ಉಪ್ಪಿನಕಾಯಿಗೂ ಜೀವನಕ್ಕೂ ಹೋಲಿಸಿದ ಪುಟ್ಟಕ್ಕಳ ಮಾತಿಗೆ ತಲೆದೂಗಿದ ನೆಟ್ಟಿಗರು: ಇದೆಷ್ಟು ನಿಜ ಅಲ್ವಾ?

By Suvarna NewsFirst Published Apr 29, 2024, 2:36 PM IST
Highlights

ಮಾವಿನಕಾಯಿ ಉಪ್ಪಿನಕಾಯಿ ಹಾಕುವ ಸಮಯದಲ್ಲಿ ಸಹನಾಳಿಗೆ ಜೀವನದ ಸಾರವನ್ನು ವಿವರಿಸಿದ್ದಾಳೆ ಪುಟ್ಟಕ್ಕ. ಭೇಷ್​ ಭೇಷ್​ ಅಂತಿದ್ದಾರೆ ಸೀರಿಯಲ್​ ಪ್ರೇಮಿಗಳು. 
 

ಕೋರ್ಟ್​ನಲ್ಲಿ ಸಹನಾಳ ತಪ್ಪು ಇಲ್ಲ, ಆಕೆ ಸುಳ್ಳು ಹೇಳಲಿಲ್ಲ, ಅತ್ತೆ ಆಕೆಗೆ ವಿಷ ಹಾಕಿ ಕೊಲ್ಲಲು ಬಂದಿರುವುದು ನಿಜ ಎಂದು ಸಾಬೀತಾಗಿದೆ. ಅದಕ್ಕಾಗಿಯೇ ಸಹನಾಳನ್ನು ಕೋರ್ಟ್​ ಶಿಕ್ಷೆಯಿಂದ ಮುಕ್ತ ಮಾಡಿದೆ. ವಿಚ್ಛೇದನ ಕೇಸ್​ ಎಂದು ಕೋರ್ಟ್​ಗೆ ಹೋಗಿದ್ದ ಸಹನಾ ಅತ್ತೆ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾಳೆ ಎಂದು ಸಾಕ್ಷ್ಯಾಧಾರದ ಕೊರತೆಯಿಂದ ಕೋರ್ಟ್​ ಶಿಕ್ಷೆ ವಿಧಿಸಿತ್ತು. ಆದರೆ ಕಾಳಿಯಿಂದಾಗಿ ಸಹನಾ ಬಚಾವ್​ ಆಗಿದ್ದಾಳೆ. ಆದರೆ ದಂಪತಿಗೆ ಡಿವೋರ್ಸ್​ ಕೊಡದ ಕೋರ್ಟ್​, ಆರು ತಿಂಗಳ ಕಾಲಾವಕಾಶವನ್ನು ನಿಯಮಾನುಸಾರ ನೀಡಿದೆ. ಇದೀಗ ಪುಟ್ಟಕ್ಕ ಮತ್ತು ಮನೆಯವರಿಗೆ ಸಮಾಧಾನವಾಗಿದೆ. ಮಾವಿನಕಾಯಿ ಉಪ್ಪಿನಕಾಯಿಯನ್ನು ಜೀವನಕ್ಕೆ ಹೋಲಿಸಿರುವ ಪುಟ್ಟಕ್ಕ ಜೀವನದ ಸಾರವನ್ನು ಅರ್ಥ ಗರ್ಭಿತವಾಗಿ ಸಹನಾಳಿಗೆ ವಿವರಿಸಿದ್ದು, ಜನರಿಗೆ ಭಾರಿ ಮೆಚ್ಚುಗೆ ಪಡೆಯುತ್ತಿದೆ.

ಸಮುದ್ರದಲ್ಲಿರುವ ನೀರಿನಲ್ಲಿ ಉಪ್ಪು ಇರುತ್ತದೆ. ಅದೇ ಉಪ್ಪಿನಲ್ಲೇ ಉಪ್ಪಿನಕಾಯಿ ಹಾಕ್ತೀವಿ. ಆದರೆ ಉಪ್ಪಿನಕಾಯಿಗೆ ಒಂದು ಹನಿ ನೀರು ಬಿದ್ರೂ ಅಷ್ಟೂ ಉಪ್ಪಿನಕಾಯಿ ಹಾಳಾಗಿ ಹೋಗುತ್ತದೆ, ಇದೆಷ್ಟು ವಿಚಿತ್ರ ಅಲ್ವಾ ಎಂದು ಪುಟ್ಟಕ್ಕನಿಗೆ ಮಗಳ ಸ್ನೇಹಾ ಕೇಳುತ್ತಾಳೆ.  ಆಗ ಪುಟ್ಟಕ್ಕ ಉಪ್ಪು, ನೀರು, ಮಾವಿನಕಾಯಿಯನ್ನು ಇಟ್ಟುಕೊಂಡು ಜೀವನದ ಅರ್ಥಗರ್ಭಿತ ಮಾತುಗಳನ್ನಾಡಿದ್ದು, ಅದು ಪ್ರತಿಯೊಬ್ಬರಿಗೂ ಮಾದರಿ ಎನ್ನುತ್ತಿದ್ದಾರೆ ಪುಟ್ಟಕ್ಕನ ಮಕ್ಕಳು ಫ್ಯಾನ್ಸ್​. 

ಸೀರಿಯಲ್​ ತಾರೆಯರಿಂದ 'ಬಿಂಕದ ಸಿಂಗಾರಿ' ಟ್ರೆಂಡ್​: ಅಮೃತಧಾರೆ ಟೀಂನಿಂದ ಭರ್ಜರಿ ಸ್ಟೆಪ್​

ಜೀವನನೂ ಮಾವಿನ ಕಾಯಿಯ ಹಾಗೆಯೇ. ಮಾವಿನ ಕಾಯಿ ಚಿಗುರೊಡೆದು, ಕಾಯಿಯಾಗಿ ಹಣ್ಣಾಗುತ್ತದೆ. ಮಾವಿನ ಮರಕ್ಕೆ ಕಲ್ಲು ಹೊಡೆದು ಕಲ್ಲು ಕೆಡವಿ ಉಪ್ಪಿನಕಾಯಿಗೆ ಹಾಕ್ತೇವೆ. ಮರದಲ್ಲಿರುವ ಕಾಯಿಗಳಲ್ಲಿ ಕೆಲವು ಕಾಯಿಯಾಗೇ ಉಳಿಯುತ್ತವೆ, ಕೆಲವು ಹಣ್ಣಾಗುತ್ತದೆ. ಬಿರುಗಾಳಿ ಬಂದಾಗ ಕೆಲವು ಕಾಯಿಗಳು ಉದುರಿ ಕೊಳೆತು ಹೋಗುತ್ತವೆ. ನಮ್ಮ ಜೀವನವೂ ಹಾಗೆಯೇ. ಮಾವಿನ ಕಾಯಿ ಹಾಗೆ ಯಾರು ಏನೇ ಅಂದ್ರೂ ತಲೆ ಕೆಡಿಸಿಕೊಳ್ಳಬಾರದು. ಈಗ ನೋಡು. ಈ ಮಾವಿನಕಾಯಿ ಹೆಚ್ಚಿ ಬಿಸಿಲಲ್ಲಿ ಒಣಗಿಸಿ, ಉಪ್ಪು- ಖಾರ ಎಲ್ಲಾ ಹಾಕಿ ಜರಡಿಯಲ್ಲಿ ಮುಳುಗಿಸಿ ಇಡುತ್ತೇವೆ. ಆದರೆ ಅದು ತನ್ನ ಗುಣ ಬಿಟ್ಟು ಕೊಡುವುದಿಲ್ಲ. ಉಪ್ಪು ಖಾರದ ಜೊತೆಯಲ್ಲಿಯೇ ಇದ್ದು, ಕಳತು ರುಚಿ ಕೊಡುತ್ತದೆ ಅಲ್ಲವೆ? ಇಷ್ಟೆಲ್ಲಾ ಕಷ್ಟ ಕೊಡುತ್ತಾರೆ ಅಂತ ಮಾವಿನಕಾಯಿ ರುಚಿ ಕಳೆದುಕೊಳ್ತದಾ ಎಂದು ಪುಟ್ಟಕ್ಕ ಕೇಳಿದಾಗ, ಸಹನಾ ಹಾಗಾದ್ರೆ ಯಾರೇ ಕಷ್ಟ ಕೊಟ್ರೂ ಅದನ್ನು ಸಹಿಸಿಕೊಂಡು ಹೋಗಬೇಕು ಎಂದು ನೀನು ಹೇಳ್ತಾ ಇದ್ದಿಯಾ ಎಂದು ಪ್ರಶ್ನಿಸುತ್ತಾಳೆ.

ಅದಕ್ಕೆ ಪುಟ್ಟಕ್ಕ, ಇಲ್ಲೇ ನೋಡು ನೀನು ತಪ್ಪಾಗಿ ಅರ್ಥ ಮಾಡಿಕೊಳ್ತಿರೋದು. ಯಾರು ಏನೇ ಕಷ್ಟ ಕೊಡಲಿ, ಹೊಗಳಲಿ- ತೆಗಳಲಿ ನಮ್ಮ ಗುಣನ ನಮ್ಮತನವನ್ನು ಬಿಟ್ಟುಕೊಡಬಾರದು ಎನ್ನುತ್ತಾಳೆ. ನಂತರ ಸಹನಾ ಹೇಳಿದ ಮಾತನ್ನೇ ಅವಳಿಗೆ ಹೇಳುವ ಪುಟ್ಟಕ್ಕ, ನೀನೇ ಹೇಳಿದ್ಯಲ್ಲಾ ಸಹನಾ, ಸಮುದ್ರದಲ್ಲಿರುವ ನೀರಿನಲ್ಲಿ ಉಪ್ಪು ಇರುತ್ತದೆ. ಅದೇ ಉಪ್ಪಿನಲ್ಲೇ ಉಪ್ಪಿನಕಾಯಿ ಹಾಕ್ತೀವಿ. ಆದರೆ ಉಪ್ಪಿನಕಾಯಿಗೆ ಒಂದು ಹನಿ ನೀರು ಬಿದ್ರೂ ಅಷ್ಟೂ ಉಪ್ಪಿನಕಾಯಿ ಹಾಳಾಗಿ ಹೋಗುತ್ತದೆ, ಇದೆಷ್ಟು ವಿಚಿತ್ರ ಅಲ್ವಾ ಅಂತ, ಹಾಗೆಯೇ  ಪ್ರಕೃತಿ ತನಗೆ ಒಗ್ಗಿಕೊಳ್ಳದೇ ಇರುವ ಗುಣಗಳನ್ನು ಸೇರಿಸಿಕೊಳ್ಳೋದು, ರೂಢಿಸಿಕೊಳ್ಳುವುದು ಮಾಡ್ತಾ ಹೋದ್ರೆ ತನ್ನ ತನವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಮನುಷ್ಯನೂ ಹಾಗೇ ತನ್ನ ಏಳಿಗೆಗೆ ಏನು ಬೇಕೋ ಅದನ್ನು ಮಾತ್ರ ಮೈಗೂಡಿಸಿಕೊಳ್ಳಬೇಕು. ತಪ್ಪು -ಸರಿ ಎಲ್ಲಾ ತೂಗಿಸಿಕೊಳ್ತಾನೇ ಇದ್ರೆ ಕೂತಲ್ಲೇ ಕೊಳೆತುಹೋಗಬೇಕಾಗ್ತದೆ ಹೊರತು ಮುಂದುವರೆಯಲು ಆಗುವುದಿಲ್ಲ ಎಂದಿದ್ದಾಳೆ. ಪುಟ್ಟಕ್ಕನ ಮಾತಿಗೆ ಫ್ಯಾನ್ಸ್​ ತಲೆದೂಗುತ್ತಿದ್ದಾರೆ. ಪ್ರತಿಯೊಬ್ಬ ಜನರೂ ಇದನ್ನು ಮೈಗೂಡಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. 

ಅಬ್ಬಬ್ಬಾ ಸೀರಿಯಲ್​ ಪ್ರೇಮಿಗಳಾ...? ಛೇ... ಛೇ... ನಿರ್ದೇಶಕರನ್ನೇ ಈ ಪರಿ ತರಾಟೆಗೆ ತೆಗೆದುಕೊಳ್ಳೋದಾ?
 

click me!