
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿ ದಿನದಿಂದ ದಿನಕ್ಕೆ ಭಕ್ತರ ಮನ ಗೆಲ್ಲುತ್ತಿದೆ. ಶಂಕುಕರ್ಣನಿಂದ ಆರಂಭವಾಗಿ ಪ್ರಹ್ಲಾದ, ಬಾಹ್ಲೀಕ, ವ್ಯಾಸರಾಯರ ಅವತಾರಗಳ ಮೂಲಕ ವೆಂಕಟನಾಥರಾಗಿ, ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಪಯಣವನ್ನು ಕಟ್ಟಿಕೊಡುವ ಈ ಧಾರಾವಾಹಿ ಭಕ್ತಿ ಮತ್ತು ಭಾವನೆ ಎರಡನ್ನೂ ಒಟ್ಟಿಗೆ ತಲುಪಿಸುತ್ತಿದೆ. ಅದರಲ್ಲೂ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸುತ್ತಿರುವ ಪರೀಕ್ಷಿತ್ ಅವರ ಅಭಿನಯ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ.
ಇದೀಗ ಆ ಮೆಚ್ಚುಗೆಗೆ ಜೀವಂತ ಸಾಕ್ಷಿಯಾಗುವಂತಹ ಒಂದು ವಿಶೇಷ ಘಟನೆ ನಡೆದಿದ್ದು, ಅದನ್ನು ಸ್ವತಃ ಪರೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಭೇಟಿಯಾದ ವೃದ್ಧೆಯೊಬ್ಬರು ಅವರ ಅಭಿನಯವನ್ನು ಮನಸಾರೆ ಹೊಗಳಿ ಆಶೀರ್ವದಿಸಿದ ಕ್ಷಣವನ್ನು ನಟ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಆ ಪೋಸ್ಟ್ ವೈರಲ್ ಆಗಿದೆ.
'ಪ್ರಶಸ್ತಿಗಿಂತ ದೊಡ್ಡದು ಈ ಆಶೀರ್ವಾದ'
ಇನ್‌ಸ್ಟಾಗ್ರಾಂನಲ್ಲಿ ಅಜ್ಜಿಯೊಂದಿಗೆ ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿರುವ ಪರೀಕ್ಷಿತ್, ತಮ್ಮ ಮನದಾಳದ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿದ್ದಾರೆ. "ಕೆಲಸ ಮಾಡುತ್ತೇವೆ, ಸಂಪಾದನೆ ಮಾಡುತ್ತೇವೆ... ಬದುಕು ಗೊತ್ತಿಲ್ಲದೆ ಉರುಳಿ ಹೋಗುತ್ತದೆ. ಆದರೆ ಕೆಲವು ಸನ್ನಿವೇಶಗಳು ನಮ್ಮನ್ನು ನಿಜವಾಗಿಯೂ ಬದುಕುವಂತೆ ಮಾಡುತ್ತವೆ. ಇಂದು ರಸ್ತೆಯಲ್ಲಿ ಮುದ್ದಾದ ಅಜ್ಜಿ ಸಿಕ್ಕಿದ್ದರು. 'ನೀನು ಆ ಪಾತ್ರ ತುಂಬಾ ಚೆನ್ನಾಗಿ ಮಾಡುತ್ತಿದ್ದೀಯಾ' ಎಂದು ಹೇಳಿ ತಲೆ ಸವರಿ ಮನಸಾರೆ ಆಶೀರ್ವದಿಸಿದರು. ಪ್ರಶಸ್ತಿ, ಯಶಸ್ಸು ಎಲ್ಲವನ್ನೂ ಮೀರಿಸುವಷ್ಟು ಅಮೂಲ್ಯವಾಗಿತ್ತು ಅವರ ಪ್ರೀತಿ. ಧನ್ಯವಾದಗಳು ಅಜ್ಜಿ... ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ." ಈ ಭಾವನಾತ್ಮಕ ಬರಹ ಅಭಿಮಾನಿಗಳ ಮನ ಮುಟ್ಟಿದ್ದು, ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೆ ರಾಯರ ಪಾತ್ರದಲ್ಲಿ ಪರೀಕ್ಷಿತ್
ಈ ಧಾರಾವಾಹಿಯ ಆರಂಭದಲ್ಲಿ ಪರೀಕ್ಷಿತ್ ಅವರು ವೆಂಕಟನಾಥರ ಗುರುಗಳಾದ ವ್ಯಾಸರಾಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕಥೆಯ ತಿರುವಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದು, ಸುಮಾರು 14 ವರ್ಷಗಳ ಬಳಿಕ ಮತ್ತೆ ರಾಯರ ಪಾತ್ರದಲ್ಲಿ ಅವರನ್ನು ನೋಡುವ ಅವಕಾಶ ಸಿಕ್ಕಿರುವುದು ವೀಕ್ಷಕರಿಗೆ ವಿಶೇಷ ಸಂತಸ ತಂದಿದೆ.
ಪರೀಕ್ಷಿತ್ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾವಪೂರ್ಣ ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮಲ್ಲಿ ಗುರು ರಾಯರ ದರ್ಶನವಾಗುತ್ತದೆ", "ನೀವು ಪಾತ್ರವನ್ನು ಬದುಕಿಸುತ್ತಿದ್ದೀರಿ", "ಅದ್ಭುತ ಅಭಿನಯ" ಎಂಬ ಕಾಮೆಂಟ್‌ಗಳು ಹರಿದುಬಂದಿವೆ. ಸದ್ಯ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ಪರೀಕ್ಷಿತ್ ಅವರ ಅಭಿನಯ ಮಾತ್ರವಲ್ಲ, ಅವರಿಗೆ ಸಿಗುತ್ತಿರುವ ಪ್ರೇಕ್ಷಕರ ನಿಷ್ಕಲ್ಮಶ ಪ್ರೀತಿ ಮತ್ತು ಆಶೀರ್ವಾದವೂ ಈ ಧಾರಾವಾಹಿಯ ಯಶಸ್ಸಿಗೆ ಮತ್ತೊಂದು ಸಾಕ್ಷಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.