
ನಟ ದಿಲೀಪ್ ರಾಜ್ ನಿಧನಕ್ಕೆ ಸಂತಾಪ ಸೂಚಿಸಿದ್ದ ಸಂಭಾಷಣೆಕಾರ ಟಿಜಿ ನಂದೀಶ್ ಅವರೇ ಈಗ ಹೇಳದೆ ಕೇಳದೆ ಹೋಗಿದ್ದಾರೆ. ಹೌದು, ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿದ ದಿಲೀಪ್ ರಾಜ್ ಅವರು, ಹೀಗೆ ಏಕಾಏಕಿ ಮರೆಯಾದದ್ದು ಎಂದೆಂದಿಗೂ ಕಾಡಲಿದೆ ಎಂದು ಹೇಳಿದ್ದ ಟಿಜಿ ನಂದೀಶ್ ಈಗ ಅವರೇ ಮರೆಯಾಗಿದ್ದಾರೆ.
ಅಪ್ಪ ಅಮ್ಮನೇ ನನ್ನ ಶಕ್ತಿ, ಹರ್ಷಿತಾ ನನಗೆ ಸ್ಪೂರ್ತಿ, ಜೇನು ಮತ್ತು ಗಂಧ ಎನ್ನ, ಜೀವ ಮತ್ತು ಜೀವನಪ್ರೀತಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರಹ (ಬಯೋ ) ಬರೆದುಕೊಂಡಿದ್ದ ಪತ್ರಕರ್ತ, ಸಂಭಾಷಣೆಕಾರ ಟಿಜಿ ನಂದೀಶ್ ಅವರು 37ನೇ ವಯಸ್ಸಿಗೆ ಇಂದು ( ಮೇ 20 ) ತೀರ್ಥಹಳ್ಳಿಯಲ್ಲಿ ನಿಧನರಾಗಿದ್ದಾರೆ.
ಸಾಯುವ 10 ಗಂಟೆಗೂ ಮುನ್ನ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿ, 4 ಗಂಟೆಗಳ ಹಿಂದೆ ಆಕ್ಟಿವ್ ಆಗಿದ್ದ ಟಿಜಿ ನಂದೀಶ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿನಿಮಾ, ಧಾರಾವಾಹಿ ಬರವಣಿಗೆಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ಟಿಜಿ ನಂದೀಶ್ ಅವರು ನಿಧನರಾಗಿರೋದು ಎಲ್ಲರಿಗೂ ಶಾಕ್ ಕೊಟ್ಟಿದೆ.
ದಿಲೀಪ್ ರಾಜ್ ಅವರಿಗೆ ಹೃದಯಾಘಾತ ಆಗಿರೋದು, ತೀರಿಕೊಂಡಿರೋದು ಇನ್ನೂ ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ಒಬ್ಬರಾದ ಮೇಲೆ ಒಬ್ಬರು ನಿಧನರಾಗುತ್ತಿದ್ದಾರೆ. ಒಟ್ಟಿನಲ್ಲಿ ಇಂದು ಕನ್ನಡ ಚಿತ್ರರಂಗ, ಸಾಮಾನ್ಯ ಜನರು ಶಾಕ್ ಆಗಿದ್ದಾರೆ.
ಟಿಜಿ ನಂದೀಶ್ ಅವರು ತೀರ್ಥಹಳ್ಳಿಯ ಮಾಲೂರಿನವರು. ಹರ್ಷಿತಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮಗಳು ಜೇನು, ಮಗ ಗಂಧ. ಮಗ ಹುಟ್ಟಿ ಮೂರು ತಿಂಗಳಾಗಿತ್ತು. ಬೆಂಗಳೂರು ಬೇಡ ಎಂದು ತೀರ್ಥಹಳ್ಳಿಯಲ್ಲಿ ಚೆಂದದ ಸುಂದರ ಮನೆ ಕಟ್ಟಿಸಿಕೊಂಡು ತಾಯಿ, ಪತ್ನಿ, ಮಕ್ಕಳ ಜೊತೆ ಜೀವನ ಮಾಡುತ್ತಿದ್ದರು. ಈಗ ಚಿರನಿದ್ದೆಗೆ ಜಾರಿದ್ದಾರೆ.
ದಿಲೀಪ್ ರಾಜ್ ಸಾವಿನ ಬಗ್ಗೆ ಟಿಜಿ ನಂದೀಶ್ ಬರಹ ಹೀಗಿತ್ತು…
ಇಂದಿನ ಬೆಳಗು ಇಂಥದ್ದೊಂದು ಕಹಿಸುದ್ದಿಯೊಂದಿಗೆ ಶುರುವಾಗುತ್ತೆ ಎಂಬ ಯಾವುದೇ ಸುಳಿವಿರಲಿಲ್ಲ.
ಪ್ರತಿಭೆ, ಪ್ರಯತ್ನ, ಪರಿಶ್ರಮದ ಮೂಲಕ ಯಶಸ್ಸು ಕಂಡ ದಿಲೀಪ್ ರಾಜ್ ಅವರು ಇನ್ನಿಲ್ಲ ಅನ್ನೋ ಸುದ್ದಿ ಈ ಕ್ಷಣಕ್ಕೂ ಅರಗಿಸಿಕೊಳ್ಳಲಾಗದ ಸತ್ಯ. ಸದಾ ಕಲೆಗೆ ಮಿಡಿಯುತ್ತಿದ್ದ ಆ ಕಲಾವಿದನಿಗೆ ಹೃದಯಾಘಾತವಾಯಿತು ಅನ್ನೋ ಸುದ್ದಿ ಸುಳ್ಳಾಗಬಾರದ ಅನ್ನಿಸುತ್ತಿದೆ.
ನಾನು ಮೊದಲು ದಿಲೀಪ್ ರಾಜ್ ಅವರನ್ನು ಇಷ್ಟಪಟ್ಟಿದ್ದು 'ಪ್ರೀತಿಗಾಗಿ' ಧಾರಾವಾಹಿಯಲ್ಲಿ... ಹಂಸಲೇಖ ನಿರ್ಮಾಣದ ಆ ಧಾರವಾಹಿಯಲ್ಲಿ ಇವರ ನಟನೆಗೆ ಮನಸೋಲದವರಿಲ್ಲ. ಆ ಬಳಿಕ 'ಮಳೆಬಿಲ್ಲು' ಸೇರಿದಂತೆ ಬಹಳಷ್ಟು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಇವರ ನಟನೆಯನ್ನು ಅಭಿಮಾನಿಯಾಗಿ ಮೆಚ್ಚಿದ್ದೆ. ಆದರೆ ಇವರೊಂದಿಗೆ ಅದ್ಯಾವ ನಂಟು ಬೆಸೆದಿತ್ತೋ ಗೊತ್ತಿಲ್ಲ.
ಧೃತಿ ಕ್ರಿಯೇಷನ್ಸ್ ಮೂಲಕ ನನಗೆ ಮೊದಲ ಬಾರಿಗೆ ಕಿರುತೆರೆಯ ಧಾರಾವಾಹಿಗೆ ಸಂಭಾಷಣೆಕಾರನಾಗುವ ಅವಕಾಶ ಕೊಟ್ಟ ನಿರ್ದೇಶಕರು, ನಿರ್ಮಾಪಕರು ದಿಲೀಪ್ ರಾಜ್. 'ಪಾರು' ಧಾರಾವಾಹಿಗೆ ಸಂಭಾಷಣೆ ಬರೆಸುವ ಮೂಲಕ ನನಗೊಂದು ಚೆಂದದ ಅವಕಾಶ ಕೊಟ್ಟರು. ಆ ಬಳಿಕ 'ರಾಧಾ ಕಲ್ಯಾಣ' ಧಾರಾವಾಹಿಗೂ ಕೆಲವು ಕಾಲ ಚಿತ್ರಕಥೆ ಬರೆಯುವ ಅವಕಾಶ ಕೊಟ್ಟವರು.
'ಪಾರು' ಧಾರಾವಾಹಿಗೆ ಸಂಭಾಷಣೆ ಮತ್ತು ಚಿತ್ರಕಥೆ ಬರೆಯುವ ಸಂದರ್ಭದಲ್ಲಿ ಅವರೊಂದಿಗೆ ಸ್ಕ್ರೀನ್ ಪ್ಲೇ ಡಿಸ್ಕಷನ್ನಿಗೆ ಕೂತ ನೆನಪುಗಳು ಇನ್ನು ಹಸಿರಾಗಿದೆ. ಕ್ರಿಯೇಟಿವಿಟಿ ಮತ್ತು ಎಕ್ಸಪರಿಮೆಂಟಲ್ ಮನೋಭಾವ ದಿಲೀಪ್ ರಾಜ್ ಅವರ ಪ್ಲಸ್ ಪಾಯಿಂಟ್. ಸದಾ ದಿ ಬೆಸ್ಟ್ ಕೊಡಬೇಕೆನ್ನುವ ಛಲಗಾರ. ಅದಕ್ಕಾಗಿ ಅವಿರತ ಶ್ರಮ ಹಾಕಿದ್ದರು. ಅವರ ಪರಿಶ್ರಮಕ್ಕೆ ತಕ್ಕ ಗೆಲುವು, ಖ್ಯಾತಿ ಎರಡು ಸಿಕ್ಕಿತ್ತು.
ಜೀ ವಾಹಿನಿಯ 'ಪಾರು' ಧಾರವಾಹಿ ಅವರೊಡನೆ ಕೆಲಸ ಮಾಡುವ ಅವಕಾಶ ಸೃಷ್ಟಿಸಿತ್ತು. ನೆನ್ನೆ ಸಂಜೆ ಅದೇ ಜೀ 5 ವಾಹಿನಿಯಲ್ಲಿ 'ಲವ್ ಮಾಕ್ ಟೇಲ್ - 3' ಸಿನಿಮಾದಲ್ಲಿ ಅವರ ನಟನೆ ನೋಡಿ ಮನೆಮಂದಿಯೆಲ್ಲಾ ಖುಷಿ ಪಟ್ಟಿದ್ದೆವು. ಇದೀಗ ಅದೇ ವಾಹಿನಿ ಹಾಕಿದ ಶ್ರದ್ಧಾಂಜಲಿ ಚಿತ್ರ ನೋಡಿ ಕಣ್ತುಂಬಿದೆ. ಮನಸು ಭಾರವಾಗಿದೆ. ಅವರ ಬದುಕಿನ ಹಾದಿ ಅರ್ಧದಲ್ಲೇ ಕೊನೆಯಾದಂತಿದೆ.
ದಿಲೀಪ್ ಸರ್ ಅವರ ನೆರಳಂತೆ ಇದ್ದವರು ಅವರ ಮಡದಿ ವಿದ್ಯಾ ಮೇಡಂ. ಜೋಡೆತ್ತಿನಂತೆ ಬದುಕಿನ ಪಥವನ್ನು ಒಟ್ಟೊಟ್ಟಿಗೆ ಕಟ್ಟಿಕೊಂಡವರು. ಅವರಿಬ್ಬರೊಡನೆ ಕುಳಿತು ಹರಟಿದ್ದೇವೆ, ಜೊತೆಗೆ ಊಟ ಮಾಡಿದ್ದೇವೆ. ಈಗ ದಿಲೀಪ್ ರಾಜ್ ಅವರಿಲ್ಲ ಅನ್ನೋ ಸಂಕಟ. ಭಗವಂತ ವಿದ್ಯಾ ಮೇಡಂ ಅವರಿಗೆ, ಅವರ ಮಕ್ಕಳಿಗೆ ಈ ಸಂಕಟ ದಾಟುವ ಧೈರ್ಯ ನೀಡಲಿ ಎಂಬುದಷ್ಟೇ ಪ್ರಾರ್ಥನೆ.
ದಿಲೀಪ್ ಸರ್ ನಿಮ್ಮ ಎನರ್ಜಿ, ಜೀವನೋತ್ಸಾಹ ಅದಮ್ಯ. ನಟನೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿದವರು, ಹೀಗೆ ಏಕಾಏಕಿ ಮರೆಯಾದದ್ದು ಎಂದೆಂದಿಗೂ ಕಾಡಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.