ಮೊದಲಿನಿಂದಲೂ 'ಲಕ್ಷ್ಮೀನಿವಾಸ' ಸೀರಿಯಲ್‌ನಲ್ಲಿ ಮುಚ್ಚಿಟ್ಟ ವಿಷ್ಯ ಎಲ್ಲ ಗೊತ್ತಾಗೇ ಹೋಯ್ತು ಎನ್ನುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗುವುದನ್ನ ನೀವು ನೋಡುತ್ತಲೇ ಬಂದಿದ್ದೀರಿ. ಈಗಲೂ ಅಂತಹುದೇ ಭರ್ಜರಿ ಟ್ವಿಸ್ಟ್ ಎದುರಾಗಿದೆ. ಅದೇನಪ್ಪಾ ಅಂದ್ರೆ ವೆಂಕಿ ತಾಯಿ ಯಾರು?, ತಾಯಿಯಿಂದ ವೆಂಕಿ ದೂರವಾಗಿದ್ದು ಹೇಗೆ?, ಅವನಿಗೆ ಮೊದಲು ಮಾತು ಬರುತ್ತಿತ್ತಾ ಅಥವಾ ಅವನೂ ಮೊದಲಿನಿಂದಲೂ ಇರುವುದು ಹಾಗೇನಾ..? ಇದೆಲ್ಲದಕ್ಕೆ ಈಗ ಉತ್ತರ ಸಿಕ್ಕಿದೆ.
ಜಾನ್ವಿಗೆ ವೆಂಕಿ ತನ್ನ ಅಮ್ಮ ಯಾರು? ಎಂಬ ಫೋಟೋ ತೋರಿಸಿದ ತಕ್ಷಣ ಆಕೆ ತಕ್ಷಣ ಇವರನ್ನು ಎಲ್ಲೋ ನೋಡಿದ ನೆನಪು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ. ಆಗ ಜಯಂತ್ ಅವರ ಮನೆಯಲ್ಲಿ ಒಂದು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿಟ್ಟ ಮಹಿಳೆಯೂ ಈ ಫೋಟೋದಲ್ಲಿರುವವರು ಒಬ್ಬರೇನಾ ಎಂಬ ಕನ್‌ಫ್ಯೂಸ್ ಶುರುವಾಗುತ್ತದೆ. ಏಕೆಂದರೆ ಜಯಂತ್, ಕೋಣೆಯಲ್ಲಿ ಕೂಡಿ ಹಾಕಿದ್ದ ಮಹಿಳೆ ತನ್ನ ಹೆತ್ತ ತಾಯಿ ಎಂದು ಹೇಳಿಕೊಂಡಿರುತ್ತಾನೆ. ಆದರೆ ಇಲ್ಲಿ ನೋಡಿದರೆ ಅದೇ ಮಹಿಳೆಯ ಫೋಟೋ ತೋರಿಸಿ ವೆಂಕಿ ತನ್ನ ತಾಯಿ ಎಂದು ಹೇಳಿದ್ದಾನೆ. ಹಾಗಾಗಿ ಜಾನ್ವಿ ಈಗ ತನ್ನ ತಾಯಿ ಲಕ್ಷ್ಮೀ ಬಳಿ ಬಂದಿದ್ದಾಳೆ.
ಹೌದು. ಇಂದಿನ ಸಂಚಿಕೆಯಲ್ಲಿ ತೋರಿಸಿರುವ ಪ್ರಕಾರ, ಲಕ್ಷ್ಮೀ ಬಳಿ ಬಂದ ಜಾನ್ವಿ, ವೆಂಕಿ ಕೊಟ್ಟಿದ್ದ ಫೋಟೋ ತೋರಿಸಿ, "ಇವರು ವೆಂಕಿ ಅಮ್ಮನಾ"? ಎಂದು ಕೇಳುತ್ತಾಳೆ. ಆಕೆ "ಹೌದು" ಎನ್ನುತ್ತಾಳೆ. ಅಷ್ಟೇ ಅಲ್ಲ, ತನಗೆ ವೆಂಕಿ ಹೇಗೆ ಸಿಕ್ಕ? ಎಂಬುದನ್ನು ಇಂಚಿಂಚೂ ಬಿಡದೆ ವಿವರಿಸಿದ್ದಾಳೆ. ಆಗ ಜಾನ್ವಿಗೆ ಶಾಕ್ ಆಗುತ್ತದೆ.
ಅಸಲಿಗೆ ವೆಂಕಿ ತಾಯಿ ಹಾಗೂ ಲಕ್ಷ್ಮೀ ಇಬ್ಬರೂ ಕಾಲೇಜಿನಿಂದಲೂ ಗುಡ್ ಫ್ರೆಂಡ್ಸ್. ಇಬ್ಬರೂ ಮದುವೆಯಾದ ಮೇಲೂ ಗೆಳೆತನ ಮುಂದುವರೆಸಿರುತ್ತಾರೆ. ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಬರುತ್ತಿರುತ್ತಾರೆ. ಹೀಗೆ ಇಬ್ಬರೂ ಖುಷಿಯಿಂದ ಕಾಲ ಕಳೆಯುತ್ತಿರುವಾಗ ಒಂದು ದಿನ ವೆಂಕಿ ಅಪ್ಪ, ಶ್ರೀನಿವಾಸನನ್ನು ಬಚಾವ್ ಮಾಡಲು ಹೋಗಿ ತಾನೂ ಆಕ್ಸಿಡೆಂಟ್‌ನಲ್ಲಿ ಸಾವನ್ನಪ್ಪುತ್ತಾರೆ. ಅದಾದ ನಂತರ ಲಕ್ಷ್ಮೀ ಸ್ನೇಹಿತೆ ಅಂದರೆ ವೆಂಕಿ ತಾಯಿ ಭೇಟಿಯಾಗುವುದಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಆಕೆ ಸಿಗುತ್ತಾಳೆ. ಆದರೆ ಆ ಸಮಯದಲ್ಲಿ ಆಕೆ ಕೊಂಚ ಗಾಬರಿಯಲ್ಲಿ ಇರುವಂತೆ ಕಾಣುತ್ತದೆ.
ವೆಂಕಿ ತಾಯಿ ಬಂದು ಲಕ್ಷ್ಮೀ-ಶ್ರೀನಿವಾಸ್ ಅವರಿಗೆ ತನ್ನ ಮಗ ಅರ್ಜುನ್‌ನನ್ನು ಸಾಕಿಕೊಳ್ಳಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. (ವೆಂಕಿಯ ನಿಜವಾದ ಹೆಸರು ಅರ್ಜುನ. ಅವನ ಅಪ್ಪನ ಹೆಸರು ವೆಂಕಟೇಶ್. ಶ್ರೀನಿವಾಸನ ಪ್ರಾಣ ಕಾಪಾಡಿದ್ದಕ್ಕಾಗಿ ಅಪ್ಪನ ಹೆಸರನ್ನೇ ಅರ್ಜುನನಿಗೆ ಇಡುತ್ತಾರೆ) ಶ್ರೀನಿವಾಸ, ವೆಂಕಿ ತಾಯಿಯ ಈ ನಿರ್ಧಾರ ಪ್ರಶ್ನಿಸಿದ್ದಕ್ಕೆ ಆಕೆ ಏನನ್ನೂ ಹೇಳುವ ಪರಿಸ್ಥಿಯಲ್ಲಿ ಇರುವುದಿಲ್ಲ. ಹಾಗಾಗಿ ಅವರು ವೆಂಕಿಯನ್ನು ದತ್ತು ಕೊಳ್ಳಲು ಒಪ್ಪುತ್ತಾರೆ. ವೆಂಕಿಯನ್ನು ಆ ಸಮಯದಲ್ಲಿ ಕ್ರಿಶ್ಚಿಯನ್ ಹಾಸ್ಟೆಲ್‌ನಲ್ಲಿ ಬಿಟ್ಟಿರಲಾಗುತ್ತದೆ. ಕೊನೆಗೆ ಅಲ್ಲಿಗೆ ಹೋಗಿ ಇಬ್ಬರೂ ವೆಂಕಿಯನ್ನು ದತ್ತು ತೆಗೆದುಕೊಳ್ಳುತ್ತಾರೆ. ದತ್ತು ತೆಗೆದುಕೊಂಡ ನಂತರ ಒಳ್ಳೆಯ ದಿನವನ್ನು ನೋಡಿ ವೆಂಕಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗೋಣ ಎಂದು ಲಕ್ಷ್ಮೀ-ಶ್ರೀನಿವಾಸ ನಿರ್ಧರಿಸುತ್ತಾರೆ. ಆದರೆ ಕರೆದುಕೊಂಡು ಹೋಗಲು ಬರುವ ವೇಳೆಗೆ ವೆಂಕಿಗೆ ಮಾತು ಬರುತ್ತಿರಲಿಲ್ಲ. ಕೊನೆಗೆ ಫಾದರ್ ಬಳಿ ಕೇಳಿದಾಗ "ಅವನಿಗೆ ಹಾಸ್ಟೆಲ್‌ನಲ್ಲಿ ನಡೆದ ಬೆಂಕಿ ಅವಘಡ ನೋಡಿ ಶಾಕ್ ಆದ ಬೆನ್ನಲ್ಲೇ ಮಾತು ಆಡುವುದನ್ನ ನಿಲ್ಲಿಸಿದ್ದಾನೆ" ಎಂದು ಹೇಳುತ್ತಾರೆ. ಕೊನೆಗೆ ಶ್ರೀನಿವಾಸ-ಲಕ್ಷ್ಮೀ ಇಬ್ಬರೂ ಅವನನ್ನು ಅಲ್ಲಿಂದ ಕರೆದುಕೊಂಡು ಬರುತ್ತಾರೆ.
ಇಷ್ಟೆಲ್ಲಾ ಕಥೆಯನ್ನ ಲಕ್ಷ್ಮೀ ಜಾನ್ವಿಯ ಬಳಿ ಹೇಳಿದ್ದಾಳೆ. "ಒಂದು ವೇಳೆ ವೆಂಕಿ ತಾಯಿ ಸಿಕ್ಕರೆ, ಅವನನ್ನು ಅವರ ಅಮ್ಮನ ಮಡಿಲು ಸೇರಿಸಬೇಕು" ಎಂದು ಲಕ್ಷ್ಮೀ ಹೇಳಿಕೊಳ್ಳುತ್ತಾಳೆ. ಇಷ್ಟೆಲ್ಲಾ ಕಥೆ ಕೇಳಿಸಿಕೊಂಡ ಜಾನ್ವಿ, ವೆಂಕಿ ಮತ್ತು ಆತನ ತಾಯಿಯನ್ನ ಒಂದು ಮಾಡುತ್ತಾಳಾ? ಅಥವಾ ಜಯಂತ್ ಹೇಳೋ ಕಟ್ಟು ಕಥೆಯನ್ನ ನಂಬುತ್ತಾಳೋ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.