ಮನೆದೇವ್ರು ಕಥೆಯ ಅನು ಅಂದ್ರೆ ನಾನೇ ಅಂತಿದ್ದಾರೆ ನಟಿ ವರ್ಷಿತಾ!

By Kannadaprabha NewsFirst Published Apr 3, 2020, 3:50 PM IST
Highlights

ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್‌ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿ​ಚಯವನ್ನು ಅವರ ಮಾತುಗಳಲ್ಲೇ ಕೇಳಿ.

ನೀವು ‘ಮನೆದೇವ್ರು’ ಧಾರಾವಾಹಿ ನೋಡಿದ್ದರೆ ಅದರಲ್ಲಿ ಅನು ಎನ್ನುವ ಪಾತ್ರ ನೆನಪಿದ್ದರೆ ನಾನು ನಿಮಗೆ ಗೊತ್ತಿರುತ್ತೇನೆ. ಯಾಕೆಂದರೆ ಕಿರುತೆರೆಯಲ್ಲಿ ಅನು ಎಂದೇ ಹೆಸರು ಮಾಡುವಂತೆ ಯಶಸ್ಸು ಕೊಟ್ಟಆ ‘ಮನೆದೇವ್ರು’ ಧಾರಾವಾಹಿಯ ಅನು ಪಾತ್ರಧಾರಿಯೇ ನಾನು. ನನ್ನ ಪೂರ್ತಿ ಹೆಸರು ವಿ ಕೆ ವರ್ಷಿತಾ ಸೇನೆ. 2016ರಲ್ಲಿ ಕಿರುತೆರೆಗೆ ಬಂದೆ. ಮೊದಲ ಧಾರಾವಾಹಿಯೇ ‘ಮನೆದೇವ್ರು’. ಇಲ್ಲಿ ನನ್ನದು ನಾಯಕಿಗೆ ತಂಗಿ ಪಾತ್ರ. ಒಂದು ವರೆ ವರ್ಷ ಇಲ್ಲಿ ಅನು ಪಾತ್ರದಲ್ಲಿ ಮಿಂಚಿದೆ. ಪ್ರತಿ ಮನೆ ಮನೆಗೂ ನಾನು ಇದೇ ಅನು ಹೆಸರಿನ ಮೂಲಕ ತಲುಪಿದೆ. ಆ ನಂತರ ಮದುವೆ ಮಾಡಿಕೊಂಡೆ. ಹೀಗಾಗಿ ಕೆಲ ಕಾಲ ನಟನೆಯಿಂದ ದೂರ ಇದ್ದೆ. ಆ ಮೇಲೆ ಮರಳಿ ಬರುವ ಹೊತ್ತಿಗೆ ನನಗೆ ‘ಪಾರು’ ಧಾರಾವಾಹಿ ಸಿಕ್ಕಿತು. ಇಲ್ಲಿ ನನ್ನದು ಕೊಂಚ ಹಾಸ್ಯದಿಂದ ಕೂಡಿರುವ ತಿಂಡಿಪೋತಿ ಉಮಾ ಪಾತ್ರ. ಇದು ಮತ್ತೊಂದು ರೀತಿಯಲ್ಲಿ ನನಗೆ ಹೆಸರು ತಂದುಕೊಟ್ಟಿತು. ಆ ನಂತರ ನಾನು ಕಿರುತೆರೆಯಿಂದ ಬ್ರೇಕ್‌ ತೆಗೆದುಕೊಂಡ ಮೇಲೆ ಕಿರು ಚಿತ್ರಗಳಲ್ಲಿ ನಟಿಸಿದೆ. ‘ಚೆಕ್‌’ ಎನ್ನುವ ಕಿರು ಚಿತ್ರಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಸೈಮಾ ಪ್ರಶಸ್ತಿ ಪಡೆದುಕೊಂಡೆ. ಇದರ ಜತೆಗೆ ಮತ್ತೊಂದು ಕಿರು ಚಿತ್ರದಲ್ಲಿ ನಟಿಸಿದೆ. ಈ ನಡುವೆ ಮತ್ತೆ ನನ್ನ ಕಿರುತೆರೆ ಬರಸೆಳೆಯಿತು. ಉದಯ ವಾಹಿನಿಯ ‘ಕಸ್ತೂರಿನಿವಾಸ’ ಧಾರಾವಾಹಿ ಮೂಲಕ ಕ್ಯಾಮೆರಾ ಮುಂದೆ ನಿಂತೆ.

ಅಮ್ನೋರು ಧಾರಾವಾಹಿ ಈಗ ನನ್ನ ಐಡೆಂಟಿಟಿ: ಸುಕೀರ್ತಿ

ಕಸ್ತೂರಿನಿವಾಸ ಧಾರಾವಾಹಿಯಲ್ಲಿ ನಾಗವೇಣಿ ಎಂಬುದು ನನ್ನ ಪಾತ್ರದ ಹೆಸರು. ಹಾಗೆ ನೋಡಿದರೆ ಈ ಪಾತ್ರವನ್ನು ಬೇರೊಬ್ಬರು ಮಾಡುತ್ತಿದ್ದರು. ಅವರ ಡೇಟ್ಸ್‌ ಸಮಸ್ಯೆ ಆಗಿ ನಾಗವೇಣಿ ಪಾತ್ರಕ್ಕೆ ನಾನು ಬಂದೆ. ನೋಡುಗರರಿಗೆ ಇಷ್ಟವಾಗುವ ಅಥವಾ ಅದೇ ಪ್ರೇಕ್ಷಕರು ದ್ವೇಷಿಸುವ ನೆಗೆಟೀವ್‌ ಪಾತ್ರ ಮಾಡಿದರೆ ಕಿರುತೆರೆಯಲ್ಲಿ ಸ್ಟಾರ್‌ ಆಗುತ್ತೇವೆ. ಜತೆಗೆ ತೆರೆ ಮೇಲೆ ನಾವು ನಮ್ಮ ಪಾತ್ರವನ್ನು ಹೇಗೆ ನಿಭಾಯಿಸುತ್ತೇವೆ, ಯಾವ ರೀತಿ ಜೀವ ತುಂಬುತ್ತೇವೆ ಎಂಬುದರ ಮೇಲೂ ನಮ್ಮ ಸ್ಟಾರ್‌ ಡಮ… ನಿಂತಿದೆ. ನನಗೆ ನಾಗವೇಣಿ ಪಾತ್ರ ಈಗೀಗ ಹೆಸರು ಕೊಡುತ್ತಿದೆ. ಮುಗ್ಧ ಹೆಣ್ಣು ಮಗಳ ಪಾತ್ರ ಅದು. ಅತ್ತೆ ಅಂದ್ರೆ ಭಯ, ಗಂಡ ಅಂದ್ರೆ ಪ್ರಾಣ. ಅತ್ತೆ ಇಲ್ಲದಿದ್ದಾಗ ನಾನೇ ರಾಣಿ ಮತ್ತು ರಾಜ. ಅತ್ತೆ ಇದ್ದರೆ ಫುಲ… ಸೈಲೆಂಟ್‌. ಹೀಗೆ ನಾನಾ ಶೇಡ್‌ಗಳು ‘ಕಸ್ತೂರಿನಿವಾಸ’ ಧಾರಾವಾಹಿಯಲ್ಲಿ ನನ್ನ ಪಾತ್ರಕ್ಕಿದೆ.

ಇನ್ನೂ ನನಗೆ ನೆಗೆಟೀವ್‌ ಪಾತ್ರ ಅಂದರೆ ತುಂಬಾ ಇಷ್ಟ. ಅಂಥ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಮುಂದೆ ಸಿನಿಮಾಗಳಲ್ಲೂ ನಟಿಸುವ ಗುರಿ ಇಟ್ಟುಕೊಂಡಿರುವ ನಾನು, ದಿನೇಶ್‌ ಬಾಬು ನಿರ್ದೇಶನದ ‘ಹಗಲುಗನಸು’ ಸಿನಿಮಾದಲ್ಲಿ ಈಗಾಗಲೇ ನಟಿಸಿದ್ದೇನೆ. ನನ್ನ ಹಿನ್ನೆಲೆ ಹೇಳುವುದಾದರೆ ನಾನು ರಂಗಭೂಮಿಯಿಂದ ಬಂದವಳು. ನನ್ನ ಅಜ್ಜಿಯ ಅಪ್ಪ ಬೀದಿ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರಂತೆ. ನನ್ನ ತಂದೆ ಹಳೆಯ ‘ಸಿಲ್ಲಿ ನಲ್ಲಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪುಟ್ಟಪಾತ್ರಗಳನ್ನು ಮಾಡಿದ್ದಾರೆ. ನನಗೆ ಅವರಿಂದ ಬಂದ ಬಳುವಳಿಯೇ ನಟನೆ. ಹೀಗಾಗಿ ಕಿರುತೆರೆಯಿಂದ ದೂರವಾಗಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರೂ ನನಗೆ ಉದ್ಯೋಗ ಒಗ್ಗದೆ ಮತ್ತೆ ಕಿರುತೆರೆಗೆ ಬಂದೆ.

ಶಾರೂಕ್ ಖಾನ್ ಮಕ್ಕಳಿಗೆ ಟೀಚರ್‌ ಆಗಿದ್ರಂತೆ ಕನ್ನಡ ಕಿರುತೆರೆಯ ಈ ನಟಿ!

ನಟನೆ ಬಿಟ್ಟು ನನಗೆ ಬೇರೆ ಏನೂ ಬರಲ್ಲ, ಮತ್ತು ಗೊತ್ತೂ ಇಲ್ಲ. ಸಿನಿಮಾ, ನಾಟಕ, ಧಾರಾವಾಹಿ ಈ ಮೂರರಲ್ಲೂ ಗುರುತಿಸಿಕೊಳ್ಳಬೇಕು. ಪರಿಪೂರ್ಣ ಕಲಾವಿದೆ ಅನಿಸಿಕೊಳ್ಳುವ ಆಸೆ ನನ್ನದು. ಅಂದಹಾಗೆ ನಟನೆ ಜತೆಗೆ ನಾನು ಈವೆಂಚ್‌ ಮ್ಯಾನೇಜ್‌ಮೆಂಟ್‌ ಕೂಡ ಮಾಡುತ್ತಿದ್ದೇನೆ. ಹೆವೆನ್ಲಿ ಮೂಮೆಂಟ್‌ ಎಂಬುದು ನನ್ನ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಹೆಸರು. ಎಲ್ಲ ರೀತಿಯ ಕಾರ್ಯಕ್ರಮಗಳನ್ನೂ ಇದರ ಮೂಲಕ ಮಾಡುತ್ತೇನೆ.

click me!