ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ಮಜಾ ಎಪಿಸೋಡ್ ಗಳು ಪ್ರಸಾರವಾಗುತ್ತಿವೆ. ಕೂಸು ಹುಟ್ಟೋ ಮೊದಲೇ ಕುಲಾವಿ ಹೊದಿಸಿದ್ರು ಅನ್ನೋ ಮಾತಿನಂತೆ ಎಜೆ ಲೀಲಾ ಮಗು ಹುಟ್ಟೋ ಮೊದಲೇ ಅಜ್ಜಿ ಮಗೂಗೆ ಹೆಸರೂ ಇಟ್ಟಾಯ್ತು.
ಹಿಟ್ಲರ್ ಕಲ್ಯಾಣ ಸೀರಿಯಲ್ ಮೊದಲಿಂದಲೂ ಹೊಸ ಬಗೆಯ ಕತೆಯಿಂದಲೇ ಜನರ ಮನ ಗೆದ್ದಿದೆ. ಇದೀಗ ಹೊಸದೊಂದು ತಿರುವು ಬಂದಿದೆ. ವರ ಮಹಾಲಕ್ಷ್ಮೀ ಹಬ್ಬದ ದಿನ ಅಜ್ಜಿ ದೇವರ ಮುಂದೆ ತೊಟ್ಟಿಲು ಇಟ್ಟು ಹರಕೆ ಹೊತ್ತುಕೊಂಡಿದ್ದಾರೆ. ಮುಂದಿನ ವರ್ಷದ ಹಬ್ಬದ ಹೊತ್ತಿಗೆ ತೊಟ್ಟಿಲು ತೂಗುವಂತಾಗಬೇಕು ಅನ್ನೋದು ಅವರ ಹರಕೆ. ಮೊಮ್ಮಗುವನ್ನು ಮುದ್ದಾಡುವ ಕನಸು ಕಂಡಿರುವ ಅವರು ಅದನ್ನು ನನಸು ಮಾಡಲು ಹರಸಾಹಸ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಏಜೆ ಲೀಲಾರನ್ನು ಒಂದು ಮಾಡಬೇಕು ಅನ್ನೋದು ಅವರ ಕನಸು. ಈ ಹಿಂದೆ ಮನೆಯಿಂದ ಹೊರಗೆ ಟೆಂಟ್ ಹಾಕಿ ಏಜೆ ಲೀಲಾ ಒಂದಾಗುವವರೆಗೂ ಮನೆ ಒಳಗೆ ಬರೋದಿಲ್ಲ ಅಂತ ಸತ್ಯಾಗ್ರಹ ಮಾಡಿದ್ರು. ಆದರೆ ಈ ಮನೆಯಲ್ಲಿರುವ ಮನೆಹಾಳು ಸೊಸೆಯರಿಂದ ಅವರ ಪ್ರತಿಭಟನೆ ಅರ್ಧಕ್ಕೇ ನಿಂತು ಲೀಲಾ ಹೆಸರು ಹಾಳಾಗಿ ಅಜ್ಜಿ ಪಶ್ಚಾತಾಪ ಪಡುವಂತಾಗಿತ್ತು. ಆದರೆ ಅಜ್ಜಿ ತನ್ನ ಹಠ ಬಿಟ್ಟಿಲ್ಲ. ಏಜೆ ಮತ್ತು ಲೀಲಾನ ಒಂದು ಮಾಡೋ ಜವಾಬ್ದಾರಿಯನ್ನು ದೇವರ ಮೇಲೆ ಹೊರೆಸಿ ಬಿಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಅಜ್ಜಿ ಲೀಲಾ ಏಜೆ ರೂಮಿಗೆ ಹೊತ್ತಲ್ಲದ ಹೊತ್ತಲ್ಲಿ ಹೋಗಿ ನೋಡಬಾರದ್ದನ್ನು ನೋಡಿ ನಾಚಿಕೊಂಡಿದ್ದಾರೆ. ತನ್ನ ಈ ತಪ್ಪನ್ನು ಮನ್ನಿಸುವಂತೆ ದೇವರಲ್ಲಿ ಬೇಡಿಕೊಂಡಿದ್ದಾರೆ.
ಅಷ್ಟಕ್ಕೂ ಅಲ್ಲಿ ನಡೆದದ್ದೇ ಬೇರೆ. ಬೇರೆ ಬೇರೆ ರೂಮಲ್ಲಿ ಮಲಗುತ್ತಿದ್ದ ಏಜೆ ಮತ್ತು ಲೀಲಾರನ್ನು ಅಜ್ಜಿ ಒಂದೇ ರೂಮಿನಲ್ಲಿ ಮಲಗುವಂತೆ ಬಲವಂತ ಮಾಡಿದ್ದಾರೆ. ಆದರೆ ಲೀಲಾಗೆ ಏಜೆ ಜೊತೆಗೆ ಮಲಗೋದು ಅಂದರೆ ಭಯ. ಅದಕ್ಕೆ ಅವಳು ಅಜ್ಜಿಯನ್ನು ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಅಜ್ಜಿ ಜೊತೆಗೇ ಒಂದು ದಿನ ಮಲಗುತ್ತೇನೆ ಅಂತ ಮಕ್ಕಳ ಥರ ಹೇಳಿದಾಗ ಅಜ್ಜಿ ಕಿವಿ ಹಿಂಡಿ ಬುದ್ಧಿ ಹೇಳಿದ್ದಾರೆ. ಭಯ ಆದರೆ ತನ್ನ ಮಗ ರಾಮುವನ್ನು ತಬ್ಬಿಕೊಂಡು ಮಲಗುವಂತೆ ಸಲಹೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಲೀಲಾಳನ್ನು ಎಳೆದುಕೊಂಡು ಹೋಗಿ ಏಜೆ ರೂಮಲ್ಲಿ ಮಲಗಿಸಿದ್ದಾರೆ.
Bigg boss OTT: ಎರಡ್ಮೂರು ಲವ್ವು, ಮದ್ವೆ, ಬ್ರೇಕಪ್ಪು, ಡಿವೋರ್ಸು, ಇದೊಂಥರ ಹುಚ್ಚರ ಸಂತೆ!
ಅಜ್ಜಿಯ ಬಲವಂತಕ್ಕೆ ಏಜೆ ರೂಮಲ್ಲಿ ಮಲಗಿರೋ ಲೀಲಾಗೆ ಮತ್ತೆ ಎಲ್ಲಿ ಏಜೆ ಬಂದು ಪಕ್ಕದಲ್ಲಿ ಮಲಗುತ್ತಾನೋ ಅಂತ ಭಯವಾಗಿದೆ ಬಿಟ್ಟಿದೆ. ಆ ಭಯದಲ್ಲಿ ಮಂಚದ ಬದಿಗೆ ಸರಿದು ಸರಿದು ಕೆಳಗೆ ಬಿದ್ದು ಬಿಟ್ಟಿದ್ದಾಳೆ. ಬಿದ್ದವಳಿಗೆ ಮೇಲೇಳಲು ಆಗುತ್ತಿಲ್ಲ. ಏಜೆ ಎಂದಿನ ಸಿಟ್ಟಲ್ಲಿ ಬೈದು ಅವಳ ಕೈ ಹಿಡಿದು ಎಬ್ಬಿಸುತ್ತಾನೆ. ಅವಳ ಕೈಗೆ ಪೇನ್ ಬಾಮ್ ಹಚ್ಚುತ್ತಾನೆ. ಲೀಲಾ ಆಗ ಅಪ್ಪನ ನೆನಪು ಮಾಡಿಕೊಳ್ಳುತ್ತಾಳೆ. ಅಪ್ಪ ಕಥೆ ಹೇಳಿ ಬಾಮ್ ಹಚ್ಚುವಾಗ ಎಲ್ಲ ನೋವು ಕಡಿಮೆ ಆಗುತ್ತಿತ್ತು ಅನ್ನುತ್ತಾಳೆ. ಆಗ ಏಜೆ ತನ್ನ ಕಣ್ಣನ್ನೇ ನೋಡಲು ಹೇಳಿದ್ದಾನೆ. ಲೀಲಾ ನಿರಾಕರಿಸಿದಾಗ ಬೈದು ಅವಳು ಅವನ ಕಣ್ಣನ್ನೇ ನೋಡುವಂತೆ ಮಾಡಿದ್ದಾನೆ. ಕೊನೆಯಲ್ಲಿ ಲೀಲಾಗೆ ನೋವು ಕಡಿಮೆ ಆದಂತಾಗಿದೆ. ಏಜೆ ಕೋಪ ಕಾಳಜಿಯಾಗಿ ಬದಲಾಗಿದೆ.
ಇತ್ತ ಲೀಲಾ ಮಂಚದಲ್ಲಿ ಏಜೆ ಸೋಫಾದಲ್ಲಿ ಮಲಗಿದ್ದಾಗ ಅಜ್ಜಿ ಮೆಲ್ಲ ಮಗನನ್ನು ಕರೆದಿದ್ದಾರೆ. ಅದನ್ನು ನೋಡಿ ಏಜೆ ಎದ್ದೆನೋ ಬಿದ್ದೆನೋ ಅಂತ ಮಂಚದ ಮೇಲೆ ಲೀಲಾ ಹೊದಿಕೆಯೊಳಗೆ ಸೇರಿದ್ದಾನೆ. ಅದನ್ನು ನೋಡಿ ಕಿರಿಚಲೆಂದು ಬಾಯಿ ತೆರೆದ ಲೀಲಾಳ ಬಾಯಿ ಮುಚ್ಚಿಸಿದ್ದಾನೆ. ಅವನಿಂದ ತಪ್ಪಿಸಲು ಲೀಲಾ ಪ್ರಯತ್ನಿಸಿದರೆ ಅವಳನ್ನು ಅಲ್ಲೇ ಹಿಡಿದು ಮಲಗಿಸಿದ್ದಾನೆ ಏಜೆ. ಆದರೆ ಮಗನ ದನಿ ಕೇಳುತ್ತಿಲ್ಲವಲ್ಲ ಅಂತ ರೂಮಿನೊಳಗೆ ಬಂದ ಅಜ್ಜಿಗೆ ಹೊದಿಕೆಯೊಳಗೆ ಏನೋ ನಡೀತಿರೋದು ಕಂಡಿದೆ. ಅಜ್ಜಿ ಮಗ ಸೊಸೆ ಒಂದಾಗುತ್ತಿದ್ದಾರೆ ಅಂತಲೇ ಭಾವಿಸಿದ್ದಾರೆ.
Kannadathi Breaking News: ಅಮ್ಮಮ್ಮಂಗೆ ಡಿಸ್‌ಚಾರ್ಜ್, ಮತ್ತೆ ರತ್ನಮಾಲಾ ದರ್ಶನ!
ಮರುದಿನ ಲೀಲಾ ಬಂದಾಗ ಅಜ್ಜಿ ಪೆನ್ನು ಪೇಪರ್ ಹಿಡ್ಕೊಂಡು ಏನೋ ಬರೆಯುತ್ತಿದ್ದಾರೆ. ಲೀಲಾ ಕುತೂಹಲದಿಂದ ನೋಡಿದರೆ ಮಕ್ಕಳ ಹೆಸರುಗಳನ್ನು ಅಜ್ಜಿ ಬರೀತಿದ್ದಾರೆ. ಲೀಲಾಳ ಬಳಿ ಈ ಹೆಸರುಗಳು ಹೇಗಿವೆ ಅಂತ ಕೇಳ್ತಾರೆ ಅಜ್ಜಿ. ಲೀಲಾಗ್ಯಾಕೋ ಅಜ್ಜಿ ಬರೆದ ಹಳೆ ಹೆಸರು ಇಷ್ಟ ಆಗಲಿಲ್ಲ. ಅವಳು ಅಭಿಲಾಷ ಅಂತ ಚಂದದೊಂದು ಹೆಸರು ಬರೆಯುತ್ತಾಳೆ. ಅದನ್ನು ನೋಡಿದ ಅಜ್ಜಿಯ ಖುಷಿಗೆ ಪಾರವೇ ಇಲ್ಲ. ತನ್ನ ಮಗ ಅಭಿರಾಮ್ ಹೆಸರಿನ ಅಭಿ, ಲೀಲಾ ಹೆಸರಿನ ಲ ಅಕ್ಷರವನ್ನಿಟ್ಟು ಲೀಲಾ ಈ ಹೆಸರು ಬರೆದಿದ್ದಾಳೆ ಅಂತ ಅಂದುಕೊಳ್ತಾರೆ ಅಜ್ಜಿ. ಅದನ್ನು ಲೀಲಾ ಮುಂದೆಯೂ ಆಡಿದಾಗ ನಾಚಿಕೆ ಮುಜುಗರ ಕೋಪದಿಂದ ಲೀಲಾ ಅಲ್ಲಿಂದಾಚೆ ನಡೆಯುತ್ತಾಳೆ.
ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್, ಏಜೆ ಪಾತ್ರದಲ್ಲಿ ದಿಲೀಪ್ ರಾಜ್, ಅಜ್ಜಿ ಪಾತ್ರದಲ್ಲಿ ವಿದ್ಯಾಮೂರ್ತಿ ನಟಿಸಿದ್ದಾರೆ.