ಡಾ.ರಾಜ್ಕುಮಾರ್ ಅಭಿಮಾನಿಯೊಬ್ಬರು ಅವರ ಮೇಲಿಟ್ಟಿರುವ ಪ್ರೀತಿಗೆ ಪುನೀತ್ ರಾಜ್ಕುಮಾರ್ ಭಾವುಕರಾಗಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ನಟಿ ಲಕ್ಷ್ಮಿ ಅವರು ನಡೆಸಿಕೊಡುತ್ತಿದ್ದ ಕಥೆಯಲ್ಲ.. ಜೀವನದ ವಿಡಿಯೋ ಇದು...
ಡಾ.ರಾಜ್ಕುಮಾರ್ ಅವರಂಥ ಮೇರುನಟ ಇನ್ನೊಬ್ಬರಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಛಾಪು ಮೂಡಿಸಿ ಹೋಗಿದ್ದಾರೆ. ಅವರನ್ನು ಕೇವಲ ಒಬ್ಬ ಸಿನಿಮಾ ತಾರೆಯಾಗಿ ಮಾತ್ರವಲ್ಲದೇ, ದೇವರ ಸಮಾನ ಎಂದು ನೋಡಿದ, ಇಂದಿಗೂ ನೋಡುತ್ತಿರುವ ದೊಡ್ಡ ವರ್ಗವೇ ಇದೆ. ಸಿನಿಮಾ ತಾರೆಯರು ಎಂದರೆ ಸಾಕು, ಅವರು ಹೇಗೆ ಇದ್ದರೂ ಅವರಿಗೆ ದೊಡ್ಡ ಅಭಿಮಾನ ವರ್ಗವೇ ಇರುವುದು ನಿಜವಾದರೂ, ಡಾ.ರಾಜ್ಕುಮಾರ್ ವಿಷಯದಲ್ಲಿ ಹಾಗಲ್ಲ. ಅವರ ಪ್ರತಿಯೊಂದು ನಡವಳಿಕೆಗೂ ಅವರದ್ದೇ ಆದ ಘನತೆ ಇತ್ತು. ತಾವು ಮಾಡುತ್ತಿರುವುದು ಯಾವುದೇ ಪಾತ್ರವಾಗಲೀ, ಆ ಪಾತ್ರದೊಳಕ್ಕೆ ತಾವು ಹೋಗಲು ಅವರು ಅನುಸರಿಸುತ್ತಿದ್ದ ಕಠಿಣ ಮಾರ್ಗಗಳು ಬಹುಶಃ ಇಂದಿನ ಯಾವ ತಾರೆಯರೂ ಮಾಡುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅವರ ಹೆಸರು ಹಚ್ಚ ಹಸುರಾಗಿದೆ. ಅಭಿಮಾನಿ ದೇವರುಗಳೇ... ಎಂದು ಅವರು ಒಂದು ಮಾತನಾಡಿದರೆ ಸಾಕು, ಲಕ್ಷಾಂತರ ಅಭಿಮಾನಿಗಳ ಪುಳುಕಿತರಾಗುವಷ್ಟ ತೇಜಸ್ಸು ಅವರಲ್ಲಿ ಇತ್ತು. ಇದೀಗ ಅವರ ಅಭಿಮಾನಿಯೊಬ್ಬರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಇವರ ಅಭಿಮಾನಕ್ಕೆ ಪುನೀತ್ ರಾಜ್ಕುಮಾರ್ ಅವರೇ ಭಾವುಕರಾಗಿದ್ದಾರೆ.
ಡಾ.ರಾಜ್ಕುಮಾರ್ ಅವರ ನಿಧನದ ಬಳಿಕದ ವಿಡಿಯೋ ಇದಾಗಿದೆ. ಆಗ ಚಿತ್ರನಟಿ ಜ್ಯೂಲಿ ಲಕ್ಷ್ಮಿ ಅವರು ಕಥೆಯಲ್ಲ, ಜೀವನ ಎಂಬ ಷೋ ನಡೆಸಿಕೊಡುತ್ತಿದ್ದರು. ಅದರ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ. ಇದರಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವ ರಾಮ್ ಕುಮಾರ್ ಮತ್ತು ಅವರ ಪತ್ನಿ ಪದ್ಮಶ್ರೀ ಈ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮದುವೆಯಾಗಿ ಈ ಷೋ ನಡೆಯುವ ಸಂದರ್ಭದಲ್ಲಿ 28 ವರ್ಷವಾಗಿತ್ತು. ಇವರ ಲವ್ಸ್ಟೋರಿಯನ್ನು ಲಕ್ಷ್ಮಿ ಅವರು ಪುನೀತ್ಗೆ ಕರೆ ಮಾಡಿ ಹೇಳಿದ್ದಾರೆ. ಅಷ್ಟಕ್ಕೂ ಇವರ ಲವ್ ಸ್ಟೋರಿಯೇ ಚೆನ್ನಾಗಿದೆ. ರಾಮ್ಕುಮಾರ್ ಅವರು ಮದುವೆಗೂ ಮುನ್ನ ಪದ್ಮಶ್ರೀ ಅವರನ್ನು ನೋಡಿಯೇ ಇಲ್ವಂತೆ. ಅಂದರೆ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ನೋಡಿಕೊಳ್ಳಲಿಲ್ಲ. ಪದ್ಮಶ್ರೀ ಅವರು ಡಾ.ರಾಜ್ಕುಮಾರ್ ಅವರ ಫ್ಯಾನ್ ಎನ್ನುವ ಕಾರಣಕ್ಕೆ ರಾಮ್ಕುಮಾರ್ ಅವರನ್ನು ಒಮ್ಮೆಯೂ ನೋಡದೇ ಮದುವೆಯಾಗಿದ್ದಾರೆ. ಡಾ.ರಾಜ್ ಅವರ ಮೇಲಿನ ಪ್ರೀತಿಗೆ ಇವರ ಈ ಮದುವೆಯೇ ಸಾಕ್ಷಿಯಾಗಿದೆ. ಹಾಲು ಜೇನು ಚಿತ್ರದ ಸ್ಪೂರ್ತಿಯಿಂದ ಮದುವೆಯಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
20 ವಯಸ್ಸಿಗೆ ನಟನೆ ಸಾಕು ಅಂದ್ರು ಅಮ್ಮ... ಮದುವೆ ಮಾಡಿದ್ರು... ಆದ್ರೆ... ನೋವಿನ ದಿನಗಳ ನೆನೆದ ಸುಧಾರಾಣಿ
ಇದೇ ವಿಷಯವನ್ನು ಲಕ್ಷ್ಮಿ ಅವರು ಪುನೀತ್ಗೆ ಕರೆ ಮಾಡಿ ಹೇಳಿದ್ದರು. ಪದ್ಮಶ್ರೀ ಅವರಿಗೆ ಕೆಲವೊಂದು ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಅವರಿಗೆ ಪತಿಯೇ ಸೇವೆ ಮಾಡುತ್ತಿರುವುದಾಗಿ ಲಕ್ಷ್ಮಿ ಹೇಳಿದರು. ನಂತರ ತಮಗೆ ಡಾ.ರಾಜ್ ಅವರ ಮೇಲಿರುವ ಅಭಿಮಾನ, ಪ್ರೀತಿಯ ಕುರಿತು ಮಾತನಾಡಿದ ರಾಮ್ಕುಮಾರ್ ಅವರು, ನನ್ನ ಪತ್ನಿ ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ, ಹೀಗೆ ಗಟ್ಟಿ ಇದ್ದಾರೆ ಎಂದರೆ ಅದಕ್ಕೆ ಅಪ್ಪಾಜಿ ಆಶೀರ್ವಾದ ಕಾರಣ. ನಮಗೆ ಏನೇ ಸಮಸ್ಯೆ ಎದುರಾದರೂ ಅಪ್ಪಾಜಿಯವರನ್ನು ನೆನಪಿಸಿಕೊಳ್ಳುತ್ತೇವೆ. ಅವರೇ ನಮಗೆ ಎನರ್ಜಿ ತುಂಬುತ್ತಾರೆ. ಅವರ ಆಶೀರ್ವಾದದಿಂದ ನಾವು ಹ್ಯಾಪ್ಪಿ ಆಗಿದ್ದೇವೆ ಎಂದಿದ್ದಾರೆ.
ಇದನ್ನು ಕೇಳಿ ಪುನೀತ್ ಅವರು ಭಾವುಕರಾದರು. ನಿಮ್ಮಂಥವರು ಅಪ್ಪಾಜಿ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಚಿರಋಣಿ ಎನ್ನುತ್ತಲೇ ಅವರು ಇನ್ನಷ್ಟು ವರ್ಷ ಚೆನ್ನಾಗಿ ಬಾಳಲಿ ಎಂದು ಹಾರೈಸಿದರು. ಇದೇ ವೇಳೆ ರಾಮ್ಕುಮಾರ್ ಅವರ ಇನ್ನೊಂದು ಮಾತು ಪುನೀತ್ ಅವರ ಮನ ಕರಗಿಸಿತು. ಅದೇನೆಂದರೆ, ಅಪ್ಪಾಜಿ ನಿಧನ ಹೊಂದಿದ ದಿನವೇ ನಾವಿಬ್ಬರೂ ಹೋಗೋಣ ಎಂದುಕೊಂಡಿದ್ದೆವು. ಆದರೆ ದೇವರು ಜೀವ ಇನ್ನೂ ಇಟ್ಟಿದ್ದಾನೆ. ಅಪ್ಪಾಜಿ ಹೋದ ಮೇಲೆ ನಾನು ಇದುವರೆಗೂ ಸಿಹಿಯನ್ನು ಮುಟ್ಟಿಲ್ಲ. ಅವರ ಹಲವು ಆಡಿಯೋ, ವಿಡಿಯೋಗಳನ್ನು ಸಂಗ್ರಹಿಸಿ ಇಟ್ಟಿದ್ದೆ. ಅದನ್ನು ಅವರಿಗೆ ಕೊಡಲು ಕೊನೆಗೂ ಸಾಧ್ಯವಾಗಲೇ ಇಲ್ಲ ಎಂದರು. ಇದಕ್ಕೆ ಪುನೀತ್ ಅವರು, ತಮ್ಮ ಮನೆಗೆ ಅದನ್ನು ತಂದುಕೊಡಿ ಎಂದು ಹೇಳಿದರು.
ಸೇಮ್-ಟು-ಸೇಮ್ ಡ್ರೆಸ್ನಲ್ಲಿ ಮಿಂಚಿದ ಸೀತಾ- ಶ್ರಾವಣಿ! ಇವರಿಬ್ಬರ ಸಂಬಂಧವಾದ್ರೂ ಏನು?