ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ತಾಂಡವ್ ನಿಜಕ್ಕೂ ಬದಲಾಗಿ ಬಿಟ್ನಾ? ಪತ್ನಿ ಭಾಗ್ಯಳನ್ನು ಇಷ್ಟು ಪ್ರೀತಿಯಿಂದ ನೋಡೋಕೆ ಸಾಧ್ಯನಾ?
ಪತಿ-ಪತ್ನಿಯ ಸಂಬಂಧ ತುಂಬಾ ನಾಜೂಕಿನದ್ದು. ಅಲ್ಲಿ ಪ್ರೀತಿ ಇದ್ದರೇನೇ ಚೆನ್ನ. ಮಕ್ಕಳು ಕೂಡ ಅದನ್ನೇ ಬಯಸುವುದು. ಅಪ್ಪ-ಅಮ್ಮನು ಒಟ್ಟಿಗೇ ಖುಷಿಯಾಗಿ ಇರಲಿ ಎಂದೇ ಅಂದುಕೊಳ್ಳುತ್ತಾರೆ. ಆದರೆ ಎಲ್ಲರ ಬದುಕಿನಲ್ಲಿಯೂ ಹೀಗೆಯೇ ಆಗುತ್ತದೆ ಎಂದೇನೂ ಇಲ್ಲವಲ್ಲ. ಅದರಲ್ಲಿಯೂ ಪತಿ-ಪತ್ನಿ ನಡುವೆ ಇನ್ನೊಬ್ಬಳ ಎಂಟ್ರಿ ಆದರೆ ಮುಗಿದೇ ಹೋಯ್ತು. ಬಹುತೇಕ ಸೀರಿಯಲ್ ಕಥೆಗಳೂ ಇದೇ ಆಗಿರುತ್ತವೆ. ಅದೇ ರೀತಿ ಡಿಫರೆಂಟ್ ಕಥಾಹಂದರ ಹೊಂದಿದ್ದರೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿಯೂ ದಂಪತಿ ನಡುವೆ ಇನ್ನೊಬ್ಬಳ ಎಂಟ್ರಿಯಿಂದ ಅಲ್ಲೋಲ ಕಲ್ಲೋಲ ಆಗಿದೆ. ಭಾಗ್ಯಳ ಪಾಲಿಗೆ ಸಂಸಾರ ನುಂಗಲಾರದ ತುತ್ತಾಗಿದ್ದರೂ ಅದನ್ನು ತೋರಿಸಿಕೊಳ್ಳುತ್ತಿಲ್ಲ. ಅತ್ತ ಹೀರೋ ಲವರ್ ಶ್ರೇಷ್ಠಾಳ ಕೈಗೆ ಸಿಕ್ಕು ನಜ್ಜುಗುಜ್ಜಾಗಿದ್ದಾನೆ.
ಆದರೆ ಈಗ ತಾಂಡವ್ ಬದಲಾಗಿಬಿಟ್ಟಿದ್ದಾನೆ! ಪತ್ನಿಯನ್ನು ಡಿನ್ನರ್ಗೆ ಕರೆದುಕೊಂಡು ಹೋಗುತ್ತಿದ್ದಾನೆ. ಮಕ್ಕಳಿಬ್ಬರನ್ನೂ ಕಾರಿನ ಹಿಂದುಗಡೆ ಕುಳ್ಳರಿಸಿ ಪತ್ನಿಯನ್ನು ಪಕ್ಕಕ್ಕೆ ಕುಳ್ಳರಿಸಿದ್ದಾನೆ. ಆಕೆಯ ಹೆಗಲ ಮೇಲೆ ಕೈಹಾಕಿದ್ದಾನೆ. ಭಾಗ್ಯಳ ಮುಖದಲ್ಲಿ ಹಿಂದೆಂದೂ ಕಾಣದ ಖುಷಿಯಿದೆ. ಕಾರಿನಲ್ಲಿ ಅಕ್ಕ-ಪಕ್ಕ ಕುಳಿತ ಭಾಗ್ಯಳ ಮೊಗದಲ್ಲಿ ಗೆಲುವಿದೆ. ಬದಲಾಗಿರುವ ತಾಂಡವ್ ಮುಖದಲ್ಲಿ ಮಂದಹಾಸವಿದೆ... ಆದರೆ...? ಧಾರಾವಾಹಿಗಳ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದಾಗ ಅದರಲ್ಲಿ ಬರುವ ಕಮೆಂಟ್ಸ್ ನೋಡಿದರೆ, ಕೆಲವು ವೀಕ್ಷಕರು ಆ ಧಾರಾವಾಹಿಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಎನ್ನುವುದು ತಿಳಿಯುತ್ತದೆ. ಧಾರಾವಾಹಿಯಲ್ಲಿನ ಪಾತ್ರಗಳು ಕೇವಲ ಪಾತ್ರಗಳು ಮಾತ್ರ ಎನ್ನುವುದನ್ನೇ ಮರೆತು ಕಮೆಂಟ್ ಮಾಡುತ್ತಾರೆ. ಇದೀಗ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗುವ ಭಾಗ್ಯಲಕ್ಷ್ಮಿ ಸೀರಿಯಲ್ ಕೂಡ ಜನರಿಗೆ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದೆ ಎನ್ನುವುದಕ್ಕೆ ಇದಕ್ಕೆ ಬರುತ್ತಿರುವ ಥಹರೇವಾರಿ ಕಮೆಂಟ್ಗಳೇ ಸಾಕ್ಷಿ.
ಛೀ ಹೀಗೆಲ್ಲಾ ಹೇಳ್ಬೇಡಿಯಪ್ಪ... ನಾಚಿಕೆ ಆಗತ್ತೆ ಎಂದ 'ಕೆಂಡಸಂಪಿಗೆ' ತೀರ್ಥಂಕರ: ನೇರಪ್ರಸಾರದಲ್ಲಿ ನಟ
ತಾಂಡವ್ ಬದಲಾಗಲು ಸಾಧ್ಯವೇ ಇಲ್ಲ ಅನ್ನುತ್ತಿದ್ದಾರೆ ಕಮೆಂಟಿಗರು. ಈಗ ಒಂದು ವೇಳೆ ತಾಂಡವ್ ಬದಲಾದರೂ ಶ್ರೇಷ್ಠಾ ಇವರಿಬ್ಬರನ್ನೂ ಒಟ್ಟಿಗೇ ಇರಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ತಾಂಡವ್ ಭಾಗ್ಯಲಕ್ಷ್ಮಿಯನ್ನು ಒಪ್ಪಿಕೊಂಡರೆ ನಮಗೂ ಖುಷಿನೇ. ಆದರೆ ಇದು ಅಸಾಧ್ಯವಾಗಿರುವ ಮಾತು ಎಂದು ಕೆಲವರು ಹೇಳುತ್ತಿದ್ದರೆ, ಒಂದು ವೇಳೆ ಆತ ಪತ್ನಿಯನ್ನು ಒಪ್ಪಿಕೊಂಡು ಬಿಟ್ಟರೆ ಇವತ್ತೇ ಧಾರಾವಾಹಿಯನ್ನು ಮುಗಿಸಬೇಕಾಗುತ್ತದೆ, ಮತ್ತೇನೂ ಕಥೆ ಇಲ್ವಲ್ಲಾ ಅಂತನೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದಂಪತಿ ಒಟ್ಟಿಗೆ ಇರುವುದು ಸಾಧ್ಯವೇ ಇಲ್ಲ ಎನ್ನುವುದು ವೀಕ್ಷಕರ ಮಾತು. ಅಷ್ಟಕ್ಕೂ ಅವರು ಹೇಳುತ್ತಿರುವುದೂ ನಿಜನೇ. ಏಕೆಂದರೆ ಈ ರೀತಿಯ ದೃಶ್ಯವನ್ನು ಕಲ್ಪನೆ ಮಾಡಿಕೊಳ್ತಿರೋನು ಭಾಗ್ಯ-ತಾಂಡವ್ ಮಗ ಗುಂಡ. ತನ್ನ ಅಪ್ಪ-ಅಮ್ಮ ಹೀಗೆ ಡಿನ್ನರ್ಗೆ ಕರೆದುಕೊಂಡು ಹೋದರೆ ಎಷ್ಟು ಚೆಂದ ಎಂದು ಕನಸು ಕಾಣುತ್ತಿದ್ದಾನೆ.
ಅಷ್ಟಕ್ಕೂ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ ಚಿಕ್ಕದಾಗಿ ಹೇಳುವುದಾದರೆ, ಹೆಚ್ಚು ಓದಿಲ್ಲದ ಭಾಗ್ಯಾ ಸಂಸ್ಕಾರ ಇರೋ ಹೆಣ್ಣು ಮಗಳು. ಸಿರಿವಂತ ತಾಂಡವ್ನನ್ನು ಮದುವೆಯಾಗಿದ್ದಾಳೆ. ಆದರೆ, ಅವನಿಗೋ ಇವಳ ಕಂಡ್ರೆ ತಾತ್ಸಾರ. ಭಾಗ್ಯಾಳ ವ್ಯಕ್ತಿತ್ವಕ್ಕೆ ಬೆಲೆ ಕೊಡೋ ಅತ್ತೆ ಇವಳನ್ನು ಓದಿಸಬೇಕು ಅಂತ ಮುಂದಾಗಿದ್ದಾಳೆ. ಅದಕ್ಕೆ ಕಲ್ಲು ಹಾಕಲು ತಾಂಡವ್ ಶತಯಾ ಗತಾಯ ಯತ್ನಿಸುತ್ತಿದ್ದು, ಅತ್ತೆ-ಸೊಸೆಗೆ ಜಗಳ ತಂದಿಡಲು ಹತ್ತು ಹಲವು ಪ್ಲ್ಯಾನ್ ಮಾಡುತ್ತಿದ್ದಾನೆ. ಇದರ ಬೆನ್ನಲ್ಲೇ ಇನ್ನೊಬ್ಬಳನ್ನು ಈತ ಪ್ರೀತಿಸುತ್ತಿದ್ದು, ಅದರ ಬಣ್ಣವೀಗ ಬಯಲಾಗಿದೆ. ಇದೇ ಕಾರಣಕ್ಕೆ ತಾಂಡವ್ನನ್ನು ಕಂಡರೆ ವೀಕ್ಷಕರೂ ಕುದಿಯುತ್ತಿದ್ದಾರೆ. ಭಾಗ್ಯಳಂಥ ಹೆಂಡತಿಯನ್ನು ಪಡೆದು ಬೇರೊಬ್ಬಳ ಹಿಂದೆ ಬಿದ್ದಿರುವುದನ್ನು ಪ್ರೇಕ್ಷಕರು ಸಹಿಸುತ್ತಿಲ್ಲ.
ತೆಲಗು ಬಿಗ್ಬಾಸ್ನಲ್ಲಿ ಕನ್ನಡದ ತಾರೆಯರು! ಕನ್ನಡ ಮಾತು ಕೇಳಿ ಪುಳಕಗೊಂಡ ಕರುನಾಡ ಜನ