ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಣ್ಣಯ್ಯ’ದಲ್ಲಿ ನೆಗೆಟಿವ್ ಶೇಡ್ನ ‘ಪರಶು’ ಪಾತ್ರದ ಮೂಲಕ ಮನೆಮಾತಾಗಿರುವ ನಟ ಚಿರಂಜೀವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕಾಲೇಜು ದಿನಗಳ ಗೆಳತಿ ಜ್ಯೋತಿ ಎಂಬುವವರೊಂದಿಗೆ ಹಸೆಮಣೆ ಏರುವ ಮೂಲಕ ನಟ ನಿಜ ಜೀವನದಲ್ಲಿ ಹೊಸ ಬಾಳಿಗೆ ಮುನ್ನುಡಿ ಬರೆದಿದ್ದಾರೆ. ಇವರಿಬ್ಬರದ್ದು ಕಾಲೇಜು ದಿನಗಳ ಪ್ರೇಮ ಕಥೆಯಾಗಿದ್ದು, ಹಲವು ವರ್ಷಗಳ ಒಡನಾಟದ ನಂತರ ಗುರು-ಹಿರಿಯರ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಈ ವಿವಾಹ ಮಹೋತ್ಸವ ಅತ್ಯಂತ ಸರಳವಾಗಿ ನೆರವೇರಿದೆ. ನವೆಂಬರ್ 4 ರಂದು ಬೆಂಗಳೂರಿನ ಸಂಪ್ರದಾಯದಂತೆ ಆತ್ಮೀಯರಿಗೆ ಬೀಗರ ಊಟದ ಔತಣ ಕೂಟವನ್ನೂ ಆಯೋಜಿಸಲಾಗಿತ್ತು. ಈ ಮದುವೆ ಸಮಾರಂಭದಲ್ಲಿ ‘ಅಣ್ಣಯ್ಯ’ ಸೀರಿಯಲ್ ತಂಡದ ನಾಯಕ ಶಿವು (ವಿಕಾಶ್ ಉತ್ತಯ್ಯ), ನಾಯಕಿ ಪಾರು (ನಿಶಾ ರವಿಕೃಷ್ಣನ್), ರಾಘವಿ, ನಾಗಶ್ರೀ, ಪ್ರತೀಕ್ಷಾ ಹಾಗೂ ತಂದೆಯ ಪಾತ್ರಧಾರಿ ಹಿರಿಯ ನಟ ನಾಗೇಂದ್ರ ಶಾ ಸೇರಿದಂತೆ ಇಡೀ ತಂಡ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದೆ.
ಮೂಲತಃ ಚನ್ನಪಟ್ಟಣದವರಾದ ಚಿರಂಜೀವಿ, ತಾಯಿಯ ಆಸೆಯಂತೆ ಎಂಜಿನಿಯರಿಂಗ್ ಪದವಿ ಮುಗಿಸಿದ್ದರು. ಆದರೆ, ನೃತ್ಯ ಹಾಗೂ ನಟನೆಯ ಮೇಲಿನ ಅಪಾರ ಒಲವಿನಿಂದಾಗಿ ಪೋಷಕರ ಬೆಂಬಲದೊಂದಿಗೆ 'ಆನೆಬಲ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ರಂಗಭೂಮಿಯಲ್ಲಿ ಹಲವು ನಾಟಕಗಳ ಮೂಲಕ ಅಭಿನಯದಲ್ಲಿ ಪಳಗಿದರು. ಪ್ರಮೋದ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಸಿನಿಮಾ ಆಡಿಷನ್ ಎಂದು ಭಾವಿಸಿ ಹೋದ ಇವರಿಗೆ ‘ಅಣ್ಣಯ್ಯ’ ಸೀರಿಯಲ್ನ ಪರಶು ಪಾತ್ರದ ಅವಕಾಶ ಸಿಕ್ಕಿತು. ಆರಂಭದಲ್ಲಿ ಸೀರಿಯಲ್ ಮಾಡುವ ಮನಸ್ಸಿಲ್ಲದಿದ್ದರೂ, ಸವಾಲಿನ ಪಾತ್ರವೆಂದು ಒಪ್ಪಿಕೊಂಡರು.
ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರಂಜೀವಿ ಅವರಿಗೆ ‘ಅಣ್ಣಯ್ಯ’ ಧಾರಾವಾಹಿ ದೊಡ್ಡ ಬ್ರೇಕ್ ನೀಡಿದೆ. ತೆರೆಯ ಮೇಲೆ ಪಕ್ಕಾ ನೆಗೆಟಿವ್ ಶೇಡ್ ಪಾತ್ರವಾದರೂ ತಮ್ಮ ನೈಜ ಅಭಿನಯದಿಂದ ವೀಕ್ಷಕರ ಮನಗೆದ್ದಿರುವ ಚಿರಂಜೀವಿ-ಜ್ಯೋತಿ ದಂಪತಿಗೆ ಅಭಿಮಾನಿಗಳು ಸುಖೀ ದಾಂಪತ್ಯ ಜೀವನಕ್ಕಾಗಿ ಶುಭ ಹಾರೈಸುತ್ತಿದ್ದಾರೆ.
ಧಾರಾವಾಹಿಯಲ್ಲಿ ಪರಶು ಪಾತ್ರ ನಾಯಕ ಶಿವು ತಂಗಿಯನ್ನು ಮೋಸದಿಂದ, ಕುತಂತ್ರದಿಂದ ಮದುವೆಯಾಗುವ ಖಳನಾಯಕ. ಆದರೆ ನಿಜ ಜೀವನದಲ್ಲಿ ಮಾತ್ರ ಚಿರಂಜೀವಿ ಅಪ್ಪಟ ಜೆಂಟಲ್ಮ್ಯಾನ್! ಕಾಲೇಜು ದಿನಗಳಿಂದ ಪ್ರೀತಿಸಿದ ಹುಡುಗಿಯನ್ನೇ ನಂಬಿಕೆಯಿಂದ ಕೈಹಿಡಿದು ಮಾದರಿಯಾಗಿದ್ದಾರೆ!
ಧಾರಾವಾಹಿಯಲ್ಲಿ ಪರಶು ಅಪ್ಪ ವೀರಭದ್ರನ ಮಾತಿಗೆ ಕುಣಿಯುವ ಕ್ಯಾರೆಕ್ಟರ್. ಹೀಗಾಗಿ ನೆಟ್ಟಿಗರು 'ಅಪ್ಪ ವೀರಭದ್ರನಿಗೆ ಗೊತ್ತಾಗದ ಹಾಗೆ ಪರಶು ರಿಯಲ್ ಆಗಿ ಮದುವೆ ಆಗ್ಬಿಟ್ರಾ?', 'ಅಣ್ಣಯ್ಯ ಶಿವುಗೆ ವಿಷಯ ಗೊತ್ತಾದ್ರೆ ಕಥೆ ಏನು?' ಅಂತ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಾ, ಪ್ರೀತಿಯಿಂದಲೇ ಶುಭ ಹಾರೈಸುತ್ತಿದ್ದಾರೆ.
ಅಭಿಮಾನಿಗಳಿಗೆ ವಧು ಕೂಡ ನಟಿನಾ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಆದರೆ ನಟ ಚಿರಂಜೀವಿ ಬಣ್ಣದ ಲೋಕದಲ್ಲಿದ್ದರೆ, ಅವರ ಕೈಹಿಡಿದಿರುವ ಪತ್ನಿ ಜ್ಯೋತಿ ಅವರು ಚಿತ್ರರಂಗದವರಲ್ಲ. ಇವರು ಯಾವುದೇ ಗ್ಲಾಮರ್ ಲೋಕದ ಹಿನ್ನೆಲೆಯಿಲ್ಲದ ಸಾಮಾನ್ಯ ಕುಟುಂಬದ ಪ್ರತಿಭಾವಂತ ಯುವತಿಯಾಗಿದ್ದು, ಕಾಲೇಜು ದಿನಗಳಿಂದಲೇ ಚಿರಂಜೀವಿ ಅವರ ಕನಸುಗಳಿಗೆ ಹಾಗೂ ನಟನಾ ವೃತ್ತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.