ಕಿರುತೆರೆ ನಟಿ ಸೌಮ್ಯಾ ರಾವ್ ಕನ್ನಡ ಕಿರುತೆರೆಯಲ್ಲಿ ತನು ಅನುಭವಿಸಿದ ಅಸಮಾನತೆ ಮತ್ತು ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ನಿರ್ಮಾಪಕರಿಂದ ತನಗೆ ಎದುರಾದ ದುರ್ವರ್ತನೆ ಮತ್ತು ಇತರ ಕಲಾವಿದರಿಗೆ ನೀಡಲಾಗುವ ಮಾನ್ಯತೆ ಕುರಿತು ಬೆಳಕು ಚೆಲ್ಲಿದ್ದಾರೆ.
ಸೌಮ್ಯಾ ರಾವ್ ಅನ್ನೋ ದಕ್ಷಿಣ ಭಾರತೀಯ ಕಿರುತೆರೆ ನಟಿ ಸಂದರ್ಶವೊಂದರಲ್ಲಿ ಆಡಿದ ಮಾತುಗಳು ವೈರಲ್ ಆಗ್ತಿವೆ. ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದು ಬದುಕು ಕಂಡುಕೊಳ್ಳಲು ಕಿರುತೆರೆಗೆ ಬಂದವರು ಸೌಮ್ಯಾ ರಾವ್. ಆರಂಭದಲ್ಲಿ ಕನ್ನಡದಲ್ಲಿ ನ್ಯೂಸ್ ರೀಡರ್ ಆಗಿದ್ದ ಸೌಮ್ಯಾ ನಂತರ ಕನ್ನಡ ಸೀರಿಯಲ್‌ಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲಾರಂಭಿಸಿದರು. ತಾನು ನಟಿಸುತ್ತಿದ್ದ ವೇಳೆ ನಾಯಕ, ನಾಯಕಿಯರಿಗೆ ಸಿಗುತ್ತಿದ್ದ ಮರ್ಯಾದೆ, ಉಳಿದ ಕಲಾವಿದರಿಗೆ ಆಗುತ್ತಿದ್ದ ಅವಮಾನ ಎಂಥಾದ್ದು ಎಂಬುದನ್ನು ಅವರು ತೆಲುಗು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಸದ್ಯ ಈ ಇಂಟರ್‌ವ್ಯೂ ವೈರಲ್ ಆಗಿದೆ. ಒಂದಿಷ್ಟು ಜನ ಈಕೆಯ ವಾದವನ್ನು ಒಪ್ಪಿಕೊಂಡರೆ ಕೆಲವು ಕನ್ನಡಿಗರು ಸಿಟ್ಟಾಗಿದ್ದಾರೆ.
ಹಾಗೆ ನೋಡಿದರೆ ಕನ್ನಡ ಕಿರುತೆರೆಯನ್ನು ಹತ್ತಿರದಿಂದ ಬಲ್ಲ, ಅಲ್ಲಿ ನಟಿಸಿರುವ ಹೊಸ ಕಲಾವಿದರು ಇಲ್ಲಿ ಅನನುಭವಿ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇಲ್ಲಿ ಡಿಗ್ನಿಟಿ ಆಫ್ ಲೇಬರ್ ಅನ್ನೋದನ್ನು ಗಾಳಿಗೆ ತೂರಲಾಗುತ್ತೆ, ಎಲ್ಲೆಲ್ಲೂ ಪ್ರಧಾನ ಕಲಾವಿದರಿಗೆ ಮಣೆ ಹಾಕಿ ಇತರರನ್ನು ನಿರ್ಲಕ್ಷಿಸಲಾಗುತ್ತೆ ಅನ್ನುವ ಆರೋಪ ಹಿಂದಿನಿಂದಲೇ ಇದೆ. ಆದರೆ ಹೊಸಬರು ಭಯದಿಂದಲೋ, ಹೀಗೆ ಹೇಳಿದರೆ ಎಲ್ಲಿ ಬರುವ ಅವಕಾಶಗಳೂ ಮಿಸ್ ಆಗಬಹುದೇನೋ ಎಂಬ ಆತಂಕದಿಂದಲೋ ಬಾಯಿ ಬಿಡುತ್ತಿರಲಿಲ್ಲ. ಅಂಥಾ ವಿಚಾರವೊಂದು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಜೊತೆಗೆ ಈ ಬಗ್ಗೆ ಮಾತುಕತೆಯೂ ಜೋರಾಗಿದೆ.
ಇದರ ಜೊತೆಗೆ ಕನ್ನಡ ಕಿರುತೆರೆ ನಿರ್ಮಾಪಕರ ಅಮಾನವೀಯ ನಡೆಯ ಬಗ್ಗೆಯೂ ಈ ನಟಿ ಬೆಳಕು ಚೆಲ್ಲಿದ್ದಾರೆ.
'ನಾನೊಂದು ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಆ ಧಾರಾವಾಹಿ ಹೀರೋಯಿನ್‌ಗೆ ನಿರ್ಮಾಪಕರು ಮನೆಯಿಂದ ಪಾಯಸ ತಂದಿದ್ದರು. ಅದು ನನಗೆ ಗೊತ್ತೇ ಇರಲಿಲ್ಲ. ಪ್ರೊಡಕ್ಷನ್ ಹೌಸ್ ಪಕ್ಕದಲ್ಲಿಯೇ ಪಾಯಸ ಇತ್ತು. ಏನೂ ತಿಳಿಯದ ನಾನು 1 ಚಮಚ ಪಾಯಸ ತಿಂದೆ. ಅದನ್ನು ನೋಡಿ ನಿರ್ಮಾಪಕರು ಏ ದರಿದ್ರ ಅಂತ ಬಾಯಿಗೆ ಬಂದಂತೆ ಬೈಯ್ದರು. ಆ ಧಾರಾವಾಹಿಯ ಶೂಟಿಂಗ್ ಟೈಮ್‌ನಲ್ಲಿ ನಾವು ಏನಾದರೂ ಗೊತ್ತಿಲ್ಲದೆ ತಪ್ಪು ಮಾಡಿದ್ರೆ ಚೆನ್ನಾಗಿ ಬೈತಿದ್ರು. ಅದೇ ಹೀರೋಯಿನ್ ಶೂಟಿಂಗ್‌ನಡೆಯುವಾಗ ನಗುತ್ತಿದ್ರೂ, ಏನೇ ಮಾಡಿದ್ರೂ ಅವರ ಜೊತೆಗೆ ಬಹಳ ಪ್ರೀತಿಯಿಂದ ಮಾತಾಡ್ತಿದ್ರು. ಚಿನ್ನು, ಮುದ್ದು ಅಂತೆಲ್ಲ ಹೇಳ್ತಿದ್ರು. ಈ ತಾರತಮ್ಯ ಕಂಡರೂ ಕಷ್ಟಪಟ್ಟು ಸಹಿಸಿಕೊಳ್ಳಬೇಕಿತ್ತು' ಎಂದಿರುವ ಸೌಮ್ಯಾ ತನ್ನ ಕಷ್ಟದ ದಿನಗಳನ್ನೂ ನೆನಪು ಮಾಡಿಕೊಂಡಿದ್ದಾರೆ.
ಭಾಗ್ಯ ಜೊತೆ ಮಾತಾಡಬೇಕಾ? ಫೋಟೋ ಕ್ಲಿಕ್ಕಿಸಿಕೊಳ್ಳೋ ಆಸೆನಾ? ಹಾಗಿದ್ರೆ ಇನ್ನೇಕೆ ತಡ... ಡಿಟೇಲ್ಸ್ ಇಲ್ಲಿದೆ
'ನನ್ನ ತಾಯಿ ಬ್ರೇನ್ ಕ್ಯಾನ್ಸರ್ ಆಗಿ ತೀರಿಕೊಂಡರು. ಮ್ಯೂಸಿಕ್ ಟೀಚರ್ ಆಗಿದ್ದ ನನ್ನ ತಾಯಿ ತುಂಬ ಕಷ್ಟಪಟ್ಟು ನಮ್ಮನ್ನು ಬೆಳೆಸಿದ್ದಾರೆ. ಇಂಥಾ ಸ್ಥಿತಿಯಲ್ಲಿ ನಾನು ಅವಮಾನಗಳನ್ನೆಲ್ಲ ನುಂಗಿ ಅನಿವಾರ್ಯವಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡೆ. ನಾನು ಕನ್ನಡದಲ್ಲಿ ತುಂಬ ಕಷ್ಟಪಟ್ಟಿದ್ದೇನೆ. ನನಗೆ ಅಲ್ಲಿ ಅಷ್ಟಾಗಿ ಗೌರವ ಸಿಗಲಿಲ್ಲ, ಅವಕಾಶವೂ ಸಿಗಲಿಲ್ಲ. ತಮಿಳು ಧಾರಾವಾಹಿಯಲ್ಲಿ ನಟಿಸಿದೆ. ಆಮೇಲೆ ತೆಲುಗು ರಿಯಾಲಿಟಿ ಶೋ ‘ಜಬರ್ದಸ್ತ್’ನಲ್ಲಿ ನಿರೂಪಕಿಯಾದೆ. ತೆಲುಗಿನಲ್ಲಿ ತುಂಬ ಗೌರವ ಸಿಕ್ಕಿದೆ. ಇಲ್ಲಿ ಹೀರೋಯಿನ್ ಮಾತ್ರ ಅಲ್ಲ, ಎಲ್ಲ ಕಲಾವಿದರನ್ನೂ ಚೆನ್ನಾಗಿ ನೋಡಿಕೊಳ್ತಾರೆ. ಸಂಭಾವನೆಯೂ ಚೆನ್ನಾಗಿದೆ. ಅವಕಾಶ ಸಿಕ್ಕರೆ ನಾನು ಬಿಗ್ ಬಾಸ್ ಶೋಗು ಹೋಗುವೆ. ಕನ್ನಡ ಬಿಗ್ ಬಾಸ್ ಶೋಗೂ ಆಫರ್ ಬಂದಿತ್ತು. ಆದರೆ ನಾನು ನಿರಾಕರಿಸಿದೆ' ಎಂದೂ ಸೌಮ್ಯಾ ಹೇಳಿದ್ದಾರೆ.
ವಸಿಷ್ಠ ಸಿಂಹ ಕಣ್ಣೀರು ಹಾಕಿದ್ರು, ಗೋಲ್ಡನ್ ಸ್ಟಾರ್ ಗಣೇಶ್ ಸೇರಿ ಎಲ್ಲರ ಕಣ್ಣಲ್ಲಿ ಯಾಕಷ್ಟು ಕಂಬನಿ!
ಸದ್ಯ ಈ ನಟಿಯ ಪಾಯಸ ಪ್ರಸಂಗದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮೇಲೆ ಚರ್ಚೆಯಾಗುತ್ತಿವೆ.