ಲಿ ಸ್ನೇಹಾ ಮತ್ತು ಮರಳಿ ಒಟ್ಟಾಗಿ ಲವ್ವಿ ಡವ್ವಿ ಮಾಡುತ್ತಿದ್ದರೆ ಹೇಗೆ? ಅದರಲ್ಲಿಯೂ ಸ್ನೇಹಾ ಅಕ್ಕನ ಗಂಡನಿಗೇ ಐ ಲವ್ ಯೂ ಅನ್ನುತ್ತಿದ್ದಾಳೆ! ಹೌದು. ಹೀಗೆ ಹೇಳಿರುವುದು ಹೌದು. ಅಲ್ಲಿರುವುದು ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಸ್ನೇಹಾ ಹಾಗೂ ಮುರಳಿ ಪಾತ್ರಧಾರಿಯೂ ಹೌದು. ಆದರೆ ಅಸಲಿಗೆ ಇದು ಪುಟ್ಟಕ್ಕನ ಮಕ್ಕಳು ಸೀರಿಯಲ್ ಅಲ್ಲ. ಬದಲಿಗೆ ಸ್ನೇಹಾ ಪಾತ್ರಧಾರಿಯಾಗಿರುವ ಸಂಜನಾ ಬುರ್ಲಿ ಮತ್ತು ಮರಳಿ ಪಾತ್ರಧಾರಿಯಾಗಿರುವ ಪವನ್ ಕುಮಾರ್ ಅವರು ನಟಿಸುತ್ತಿರುವ ಹೊಸ ಕಿರುಚಿತ್ರ ಲವ್ ರಿಸೆಟ್ನ ಪ್ರೊಮೋ. ಕೆಲ ದಿನಗಳ ಹಿಂದೆ ಪವನ್ ಕುಮಾರ್ ಅವರು ಈ ಕಿರುಚಿತ್ರದ ಪ್ರೊಮೋ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಗರ್ಲ್ಫ್ರೆಂಡ್ ಏನು ಆಧಾರ್ ಕಾರ್ಡಾ? ಪುಟ್ಟಕ್ಕನ ಮಕ್ಕಳು ಮುರಳಿ ಮಾತಿಗೆ ಸೂಪರ್ ಗುರೂ ಅಂತಿರೋ ಫ್ಯಾನ್ಸ್
ಈ ಪ್ರೊಮೋದಲ್ಲಿ ಸಂಜನಾ, ಪವನ್ಗೆ ಐ ಲವ್ ಯೂ ಅಮರ್ ಎಂದಿದ್ದಾರೆ. ಅಂದಹಾಗೆ ಈ ಕಿರುಚಿತ್ರ ಪ್ರೊಮೋದಲ್ಲಿ ನೋಡುವಂತೆ ಲವ್ ಸ್ಟೋರಿ. ಶ್ರೀಗಣೇಶ್ ಕಿರುಚಿತ್ರದ ನಿರ್ದೇಶಕರು. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಇರುವ 'ಅನುರಾಗದ ನೆನಪೀಗ ಕೊನೆಯಾಗಲಿ' ಎಂಬ ಸುಂದರ ಹಾಡು ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ಹಿನ್ನೆಲೆ ಗಾಯನವಿದ್ದ ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಶ್ ಸಂಗೀತ ನಿರ್ದೇಶನ ಮಾಡಿದ್ದರು. ಕಿರುಚಿತ್ರವು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಪವನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಈ ಹಿಂದೆ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಶ್ರೀಗಣೇಶ್ ಅವರು ಈ ಕಿರುಚಿತ್ರದ ಮಾಹಿತಿ ತಿಳಿಸಿದ್ದರು. ಇದನ್ನು ಕಿರುಚಿತ್ರ ಎಂಬ ರೀತಿಯಲ್ಲಿ ಶೂಟಿಂಗ್ ಮಾಡಲಿಲ್ಲ. ಇದು ಕಿರುಚಿತ್ರವಾಗಿದ್ದರೂ, ಸಿನಿಮಾದ ರೀತಿಯಲ್ಲಿಯೇ ಮಾಡಿದ್ದೇವೆ. ಇದರ ಗುಣಮಟ್ಟವೂ ಸಿನಿಮಾದ ರೀತಿಯಲ್ಲಿಯೇ ಇದೆ. ಇದೇ ಕಾರಣಕ್ಕೆ ಹಾಡನ್ನೂ ಸಿನಿಮಾದ ರೀತಿಯಲ್ಲಿಯೇ ಬಿಡುಗಡೆ ಮಾಡಲಾಗಿದೆ ಎಂದಿದ್ದರು. ಶೀಘ್ರದಲ್ಲಿಯೇ ಈ ಕಿರುಚಿತ್ರ ಬಿಡುಗಡೆಯಾಲಿದೆ ಎಂದಿದ್ದರು. ಆದರೆ ಸ್ವಲ್ಪ ನಿಧಾನವಾಗಿದ್ದು, ಇದೀಗ ಇದರ ಬಿಡುಗಡೆಯಾಗಲಿರುವುದಾಗಿ ಪವನ್ ಕುಮಾರ್ ಹೇಳಿದ್ದಾರೆ.
ಅಂದಹಾಗೆ ಈ ಕಿರುಚಿತ್ರವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರೀಕರಣದ ಸಂದರ್ಭ ಒಂದೊಳ್ಳೆ ಟ್ರಿಪ್ ಹೋಗಿ ಬಂದ ಫೀಲ್ ಇತ್ತು ಎಂದು ನಾಯಕ ಪವನ್ಕುಮಾರ್ ಹೇಳಿದ್ದರು. ಇದನ್ನುನೋಡಿ ಹಾರೈಸುವಂತೆ ಸಂಜನಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಪುಟ್ಟಕ್ಕನ ಮಕ್ಕಳು ಫ್ಯಾನ್ಸ್ ನಟರ ಕಾಲೆಳೆಯುತ್ತಿದ್ದಾರೆ. ಅಕ್ಕನಿಗೆ ಗೊತ್ತಿಲ್ಲದೇ ಗುಟ್ಟಾಗಿ ಭಾವನ ಜೊತೆ ಸಂಬಂಧ ಬೆಳೆಸಿದ್ಯಾ? ತಡಿ ನಿನಗೆ ಮಾಡುತ್ತೇನೆ, ಸಹನಳಿಗೆ ಹೇಳಿಕೊಡ್ತೇವೆ ಎಂದು ಕೆಲವರು ಕಾಲೆಳೆದಿದ್ದರೆ, ಇನ್ನು ಕೆಲವರು ಕಂಠಿ ಜೊತೆ ಮಾಡಿದ್ದರೆ ಇನ್ನೂ ಚೆನ್ನಾಗಿತ್ತು ಎನ್ನುತ್ತಿದ್ದಾರೆ.
ಮದುಮಗಳಾಗಿ ಕಂಗೊಳಿಸುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡ ಸೀತಾರಾಮ ನಟಿ ವೈಷ್ಣವಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.