
ರಿಯಾಲಿಟಿ ಶೋಗಳು ಕೇವಲ ಮನರಂಜನೆಯ ವೇದಿಕೆಯಲ್ಲ, ಅವು ಅನೇಕ ಸಾಧಕರ ಜೀವನದ ನೋವು-ನಲಿವುಗಳನ್ನು ಜಗತ್ತಿಗೆ ಪರಿಚಯಿಸುವ ಮಾಧ್ಯಮ ಕೂಡ ಹೌದು. ಅಂತಹ ಒಬ್ಬ ಪ್ರಭಾವಶಾಲಿ ವ್ಯಕ್ತಿತ್ವ ನಾದಿರಾ ಮೆಹ್ರಿನ್ (Nadira Mehrin). ಬಿಗ್ ಬಾಸ್ ಮಲಯಾಳಂ ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ ನಾದಿರಾ, ಸದ್ಯ ಮಾಡೆಲಿಂಗ್ ಮತ್ತು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಇಂದಿನ ಯಶಸ್ಸಿನ ಹಿಂದೆ ಹಸಿವು, ಬಡತನ ಮತ್ತು ತೃತೀಯ ಲಿಂಗಿಯಾಗಿ ಅವರು ಎದುರಿಸಿದ ಅಗ್ನಿಪರೀಕ್ಷೆಯ ಕಥೆಯಿದೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದ ನಾದಿರಾ, ಬಡತನದ ಭೀಕರತೆಯನ್ನು ವಿವರಿಸಿದ್ದಾರೆ. 'ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. ತಂದೆ ತಿರುವನಂತಪುರದವರು. ನಾವು ಅತ್ಯಂತ ಬಡತನದಲ್ಲಿ ಬೆಳೆದವರು. ಅಪ್ಪ ದಿನಗೂಲಿ ಕೆಲಸ ಮಾಡುತ್ತಿದ್ದರು. ಮಳೆ ಬಂದರೆ ಅಪ್ಪನಿಗೆ ಕೆಲಸ ಸಿಗುತ್ತಿರಲಿಲ್ಲ. ನಾವು ವಾಸವಿದ್ದ ಮನೆಯ ಮೇಲ್ಛಾವಣಿ ಶೀಟ್‌ನಿಂದ ಕೂಡಿತ್ತು. ಮಳೆ ಬಂದಾಗಲೆಲ್ಲಾ ಮನೆ ಪೂರ್ತಿ ಸೋರುತ್ತಿತ್ತು. ಆ ದಿನಗಳ ಕಷ್ಟ ನೆನಪಾದಾಗಲೆಲ್ಲಾ ನನಗೆ ಈಗಲೂ ಮಳೆ ಎಂದರೆ ಒಂದು ರೀತಿಯ ನೆಗೆಟಿವ್ ಫೀಲಿಂಗ್ ಬರುತ್ತದೆ' ಎಂದು ಭಾವುಕರಾಗಿದ್ದಾರೆ.
ಸಣ್ಣ ವಯಸ್ಸಿನ ಆಸೆಗಳ ಬಗ್ಗೆ ಮಾತನಾಡುತ್ತಾ, 'ನಮ್ಮ ಸಂಬಂಧಿಕರೆಲ್ಲಾ ಆರ್ಥಿಕವಾಗಿ ಚೆನ್ನಾಗಿದ್ದರು. ನನ್ನ ಕಸಿನ್ಸ್ ಕ್ರೀಮ್ ಬಿಸ್ಕತ್ ತಿಂದಾಗ, ನಾನೂ ದೊಡ್ಡವಳಾದ ಮೇಲೆ ತುಂಬಾ ಕ್ರೀಮ್ ಬಿಸ್ಕತ್ ತಿನ್ನಬೇಕು ಅಂದುಕೊಳ್ಳುತ್ತಿದ್ದೆ. ಬೂಸ್ಟ್ ಕುಡಿಯಬೇಕು, ಅದರ ಪುಡಿಯನ್ನು ತಿನ್ನಬೇಕು ಎಂಬುದು ನನ್ನ ಬಾಲ್ಯದ ದೊಡ್ಡ ಕನಸಾಗಿತ್ತು. ಹತ್ತು ರೂಪಾಯಿಗೂ ಬೆಲೆ ಇದೆ ಎಂಬುದು ಅಷ್ಟೊಂದು ಬಡತನ ನೋಡಿದ ನನಗೆ ಚೆನ್ನಾಗಿ ಗೊತ್ತು' ಎಂದು ಹೇಳಿದ್ದಾರೆ.
ನಾದಿರಾ ಅವರ ಬದುಕಿನಲ್ಲಿ ದೊಡ್ಡ ತಿರುವು ಬಂದಿದ್ದು ಅವರ ಲಿಂಗ ಗುರುತಿನ ವಿಚಾರದಲ್ಲಿ. 'ಮನೆಯವರಿಗೆ ನನ್ನನ್ನು ದೊಡ್ಡ 'ಉಸ್ತಾದ್' (ಧರ್ಮಗುರು) ಮಾಡಬೇಕು ಅಥವಾ ಒಳ್ಳೆಯ ಕೆಲಸಕ್ಕೆ ಸೇರಿಸಬೇಕು ಎಂಬ ಆಸೆಯಿತ್ತು. ಆದರೆ, ನನಗೆ ಹೆಣ್ಣಾಗಬೇಕು ಎಂಬ ಆಸೆ ಇದೆ ಎಂದು ಗೊತ್ತಾದಾಗ ನನ್ನ ತಂದೆ ಮೊದಲ ಬಾರಿಗೆ ಕಣ್ಣೀರು ಹಾಕಿದರು. ಆ ಮನುಷ್ಯ ನನ್ನ ಜೀವನಕ್ಕಾಗಿ ಇಡೀ ಜೀವವನ್ನೇ ಸವೆಸಿದ್ದರು. ಅವರನ್ನು ಅಳಿಸಿಬಿಟ್ಟೆನಲ್ಲ ಎಂಬ ನೋವು ನನಗೆ ಇಂದಿಗೂ ಕಾಡುತ್ತಿದೆ' ಎಂದಿದ್ದಾರೆ ನಾದಿರಾ.
ತನ್ನ ಕುಟುಂಬದ ಮೇಲಿರುವ ಪ್ರೀತಿಯಿಂದಾಗಿ ನಾದಿರಾ ಇಂದಿಗೂ ಒಂದು ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದಾರೆ. 'ನನ್ನ ಕುಟುಂಬಕ್ಕೆ ನಾನು ಇವತ್ತಿಗೂ ಅವರ ಮಗನೇ. ಮನೆಯಲ್ಲಿ ನನ್ನನ್ನು ನಜೀಬ್ (ಹುಟ್ಟಿದ ಹೆಸರು) ಎಂದೇ ಕರೆಯುತ್ತಾರೆ. ತಂಗಿ 'ನಜಿ' ಎನ್ನುತ್ತಾಳೆ. ನನಗೆ ಅದರಲ್ಲಿ ಬೇಸರವಿಲ್ಲ. ಗೇಲಿ ಮಾಡುವವರು ಕೂಡ ನನ್ನನ್ನು ಆ ಹೆಸರಿನಿಂದ ಕರೆದರೆ ನಾನು ಹೀಯಾಳಿಸುವುದಿಲ್ಲ. ಏಕೆಂದರೆ ನನ್ನ ಕುಟುಂಬದ ಪ್ರೀತಿಯೇ ನನಗೆ ಮುಖ್ಯ' ಎಂದು ಹೇಳುವ ಮೂಲಕ ನಾದಿರಾ ತನ್ನ ಹೃದಯವಂತಿಕೆಯನ್ನು ಮೆರೆದಿದ್ದಾರೆ.
ನಾದಿರಾ ಮೆಹ್ರಿನ್ ಅವರ ಈ ಜೀವನ ಪಯಣ ಬಡತನ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಎದುರಿಸಿ ನಿಲ್ಲುವವರಿಗೆ ದೊಡ್ಡ ಸ್ಫೂರ್ತಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.