
ಬೆಂಗಳೂರು (ಅ.20): ನನ್ನ ಕುಟುಂಬವನ್ನು ಅಂದು ರಾಜಕಾರರ ದಾಳಿಯಿಂದ ರಕ್ಷಿಸಿದ್ದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರು. ನನ್ನ ಪುತ್ರ ಪ್ರಿಯಾಂಕಾ ಖರ್ಗೆ ತಪ್ಪಿ ಆಡಿದ ಮಾತಿನಿಂದ ನೋವಾಗಿದ್ದರೆ ನಿಮ್ಮಕ್ಷಮೆ ನಮ್ಮ ಮೇಲಿರಲಿ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೋರಿದಂತೆ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಇದು ನಕಲಿ ಪೋಸ್ಟರ್ ಆಗಿದ್ದು, ಇದರ ಬಗ್ಗೆ ಸ್ವತಃ ಪ್ರಿಯಾಂಕ್ ಖರ್ಗೆ ಕಾನೂನಿನ ಮೂಲಕ ಉತ್ತರ ಕೊಡುವುದಾಗಿ ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳ ಮೈದಾನ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯ ಚಟುವಟಿಕೆಗಳನ್ನು ನಿಷೇಧಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿಯೋ ಕಾರಣವಾಗಿದ್ದಾರೆ. ಅಂದರೆ, ರಾಜ್ಯದಾದ್ಯಂತ ಸರ್ಕಾರಿ ಶಾಲೆ, ಕಾಲೇಜು ಹಾಗೂ ಸರ್ಕಾರಿ ಸ್ಥಳಗಳ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕರ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರಿ ಶಾಲಾ ಆವರಣದಲ್ಲಿ ಯಾವುದೇ ಖಾಸಗಿ ಸಂಘ, ಸಂಸ್ಥೆಗಳ ಚಟುವಟಿಕೆ ಮಾಡಬಾರದು ಎಂದು ಆರ್‌ಎಸ್‌ಎಸ್ ಹೆಸರೇಳದೇ ನಿಷೇಧ ಮಾಡಿತ್ತು. ಇದರ ಬೆನ್ನಲ್ಲಿಯೇ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಪುತ್ರ ಆರ್‌ಎಸ್‌ಎಸ್ ಬಗ್ಗೆ ತಪ್ಪಿ ಆಡಿದ ಮಾತಿನಿಂದ ನೋವಾಗಿದ್ದರೆ ನಿಮ್ಮ ಕ್ಷಮೆ ನಮ್ಮ ಮೇಲಿರಲಿ ಎನ್ನುವಂತಹ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಮಸ್ತ ಕನ್ನಡಿಗರೇ, ನಾನು ಮತ್ತು ನನ್ನ ಕುಟುಂಬ ಎಂದೂ RSS ಗೆ ವಿರೋಧವಾಗಿರಲಿಲ್ಲ, ಆಗೋದೂ ಇಲ್ಲಾ. ನನ್ನ ಕುಟುಂಬವನ್ನು ಅಂದು ರಾಜಕಾರರ ದಾಳಿಯಿಂದ ರಕ್ಷಿಸಿದ್ದೇ RSS ಕಾರ್ಯಕರ್ತರು. ನನ್ನ ಪುತ್ರ ಪ್ರಿಯಾಂಕಾ ಖರ್ಗೆ ತಪ್ಪಿ ಆಡಿದ ಮಾತಿನಿಂದ ನೋವಾಗಿದ್ದರೆ ನಿಮ್ಮಕ್ಷಮೆ ನಮ್ಮ ಮೇಲಿರಲಿ. ನನ್ನ ರಾಜಕೀಯ ನಿಲುವು ಏನೇ ಇರಲಿ, ರಾಜಕೀಯೇತರ ಸಂಸ್ಥೆ RSS ಶತಮಾನದ ಉತ್ಸವಕ್ಕೆ ನಮ್ಮ ಕುಟುಂಬದ ಹಾರೈಕೆ, ಋಣ ಎಂದೂ ಇದೆ. ಇಂತಿ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಪೋಸ್ಟರ್‌ನಲ್ಲಿ ಮುದ್ರಿಸಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದ ಪೋಸ್ಟರ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ (ಹಳೆಯ ಟ್ವಿಟರ್) ನಕಲಿ ಎಂಬುದನ್ನು ಹೇಳಿದ್ದಾರೆ. ಅವರ ಪೋಸ್ಟ್‌ನಲ್ಲಿ 'ಸತ್ಯಮಾರ್ಗದಲ್ಲಿ ಗೆಲ್ಲಲು ಸಾಧ್ಯವಾಗದಿದ್ದಾಗ ಸುಳ್ಳಿನ ಮಾರ್ಗದಲ್ಲಾದರೂ ಗೆಲ್ಲಬೇಕು ಎನ್ನುವುದು ಸಂಘನೀತಿ! ಸುಳ್ಳಿನ ಗೋಪುರ ಕಟ್ಟಿ ತಮ್ಮ ಕರಾಳ ಇತಿಹಾಸಕ್ಕೆ ಸಚ್ಚಾರಿತ್ರ್ಯದ ಬಣ್ಣ ಲೇಪಿಸಲು ಪ್ರಯತ್ನಿಸುವ ಸಂಘಪರಿವಾರವು ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಇತಿಹಾಸವನ್ನೂ ಕೆಡಿಸಲು ಮುಂದಾಗುವ ಮೂಲಕ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸಂಘ ಪಾರಿವಾರ ಮೊದಲಿನಿಂದಲೂ ಇಂತಹ ಕುತಂತ್ರ, ಕುಕೃತ್ಯ, ಕುಯುಕ್ತಿಗಳನ್ನು ಮಾಡಿದ ಕುಖ್ಯಾತಿಯನ್ನು ಹೊಂದಿದೆ. ಈ ಕೃತ್ಯಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡಲಾಗುವುದು' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.