ಗಿಚ್ಚಿ ಗಿಲಿಗಿಲಿ: ಸರ್ಕಾರಿ ಕೆಲಸ ಬಿಟ್ರೆ ಭಿಕ್ಷೆ ಬೇಡ್ಬೇಕಾಗುತ್ತೆ ಅಂದವರಿಗೆ ದೀಕ್ಷಾ ಕೊಟ್ರು ನೋಡಿ ಡಿಚ್ಚಿ!

By Contributor AsianetFirst Published Feb 15, 2024, 11:40 AM IST
Highlights

'ಸರ್ಕಾರಿ ಕೆಲಸ ಬಿಟ್ಟು ಬಂದಿ, ಗಿಚ್ಚಿ ಗಿಲಿಗಿಲಿ ಶೋಗೆ ಹೋಗಿದ್ದಿ. ಮುಂದೆ ನೀನು ಭಿಕ್ಷೆ ಬೇಡಬೇಕಾಗುತ್ತೆ ಎಂದೆಲ್ಲ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಸಾಕಷ್ಟು ಮಂದಿ ಏನೆನೋ ಬರೆದಿದ್ರು. ಅದೆಲ್ಲವನ್ನು ನೋಡಿ ಬೇಜಾರಲ್ಲಿದ್ದೆ. ಇದೀಗ ಈ ಶೋನ ಮೊದಲ ವಾರದಲ್ಲಿಯೇ ಬೆಸ್ಟ್‌ ಫರ್ಫಾಮರ್‌ ಪ್ರಶಸ್ತಿ ಸಿಕ್ಕಿದ್ದು ನನಗೆ ನಂಬೋಕೆ ಆಗ್ತಿಲ್ಲ ಅಂತಿದ್ದಾರೆ ದೀಕ್ಷಾ. ಅಷ್ಟಕ್ಕೂ ಅವರ ಕಥೆ ಏನು?

ಸರ್ಕಾರಿ ಕೆಲಸಕ್ಕಾಗಿ ಏನು ಬೇಕಾದ್ರೂ ಮಾಡೋವ್ರಿದ್ದಾರೆ, ಅದಕ್ಕಾಗಿ ಅನೇಕ ಭ್ರಷ್ಟಾಚಾರಗಳೂ ನಡೆಯುತ್ತವೆ. ಏನೇನೋ ಲಫಡಾಗಳೂ ಆಗೋದನ್ನು ನಾವು ಕಣ್ಣಾರೆ ಕಣ್ತೀವಿ. ಅಂಥದ್ರಲ್ಲಿ ಕೈಗೆ ಬಂದ ಸರ್ಕಾರಿ ಕೆಲಸವನ್ನು ಬಿಟ್ಟು ರಿಯಾಲಿಟಿ ಶೋದಲ್ಲಿ ಭಾಗವಹಿಸ್ತೀನಿ ಅಂತ ಹೊರಟವರು ಕುಂದಾಪುರದ ಶಿಕ್ಷಕಿ ದೀಕ್ಷಾ. ಅವರು ಸರ್ಕಾರಿ ಕೆಲಸ ಬಿಟ್ಟಾಗ ಏನೇನೆಲ್ಲ ಆಪಾದನೆಗಳು, ಟೀಕೆಗಳು ಕೇಳಿಬಂದವು. ಅದು ದೀಕ್ಷಾ ಕಣ್ಣಲ್ಲಿ ನೀರು ತರಿಸಿತ್ತು. ಆದರೆ ಅವರ ಅದೃಷ್ಟಕ್ಕೆ ಇದೀಗ ಕಣ್ಣೀರು ಒರೆಸೋ ಕೆಲಸವನ್ನು ಅವರ ಪರ್ಫಾಮೆನ್ಸೇ ಮಾಡಿದೆ. ಎಸ್, ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಈ ಹೆಣ್ಣುಮಗಳು ಆತ್ಮವಿಶ್ವಾಸದಿಂದ ಮುಂದುವರಿಯುವಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಈ ಹೆಣ್ಣುಮಗಳಿಗೆ ತನ್ನಿಷ್ಟ ಹವ್ಯಾಸದ ಬಗೆಗೆ ಇರುವ ಪ್ರೀತಿ.

ಕಲರ್ಸ್‌ ಕನ್ನಡದಲ್ಲಿ ನಗುವಿನ ಹಬ್ಬ ಮತ್ತೆ ಶುರುವಾಗಿದೆ. ಬಿಗ್‌ ಬಾಸ್ ಕನ್ನಡ ಸೀಸನ್‌ 10 ಮುಗಿಯುತ್ತಿದ್ದಂತೆ, ಗಿಚ್ಚಿ ಗಿಲಿಗಿಲಿ ಸೀಸನ್‌ 3 ಆರಂಭವಾಗಿದೆ. ಒಂದಷ್ಟು ಹೊಸಮುಖಗಳ ಜತೆಗೆ ಹಳೇ ಕಾಮಿಡಿಯನ್‌ಗಳೂ ಈ ಸಲದ ಗಿಚ್ಚಿ ಗಿಲಿಗಿಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ ಬಾಸ್‌ನಲ್ಲಿ ಮೋಡಿ ಮಾಡಿದ್ದ ಹಲವರು ಇದೀಗ ಕಾಮಿಡಿ ವೇದಿಕೆ ಮೇಲೂ ಎದುರಾಗಿ ನಗು ಉಕ್ಕಿಸುವ ಕೆಲಸಕ್ಕೆ ಇಳಿದಿದ್ದಾರೆ. ಫೆಬ್ರವರಿ ಮೂರರಿಂದ ಶುರುವಾದ ಈ ಶೋದಲ್ಲಿ ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಹಾಗೂ ಹಾಸ್ಯ ನಟ ಕೋಮಲ್ ಕುಮಾರ್‌ ತೀರ್ಪುಗಾರರಾಗಿದ್ದಾರೆ . ಈ ಶೋದಲ್ಲಿ ಹೆಚ್ಚು ಸುದ್ದಿಯಾದವರು, ಬ್ರಹ್ಮಾವರದ ದೀಕ್ಷಾ. ಕಾರಣ; ಈ ಶೋಗೆ ಅವರು ಸರ್ಕಾರಿ ಕೆಲಸವನ್ನೇ ಬಿಟ್ಟು ಬಂದಿದ್ದರು. ಸರ್ಕಾರಿ ಕೆಲಸ ಬಿಟ್ಟು ಕಾಮಿಡಿ ಮಾಡಲು ಮುಂದೆ ಬಂದ ದೀಕ್ಷಾಗೆ ಟೀಕೆಗಳೇ ಹೆಚ್ಚಾಗಿದ್ದವು.

ಪ್ರೇಮಿಗಳ ದಿನದಂದು ರಾಮ್‌ನಿಗೆ ಸೀತಾ ಪ್ರಪೋಸ್‌: ಅರೆರೆ... ಪ್ರಾರ್ಥನಾ ಕಥೆ ಏನು ಕೇಳಿದ ಫ್ಯಾನ್ಸ್!

ಕುಂದಾಪುರದ ಬ್ರಹ್ಮಾವರ ಮೂಲದ ದೀಕ್ಷಾ ವೃತ್ತಿಯಲ್ಲಿ ಸರ್ಕಾರಿ ವಿಜ್ಞಾನ ಶಿಕ್ಷಕಿ. ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದು ಬಿಎಡ್‌ ಮುಗಿಸಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದರು. ಕಮ್ಮಾಜೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಪಾಠದ ಜತೆಗೆ ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದ ದೀಕ್ಷಾ, 70ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕಾಮಿಡಿ ರೀಲ್ಸ್‌ ಮಾಡುತ್ತ ಫೇಮಸ್‌ ಆಗಿದ್ದಾರೆ. ಇದೀಗ ಇದೇ ದೀಕ್ಷಾ ಕೈಯಲ್ಲಿನ ಸರ್ಕಾರಿ ನೌಕರಿ ಬಿಟ್ಟು ಗಿಚ್ಚಿ ಗಿಲಿಗಿಲಿ ಶೋಗೆ ಎಂಟ್ರಿಕೊಟ್ಟಿದ್ದರು.

ದೀಕ್ಷಾ ಹೀಗೆ ಸರ್ಕಾರಿ ಕೆಲಸ ಬಿಟ್ಟು ಗಿಚ್ಚಿ ಗಿಲಿಗಿಲಿ ಶೋದಲ್ಲಿ ಸ್ಪರ್ಧಿಯಾಗಿ ಕಣಕ್ಕಿಳಿಯುತ್ತಿದ್ದಂತೆ, ಅವರ ಸೋಷಿಯಲ್‌ ಮೀಡಿಯಾ ಪುಟಗಳಲ್ಲಿ ನೆಗೆಟಿವ್‌ ಕಾಮೆಂಟ್‌ಗಳ ರಾಶಿಯೇ ಹರಿದು ಬಂದಿತ್ತು. ಸರ್ಕಾರಿ ಕೆಲಸ ಬಿಡಬಾರದಿತ್ತು. ಈ ಕೆಲಸ ಬಿಟ್ಟರೆ ಮುಂದೆ ಭಿಕ್ಷೆ ಬೇಡಬೇಕಾಗುತ್ತದೆ ಎಂದೆಲ್ಲ ಜನ ಟೀಕೆ ಮಾಡಿದ್ದರು. ಇದೆಲ್ಲವನ್ನು ಕಂಡು ಕೊಂಚ ಕುಗ್ಗಿದ್ದರು ದೀಕ್ಷಾ. ಆದರೆ, ಹಾಗೇ ಟೀಕಿಸಿದವರಿಗೆ ಇದೀಗ ತಮ್ಮ ಫರ್ಫಾಮನ್ಸ್‌ ಮೂಲಕವೇ ತಿರುಗೇಟು ನೀಡಿದ್ದಾರೆ. ಮೊದಲ ವಾರದ ಬೆಸ್ಟ್‌ ಫರ್ಫಾಮರ್‌ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. 10 ಸಾವಿರ ರೂ. ಬಹುಮಾನವನ್ನೂ ಪಡೆದುಕೊಂಡಿದ್ದಾರೆ.

ಮಕ್ಕಳಿಗೆ ಬೇಕಾಗಿದ್ದು ಅಪ್ಪ-ಅಮ್ಮ ಕೊಡಿಸೋ ದುಬಾರಿ ಗಿಫ್ಟಾ ಅಥ್ವಾ ಪ್ರೀತಿನಾ? ಪೇಚಿನಲ್ಲಿ ತಾಂಡವ್‌...

'ಸರ್ಕಾರಿ ಕೆಲಸ ಬಿಟ್ಟು ಬಂದಿ, ಗಿಚ್ಚಿ ಗಿಲಿಗಿಲಿ ಶೋಗೆ ಹೋಗಿದ್ದಿ. ಮುಂದೆ ನೀನು ಭಿಕ್ಷೆ ಬೇಡಬೇಕಾಗುತ್ತೆ ಎಂದೆಲ್ಲ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಸಾಕಷ್ಟು ಮಂದಿ ಏನೆನೋ ಬರೆದಿದ್ರು. ಅದೆಲ್ಲವನ್ನು ನೋಡಿ ಬೇಜಾರಲ್ಲಿದ್ದೆ. ಇದೀಗ ಈ ಶೋನ ಮೊದಲ ವಾರದಲ್ಲಿಯೇ ಬೆಸ್ಟ್‌ ಫರ್ಫಾಮರ್‌ ಪ್ರಶಸ್ತಿ ಸಿಕ್ಕಿದ್ದು ನನಗೆ ನಂಬೋಕೆ ಆಗ್ತಿಲ್ಲ. ಅಂದ್ರೆ ಜಾಬ್‌ ಬಿಟ್ಟಿದ್ದಕ್ಕೆ ಬಹಳಷ್ಟು ಜನ ಟೀಕೆ ಮಾಡುತ್ತಿದ್ದಾರೆ. ಮತ್ತೆ ಜಾಬ್‌ಗೆ ಜಾಯಿನ್‌ ಆಗು ಅಂತಿದ್ದಾರೆ. ಇದೀಗ ಸಿಕ್ಕ ಪ್ರಶಸ್ತಿ ನೋಡಿದರೆ ನನಗೆ ಸರ್ಪ್ರೈಸ್‌ ಅನಿಸುತ್ತಿದೆ. ಮೆಂಟರ್‌ ಚಿಲ್ಲರ್‌ ಮಂಜು, ಮಾನಸಾ ಅವರ ಬಳಿ ಹೇಳಿಕೊಂಡಿದ್ದೆ. ಮಾತನಾಡುವವರು ಮಾತಾಡ್ತಾರೆ, ನಾವು ಸುಮ್ನೆ ಹೋಗ್ತಾ ಇರಬೇಕು.'

ಪ್ರಶಸ್ತಿ ಸ್ವೀಕರಿಸಿ ದೀಕ್ಷಾ ಹೀಗೆ ಮಾತನಾಡಿದಾಗ ಅವರ ಧ್ವನಿಯಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಆಸಕ್ತಿ, ಅಭಿರುಚಿಗಳಿರುವ ಕ್ಷೇತ್ರದಲ್ಲಿ ಮುಂದುವರಿದರೇ ಗೆಲವು ಎಂಬುದನ್ನು ಈ ಮೂಲಕ ದೀಕ್ಷಾ ತೋರಿಸಿಕೊಟ್ಟಿದ್ದಾರೆ. ಮೊನ್ನೆ ಮೊನ್ನೆ ಕಾಲೆಳೆದ ಮಂದಿ ಈಗ ಅನಿವಾರ್ಯವಾಗಿ ಚಪ್ಪಾಳೆ ತಟ್ಟುತ್ತಿದ್ದಾರೆ.

click me!