ಹೆಣ್ಣು ಮದುವೆಯಾದ ಮೇಲೆ ಗಂಡನ ಮನೆಯ ಹೆಸರು ಅನಿವಾರ್ಯವೆ? ಅಮೃತಧಾರೆ ಭೂಮಿಕಾ ಸ್ಥಿತಿ ಅದೆಷ್ಟು ಮಂದಿಗೆ ಬಂದಿದೆ ಅರಿವಾದರೂ ಗಂಡಿನ ಮನೆಗೆ ಇದ್ಯಾ?
ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಗಾದೆ ಮಾತು ತಲೆತಲಾಂತರಗಳಿಂದಲೂ ಇದೆ. ಹಿಂದಿನವರು ಈ ಗಾದೆ ಮಾತನ್ನು ಅದ್ಯಾವ ಉದ್ದೇಶ ಇಟ್ಟುಕೊಂಡು ಮಾಡಿದ್ದರೋ ಗೊತ್ತಿಲ್ಲ. ಆದರೆ, ಬಹುಶಃ ಇದೊಂದು ಗಾದೆ ಮಾತು ಇಂದು ಎಷ್ಟೋ ಹೆಣ್ಣುಮಕ್ಕಳ ಪಾಲಿಗೆ ನರಕವಾಗುತ್ತಿರುವುದು ಅಂತೂ ನಿಶ್ಚಿತ. ಹುಟ್ಟಿದಾಗ ಅಪ್ಪ-ಅಮ್ಮನ ಮನೆಗೆ, ಮದುವೆಯಾದ ಮೇಲೆ ಗಂಡಿನ ಮನೆಗೆ ಕೀರ್ತಿ ತರುವುದು ಹೆಣ್ಣಿನ ಕರ್ತವ್ಯ. ಇದೇ ಕಾರಣಕ್ಕೆ ಗಂಡನ ಮನೆಯಲ್ಲಿ ಅದೆಷ್ಟೇ ದೌರ್ಜನ್ಯ ಮಾಡಿದೂ ಹೆಣ್ಣಾದವಳು ಅದನ್ನು ಸಹಿಸಿಕೊಳ್ಳಲೇಬೇಕು, ಯಾವುದೇ ಕಾರಣಕ್ಕೂ ತವರಿಗೆ ವಾಪಸಾಗುವಂತಿಲ್ಲ. ಹೀಗಾದರೆ ಸಮಾಜ ಹೆಣ್ಣನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ... ಈ ಮಾತು ಇಂದಿನ ಹೆಣ್ಣುಮಕ್ಕಳಿಗೆ ಅನ್ವಯ ಆಗುವುದಿಲ್ಲ ಬಿಡಿ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಅಸಲಿಯತ್ತು ಏನೆಂದರೆ, ಕಾಲ ಬದಲಾದರೂ ಜನರ ಮನಸ್ಥಿತಿ ಬದಲಾಗುವುದಿಲ್ಲ ಎನ್ನುವುದು ಅಷ್ಟೇ ದಿಟ.
ಇಂದು ಚಿಕ್ಕಪುಟ್ಟ ವಿಷಯಗಳಿಗೂ ವಿಚ್ಛೇದನ ಆಗುವುದು ಒಂದು ಕಡೆಗಳಲ್ಲಿ ನಿಜವಾದರೂ, ಅದೇ ಕೆಲವು ಕಡೆಗಳಲ್ಲಿ, ಗಂಡಿನ ಮನೆಯ ದೌರ್ಜನ್ಯ ತಾಳದೇ, ತವರಿಗೂ ಬರಲು ಆಗದೆ ಜೀವ ಕಳೆದುಕೊಳ್ಳುತ್ತಿರುವ ಹೆಣ್ಣುಮಕ್ಕಳೂ ಅದೆಷ್ಟೋ ಮಂದಿ. ಏಕೆಂದರೆ ಈ ಹೆಣ್ಣುಮಕ್ಕಳ ಪಾಲಿಗೆ ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವುದು. ಇದೇ ಕಾರಣಕ್ಕೆ ಹೆಣ್ಣು ಮಾನಸಿಕವಾಗಿ ನೊಂದುಕೊಳ್ಳುವ ಇನ್ನೊಂದು ವಿಷಯವೂ ಈ ಕುಲದಿಂದ ಹೊರಕ್ಕೆ ಎನ್ನುವ ಮಾತಿಗೆ ಸೇರ್ಪಡೆಗೊಂಡಿದೆ. ಅದೇನೆಂದರೆ, ಹೆಣ್ಣು ಮದುವೆಯಾದ ಮೇಲೆ ಅಪ್ಪನ ಹೆಸರು, ಅಪ್ಪನ ಮನೆಯ ಅಡ್ಡ ಹೆಸರು ಎಲ್ಲವನ್ನೂ ಬಿಟ್ಟು ಗಂಡನ ಹೆಸರು, ಗಂಡನ ಮನೆಯ ಅಡ್ಡ ಹೆಸರನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಳ್ಳುವುದು!
ಅಮೃತಧಾರೆ ಗೌತಮ್ ರಿಯಲ್ ಅತ್ತೆ ಭಾವಿ ಅಳಿಯನ ಬಗ್ಗೆ ಕಂಡಿದ್ದ ಕನಸೇನು? ಆಗಿದ್ದೇನು?
ಇಂದು ಅಪ್ಪನ ಮನೆಯ ಸರ್ ನೇಮ್ ಜೊತೆ ಗಂಡನ ಮನೆಯ ಸರ್ ನೇಮ್ ಹಾಕಿಕೊಳ್ಳುವ ಪದ್ಧತಿಗೆ ನಟಿಯರು ನಾಂದಿ ಹಾಡಿದ್ದಾರೆ ಎನ್ನಿ. ಉದಾಹರಣೆಗೆ, ಐಶ್ವರ್ಯ ರೈ ಬಚ್ಚನ್, ಕತ್ರಿನಾ ಕಪೂರ್ ಖಾನ್... ಹೀಗೆ ಹಲವರು. ಅದೇನೆ ಇದ್ದರೂ ಗಂಡನ ಮನೆತನದ ಹೆಸರು ಹೆಣ್ಣಿಗೆ ಅನಿವಾರ್ಯ ಎನ್ನುವುದು! ಹಲವು ಹೆಣ್ಣುಮಕ್ಕಳು ಇದನ್ನು ಸುಲಭದಲ್ಲಿ ಒಪ್ಪಿಬಿಡಬಹುದು. ಆದರೆ ಎಲ್ಲರ ಮನಸ್ಸೂ ಒಂದೇ ರೀತಿಯಾಗಿರುವುದಿಲ್ಲವಲ್ಲ. ಅದೆಷ್ಟೋ ಮಂದಿ ಹೆಣ್ಣುಮಕ್ಕಳಿಗೆ ಅಪ್ಪನೇ ಸರ್ವಸ್ವ. ಅಪ್ಪನ ಪ್ರೀತಿಯ ಅಪ್ಪುಗೆಯಲ್ಲಿ ಬೆಳೆದು, ತನ್ನ ಹೆಸರಿನ ಮುಂದೆ ಅಪ್ಪ ಹಾಗೂ ಆತನ ಮನೆತನದ ಹೆಸರು ಇಟ್ಟುಕೊಂಡು ಹೆಮ್ಮೆ ಪಡುತ್ತಿದ್ದ ಹೆಣ್ಣೊಬ್ಬಳು ಏಕಾಏಕಿಯಾಗಿ ಆ ಜಾಗದಲ್ಲಿ ಗಂಡ ಹಾಗೂ ಗಂಡನ ಮನೆತನದ ಹೆಸರು ಸೇರಿಸಿಕೊಳ್ಳಬೇಕು ಎಂದರೆ ಹೇಗೆ?
ಇದೊಂದು ರೀತಿಯಲ್ಲಿ ಕಟ್ಟುನಿಟ್ಟಿನ ನಿಯಮವಾಗಿರುವ ಕಾರಣ, ಬಹುಶಃ ಈ ಬಗ್ಗೆ ಹೆಣ್ಣಿನ ಅಭಿಪ್ರಾಯ ಕೇಳುವ ಗಂಡಿನ ಮನೆಯವರೂ ಇಲ್ಲವೆನ್ನಬಹುದೇನೋ. ಇದೇ ಸ್ಥಿತಿಯನ್ನು ಇದೀಗ ಅಮೃತಧಾರೆ ಭೂಮಿಕಾ ಅನುಭವಿಸುತ್ತಿದ್ದಾಳೆ. ಈಕೆಗೆ ಅಪ್ಪನೆಂದರೆ ಪ್ರಪಂಚ. ಆದರೆ ಗಂಡ ಗೌತಮ್‌ನ ಅಜ್ಜಿ ಪೂಜೆಯ ಸಂದರ್ಭದಲ್ಲಿ ಭೂಮಿಕಾ ಜೊತೆ ಗೌತಮ್ ಹೆಸರು ಸೇರಿಸಿ ಆತನ ಮನೆತನದ ಹೆಸರು ಸೇರಿಸಿಬಿಟ್ಟಿದ್ದಾಳೆ. ಇದು ಭೂಮಿಕಾಗೆ ನುಂಗಲಾಗದ ತುತ್ತು. ಹೆಸರು ಬದಲಾಗುತ್ತಿದ್ದಂತೆಯೇ ಅಪ್ಪನ ನೆನಪು ಕಾಡುತ್ತಿದೆ ಆಕೆಗೆ. ಇನ್ನೇನು ಹೆಸರು ಬದಲಾಯಿಸಬೇಕು ಎನ್ನುವಷ್ಟರಲ್ಲಿ ಗೌತಮ್ ಮಧ್ಯೆ ಪ್ರವೇಶಿಸಿ, ಮಗಳಾದವಳಿಗೆ ಅಪ್ಪ ಎಲ್ಲಕ್ಕಿಂತ ಹೆಚ್ಚು. ಅಪ್ಪನ ಹೆಸರು ಅದು ಬರೀ ಹೆಸರು ಆಗಿರಲ್ಲ. ಅದೊಂದು ರೀತಿ ಇಮೋಷನಲ್ ಆಗಿರುತ್ತೆ. ಸರ್ ನೇಮ್ನಿಂದ ಹಿಡಿದು ಪ್ರತಿಯೊಂದನ್ನು ಹೆಣ್ಣೇ ಯಾಕೆ ತ್ಯಾಗಮಾಡಬೇಕು ಎಂದಾಗ ಅಜ್ಜಿಗೆ ಕಸಿವಿಸಿ, ಭೂಮಿಕಾಗೆ ಕಣ್ಣಲ್ಲಿ ಆನಂದಬಾಷ್ಪ... ಗೌತಮ್ ಮಾತಿಗೆ ನೆಟ್ಟಿಗರು ಭೇಷ್ ಭೇಷ್ ಎನ್ನುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಗಂಡ ಗೌತಮ್ ಪತ್ನಿಯ ನೆರವಿಗೆ ಬಂದ. ಎಷ್ಟೆಂದರೂ ಅದು ಸೀರಿಯಲ್. ಆದರೆ ನಿಜ ಜೀವನದಲ್ಲಿ...?
ಹೆಣ್ಣಿನ ಗೌರವದ ಬಗ್ಗೆ ಭಾಷಣ ಮಾಡೋ ನೀವೂ ಹೀಗಾ ಥೂ...! ನಟಿ ತ್ರಿಷಾಗೆ ಶಾಕ್ ಕೊಟ್ಟ ನೆಟ್ಟಿಗರು