ನಟಿ ಮೋಕ್ಷಿತಾ ಪೈ ಅವರು ಬುದ್ದಿಮಾಂದ್ಯ ಸಹೋದರನನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದಾಗಿ ತಮ್ಮ ವೃತ್ತಿಜೀವನದಲ್ಲಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ತಮ್ಮನನ್ನು ಮಗುವಿನಂತೆ ನೋಡಿಕೊಂಡ ಮೋಕ್ಷಿತಾ, ಅವರಿಗಾಗಿ ಆಫರ್‌ಗಳನ್ನು ಬಿಟ್ಟು ಮನೆಯಲ್ಲಿದ್ದರು.
ಬೆಂಗಳೂರು (ಅ.1): ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ 'ಪಾರು..' ಧಾರವಾಹಿಯ ಟೈಟಲ್ ಸಾಂಗ್‌ನಲ್ಲಿ 'ಕರುಣೆಯ ಪೈರು, ನಮ್ಮ ಪಾರು...' ಅನ್ನೋ ಸಾಲಿದೆ. ಈ ಧಾರವಾಹಿಯಲ್ಲಿ ಪಾರು ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಮೋಕ್ಷಿತಾ ಪೈ ಇಂದು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮೋಕ್ಷಿತಾ ಪೈ ಧಾರವಾಹಿಯಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಕರುಣೆಯ ಪೈರು ಅನ್ನೋದು ಅವರ ಜೀವನವನ್ನು ನೋಡಿದಾಗಲೇ ಅರ್ಥವಾಗುತ್ತದೆ. ಎಲ್ಲರಿಗೂ ತಿಳಿದ ಹಾಗೆ ಮೋಕ್ಷಿತಾ ಪೈ ಅವರ ಸಹೋದರ ಬುದ್ದಿಮಾಂದ್ಯನಾಗಿ ಜನಿಸಿದ್ದಾರೆ. 22 ವರ್ಷವಾಗಿದ್ದರೂ ಇಂದಿಗೂ ಅವರು 8 ವರ್ಷದ ಮಕ್ಕಳ ರೀತಿ ಇದ್ದರೆ, ಅವರ ಬುದ್ದಿ ಇನ್ನೂ 8 ತಿಂಗಳ ಮಗುವಿನ ಹಾಗೆ ಇದೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲೂ ಮೋಕ್ಷಿತಾ ಪೈ ಮಾತನಾಡಿದ್ದರು. ತಮ್ಮನ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುವ ಮೋಕ್ಷಿತಾ ಪೈ, ಬಿಗ್ ಬಾಸ್ ವೇದಿಕೆಯಲ್ಲೂ ಸುದೀಪ್ ಈ ಬಗ್ಗೆ ಪ್ರಶ್ನೆ ಮಾಡಿದಾಗ, ನನ್ನ ತಮ್ಮನಿಗೆ ನಾನು ಅಕ್ಕನೂ ಹೌದು, ಅಮ್ಮನೂ ಹೌದು. ಆತನ ಬಗ್ಗೆ ಹೆಚ್ಚು ಮಾತನಾಡೋದು ಇಷ್ಟವಿಲ್ಲ ಎಂದು ಹೇಳಿ ಸುಮ್ಮನಾದರು.
ಇದರ ನಡುವೆ 2019ರಲ್ಲಿ ತಮ್ಮನ ಬಗ್ಗೆ ಮೋಕ್ಷಿತಾ ಪೈ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ತಮ್ಮನಿಗಾಗಿ ಮೋಕ್ಷಿತಾ ಪೈ ಮಾಡಿರುವ ತ್ಯಾಗ ಗೊತ್ತಾಗುತ್ತಿದೆ. 'ನನ್ನ ಬಾಲ್ಯ ಎಲ್ಲರಿದ್ದ ಹಾಗೆ ಇದ್ದಿರಲೇ ಎಲ್ಲ. ಎಲ್ಲರ ಬಾಲ್ಯದಲ್ಲಿ, ತಮಾಷೆ, ತರಲೆಗಳು ಇರುತ್ತವೆ. ನನ್ನ ಬಾಲ್ಯದಲ್ಲಿ ಅಂಥ ಸಂಗತಿಗಳೇ ಇದ್ದಿರಲಿಲ್ಲ. ನನಗೆ ಬುದ್ದಿಮಾಂದ್ಯನಾದ ಒಬ್ಬ ತಮ್ಮನಿದ್ದಾನೆ. ಆತನ ನೋಡಿಕೊಳ್ಳುವ ಕಾರಣದಿಂದಾಗಿ ಚಿಕ್ಕಂದಿನಿಂದಲೇ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಗಳಿದ್ದವು. ನಾನೇ ದೊಡ್ಡವಳಾಗಿದ್ದ ಕಾರಣಕ್ಕೆ ಆತನನ್ನೆ ನೋಡಿಕೊಳ್ಳಬೇಕಾಗುತ್ತಿತ್ತು. ಆತ ಒಂದು ಮಗು ಥರ ಇದ್ದಾನೆ' ಎಂದು ಹೇಳಿದ್ದಾರೆ.
ಈಗಲೂ ಕೂಡ ಆತ ಒಂದು ಮಗು ಥರ. ಆತನಿಗೆ 17 ವರ್ಷವಾಗಿದ್ದರೂ, ಆತ ಇನ್ನೂ 8 ವರ್ಷದ ಮಗು ರೀತಿ ಇದ್ದಾನೆ. ಇನ್ನು ಆತನ ಬುದ್ದಿ 8 ತಿಂಗಳ ಮಗುವಿನ ರೀತಿ ಇದೆ. ಅವನನ್ನು ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಇದೇ ಕಾರಣಕ್ಕಾಗಿ ಬಾಲ್ಯದಲ್ಲಿ ಯಾವುದೇ ರೀತಿಯ ತರಲೆ, ತಮಾಷೆಗಳು ಮಾಡೋಕೆ ಸಾಧ್ಯವಾಗಲಿಲ್ಲ. ಮಾಡಿದ್ದರೂ ಅದರ ನೆನಪೂ ಇಲ್ಲ. ನನ್ನ ತಮ್ಮನನ್ನು ನೋಡಿಕೊಂಡು, ಅಮ್ಮನಿಗೆ ಸಹಾಯ ಮಾಡಿಕೊಂಡು ಬೆಳೆದಿದ್ದೆ ಎಂದು ಮೋಕ್ಷಿತಾ ಹೇಳಿದ್ದಾರೆ.
ನನ್ನ ಬಿಕಾಂ ಓದು ಮುಗಿದ ಬಳಿಕ, ಅಮ್ಮ ಓದುವುದಕ್ಕೆ ಆರಂಭ ಮಾಡಿದ್ದರು. ಅಪ್ಪ ಅವರ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದರು. ಅಮ್ಮ ಓದುವುದರಲ್ಲಿ ಬ್ಯುಸಿ ಆಗಿದ್ದರು, ಈಗ ತಮ್ಮನನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದ ಕಾರಣಕ್ಕೆ ನಾನು ನನ್ನ ವಿದ್ಯಾಭ್ಯಾಸವನ್ನು ಅಲ್ಲಿಗೆ ನಿಲ್ಲಿಸಿದೆ. ಅವನನ್ನು 2-3 ವರ್ಷಗಳ ಕಾಲ ಮನೆಯಲ್ಲಿ ನಾನೇ ನೋಡಿಕೊಂಡೆ. ಅವನಿಗೆ ಏನೂ ಕೂಡ ಗೊತ್ತಾಗೋದಿಲ್ಲ. ಈ ವೇಳೆ ನನಗೆ ಹಲವು ಆಫರ್‌ಗಳು ಬರುತ್ತಿದ್ದವು. ಆದರೆ, ಈ ವೇಳೆ ಅಮ್ಮ ಓದುತ್ತಾ ಇದ್ದರು. ಅವರ ಶಿಕ್ಷಣ ಕಂಪ್ಲೀಟ್ ಮಾಡಬೇಕು ಅನ್ನೋದು ನಮ್ಮ ಆಸೆ ಆಗಿತ್ತು. ಅವರಿಗೆ ಪ್ರೋತ್ಸಾಹ ಮಾಡುವ ಸಲುವಾಗಿ ನಾನು 2-3 ವರ್ಷ ಯಾವುದೇ ಆಫರ್ ಒಪ್ಪಿಕೊಳ್ಳಲಿಲ್ಲ. ಅವನ ಜತೆ ಇರೋದೇ ನನಗೆ ದಿನವಾಗ್ತಿತ್ತು. ನನ್ನ ಜೊತೆ ಎಷ್ಟು ಬೆರೆತು ಹೋಗಿದ್ದ ಎಂದರೆ, ನನ್ನ ಹೊರತಾಗಿ ಬೇರೆ ಯಾರೂ ಊಟ ಮಾಡಿಸಿದ್ದರೂ ಆತ ಮಾಡ್ತಾ ಇರ್ಲಿಲ್ಲ. ಈಗ ಅಮ್ಮನ ಕೋರ್ಸ್ ಕೂಡ ಮುಗಿದಿದೆ. ಅವನನ್ನ ನೋಡಿಕೊಳ್ಳೋಕೆ ಮತ್ತೊಬ್ಬರೂ ಇದ್ದಾರೆ. ಹಾಗಾಗಿ ನಾನು ಶೂಟಿಂಗ್‌ಗೆ ಹೋಗಲು ಶುರು ಮಾಡಿದೆ ಎನ್ನುತ್ತಾರೆ ಮೋಕ್ಷಿತಾ.
ಇವರೇ ನೋಡಿ ಬಿಗ್ ಸ್ಪರ್ಧಿಗಳು..'ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳೋ ಜನಕ, ಇಲ್ಲೇ ಕಾಣಬೇಕು ಬಿಗ್ ಬಾಸ್ ಮುಗಿಯೋ ತನಕ'!
ಈ ವೇಳೆ ಅಮ್ಮ ಕೂಡ ಅವನಿಗೋಸ್ಕರ ನಿನ್ನ ಆಫರ್‌ಗಳನ್ನ ಯಾಕೆ ಹಾಳು ಮಾಡಿಕೊಳ್ತಿಯಾ ಅಂತಾ ಹೇಳಿದ್ದರು. ನೀನು ಏನಾದರೂ ಸಾಧನೆ ಮಾಡಬೇಕು. ಅದನ್ನು ಮಾಡು ಅಂತಾ ಪ್ರೋತ್ಸಾಹ ತುಂಬಿದರು. ಮನೆಯಲ್ಲಿ ಬೆಂಬಲವಾಗಿರುವ ಕಾರಣಕ್ಕಾಗಿಯೇ ನಾನು ಹೊರಗಡೆ ಹೋಗಿ ಶೂಟಿಂಗ್‌ಗೆ ಹೋಗಿ ಬರಲು ಸಾಧ್ಯವಾಗುತ್ತಿದೆ ಎಂದಿದ್ದರು.
ಬಿಗ್ ಬಾಸ್‌ಗೆ ಎಂಟ್ರಿಯಾದ 'ರಾಜಿ' ಹಂಸ, ಪುಟ್ಟಕ್ಕನಿಗೆ ಕೊನೆಗೂ ಕಾಟ ತಪ್ಪಿತಲ್ಲ!