
ಬಿಗ್ಬಾಸ್ ಸೀಸನ್ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್ ಹೊರಕ್ಕೆ ಬರಲಿಲ್ಲ. ಈ ರಿಯಾಲಿಟಿ ಷೋ ಪುಟ್ಟ ಮಕ್ಕಳಿಗೂ ಇಷ್ಟವಾಗಿದೆ. ಇದೇ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಅದರಲ್ಲಿಯೂ ಬಿಗ್ಬಾಸ್ ವಿನ್ನರ್ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ. ಅದೇ ರೀತಿ ಇದೀಗ ಬಿಗ್ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಅವರು ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಆರಂಭದಲ್ಲಿ ಬಿಗ್ಬಾಸ್ ಅನ್ನು ಒಪ್ಪಿಕೊಳ್ಳದೇ ಕೊನೆಕ್ಷಣದಲ್ಲಿ ಒಪ್ಪಿಕೊಂಡು ಹೋಗಿದ್ದ ಕಾರ್ತಿಕ್ ಅವರಿಗೆ ಈ ಗೆಲುವು ವಿಶೇಷ ಅನುಭವವನ್ನೂ ನೀಡಿದೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್ಸ್ಟಾರ್ ವೇದಿಕೆಯಲ್ಲಿ ಕಾರ್ತಿಕ್ ಅವರು ಅಮ್ಮ ಮೀನಾಕ್ಷಿಯವರ ಜೊತೆ ಗೆಸ್ಟ್ ಆಗಿ ಬಂದಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ನಿರೂಪಕಿ ಸುಷ್ಮಾ ಅವರು ಇದಾಗಲೇ ಹಲವು ಬಾರಿ ಕಾರ್ತಿಕ್ ಅವರ ಕಾಲೆಳೆದಿದ್ದಾರೆ. ಅಮ್ಮನಿಗೆ ಕಾರ್ತಿಕ್ ಅವರ ಕುರಿತು ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ತಿಕ್ ಬಗ್ಗೆ ಹಲವು ವಿಷಯಗಳನ್ನು ಅವರು ಕೆದಕಿದ್ದಾರೆ. ಇದೀಗ ಮಕ್ಕಳು ಕೂಡ ಕಾರ್ತಿಕ್ ಅವರಿಗೆ ಕೆಲವೊಂದು ಪ್ರಶ್ನೆ ಕೇಳುವ ಮೂಲಕ, ಕಾರ್ತಿಕ್ ಅವರನ್ನು ಪೆಚ್ಚು ಮಾಡಿದ್ದಾರೆ, ಬೇಸ್ತು ಬೀಳಿಸಿದ್ದಾರೆ. ಕೆಲವೊಂದು ಪರ್ಸನಲ್ ಪ್ರಶ್ನೆಗಳನ್ನು ಕೇಳಿದರೆ, ಇನ್ನೊಂದಿಷ್ಟು ಬಿಗ್ಬಾಸ್ನ ಪ್ರಶ್ನೆ ಕೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ. ಈ ಮಕ್ಕಳನ್ನು ಜರ್ನಲಿಸ್ಟ್ ಎಂದು ಕರೆಯಲಾಗಿದ್ದು, ಅವರಿಗೆ ಪ್ರಶ್ನೆ ಕೇಳಲು ಬಿಡಲಾಗಿದೆ.
ಕಾರ್ತಿಕ್ ಲೈಫ್ ಪಾರ್ಟನರ್ ಇವ್ರೇನಾ? 'ಎಸ್' ಎಂದ ಅಮ್ಮ! ಕುಣಿದು ಕುಪ್ಪಳಿಸ್ತಿರೋ ಫ್ಯಾನ್ಸ್
ಮೊದಲಿಗೆ ಪುಟಾಣಿಯೊಬ್ಬಳು ಬಿಗ್ಬಾಸ್ ಮನೆಯಲ್ಲಿ ಡೇಲಿ ಮೇಕಪ್ ಮಾಡೋಕೆ ಬಿಡ್ತಾರಾ ಎಂದು ಕೇಳಿದ್ದಾಳೆ. ಅದಕ್ಕೆ ಕಾರ್ತಿಕ್ ಮಾಡಬಹುದು ಎಂದಾಗ, ಪುಟಾಣಿ ಹಾಗಿದ್ರೆ ನಾನು ದೊಡ್ಡವಳಾದ ಮೇಲೆ ಬಿಗ್ಬಾಸ್ಗೆ ಹೋಗತೀನಿ ಎನ್ನುವ ಮೂಲಕ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾಳೆ. ನಂತರ ಕಾರ್ತಿಕ್ ಅವರು ತಮ್ಮ ತಂಗಿಯ ಪಾಪುಗೆ ಏನು ಹೆಸರಿಟ್ಟಿದ್ದಾರೆ ಎಂದು ಇನ್ನೋರ್ವ ಪುಟಾಣಿ ಕೇಳಿದ್ದಾನೆ. ಇನ್ನೂ ಹೆಸರು ಇಡಲಿಲ್ಲ, 9 ತಿಂಗಳಿಗೆ ಇಡೋದು ಎಂದಾಗ ನನ್ನ ಹೆಸರು ವಿಯಾನ್, ಅದನ್ನೇ ಇಟ್ಟುಬಿಡಿ ಎಂದಿದ್ದಾನೆ.
ನಂತರ ಇನ್ನೋರ್ವ ಬಾಲಕ, ಬ್ರೋ ನಿಮಗೆ ಅಪ್ಪ ಇಷ್ಟನೋ, ಅಮ್ಮ ಇಷ್ಟನೋ ಎಂದು ಕೇಳಿದ್ದಾನೆ. ಆಗ ಕಾರ್ತಿಕ್ ಇಬ್ಬರೂ ಇಷ್ಟನೇ. ಆದ್ರೆ ಈಗ ನನ್ನಮ್ಮ ಸೂಪರ್ಸ್ಟಾರ್ಗೆ ಬಂದಿರುವ ಕಾರಣ ಅಮ್ಮ ಇಷ್ಟ ಎಂದಿದ್ದಾರೆ. ಇನ್ನೋರ್ವ ಬಾಲಕ, ನೀವು ಯಾವಾಗಾದ್ರೂ ನಿಮ್ಮಮ್ಮಂಗೆ ಸುಳ್ಳು ಹೇಳಿದ್ರಾ ಎಂದಾಗ ಬೇಸ್ತು ಬಿದ್ದ ಕಾರ್ತಿಕ್, ಹೀಗೆಲ್ಲಾ ಪ್ರಶ್ನೆ ಕೇಳಬಾರದು ಎಂದು ಜೋರಾಗಿ ನಕ್ಕಿದ್ದಾರೆ. ಆಗ ಅವರ ಅಮ್ಮ ಮೀನಾಕ್ಷಿ ಅವರೂ ಜೋರಾಗಿ ನಕ್ಕಿದ್ದಾರೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಇನ್ನೋರ್ವ ಬಾಲಕಿ ಎದ್ದು ನಿಂತು ಸಂಗೀತಾ ಅವರ ಪ್ರಶ್ನೆ ಕೇಳಿ ಕಾರ್ತಿಕ್ ಅವರನ್ನು ಗೊಂದಲಕ್ಕೆ ಸಿಲುಕಿಸಿದಳು. ಸಂಗೀತಾ ನಿಮಗೆ ಫ್ರೆಂಡಾ ಅಥ್ವಾ ಎನಿಮಿನಾ ಎಂದು ಕೇಳಿದ್ದಾಳೆ. ಇದನ್ನು ಕೇಳಿ ಕಾರ್ತಿಕ್ ಸುಸ್ತಾಗಿ ಹೋಗಿದ್ದಾರೆ. ಅವರು ಏನು ಉತ್ತರ ಹೇಳಿದ್ದಾರೆ ಎನ್ನುವುದನ್ನು ಷೋ ನೋಡಿಯೇ ತಿಳಿಯಬೇಕು. ಅಷ್ಟಕ್ಕೂ ಬಿಗ್ಬಾಸ್ನಲ್ಲಿ ವಿನಯ್ ಮತ್ತು ಸಂಗೀತಾ ಸಂಬಂಧ ಬಿಗ್ಬಾಸ್ ಪ್ರೇಮಿಗಳಿಗೆ ತಿಳಿದದ್ದೇ. ಕಾರ್ತಿಕ್ ಅವರ ಲೈಫ್ ಪಾರ್ಟನರ್ ಬಿಗ್ಬಾಸ್-10ನಲ್ಲೇ ಇದ್ದಾರೆಯೇ ಎಂದು ನಿರೂಪಕಿ ಸುಷ್ಮಾ ಈ ಮೊದಲು ಕಾರ್ತಿಕ್ ಅಮ್ಮ ಅವರಿಗೆ ಕೇಳಿದಾಗ ಅವರು ಎಸ್ ಎನ್ನುವ ಬೋರ್ಡ್ ತೋರಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.